ADVERTISEMENT

ಅಯ್ಯಪ್ಪ ಉತ್ಸವಕ್ಕೆ ಶ್ರದ್ಧಾಭಕ್ತಿಯ ತೆರೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 14:07 IST
Last Updated 2 ಜನವರಿ 2020, 14:07 IST
ವಿರಾಜಪೇಟೆಯ ಅಯ್ಯಪ್ಪ ದೇವಾಲಯದ ವಾರ್ಷಿಕ ಉತ್ಸವದ ಅಂಗವಾಗಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಾಲಯದಲ್ಲಿ ಏರ್ಪಡಿಸಲಾಗಿತ್ತು
ವಿರಾಜಪೇಟೆಯ ಅಯ್ಯಪ್ಪ ದೇವಾಲಯದ ವಾರ್ಷಿಕ ಉತ್ಸವದ ಅಂಗವಾಗಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಾಲಯದಲ್ಲಿ ಏರ್ಪಡಿಸಲಾಗಿತ್ತು   

ವಿರಾಜಪೇಟೆ: ಪಟ್ಟಣದ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಾಲಯದ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಬುಧವಾರ ತೆರೆಕಂಡಿತು.

ದೇವಾಲಯದ ಟ್ರಸ್ಟ್‌ನಿಂದ ಕಳೆದ 50 ವರ್ಷದಿಂದ ನಡೆಯುತ್ತಿರುವ ಉತ್ಸವದ ಅಂಗವಾಗಿ ರಾತ್ರಿ ನಡೆದ ಮೆರವಣಿಗೆಯು ಪ್ರತಿವರ್ಷದಂತೆ ಈ ಬಾರಿಯು ಆಕರ್ಷಕವಾಗಿತ್ತು.

ಅಯ್ಯಪ್ಪ ಉತ್ಸವದ ಅಂಗವಾಗಿ ಬೆಳಗ್ಗೆ 5:30ಕ್ಕೆ ಗಣಪತಿ ಹೋಮ, 9 ಕ್ಕೆ ತುಲಾಭಾರ, 10:30ಕ್ಕೆ ಲಕ್ಷಾರ್ಚನೆ ಸೇರಿದಂತೆ ವಿವಿಧ ಅಭಿಷೇಕಗಳು ಜರುಗಿದವು. ಮಧ್ಯಾಹ್ನ 12:55ಕ್ಕೆ ನಡೆದ ಮಹಾಪೂಜೆಯ ಬಳಿಕ 3:30 ರವರೆಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಪ್ರತಿವರ್ಷದಂತೆ ಈ ಬಾರಿಯೂ ಡಿ.30 ರಂದು ಉತ್ಸವಕ್ಕೆ ಚಾಲನೆ ನೀಡಲಾಗಿತ್ತು.

ADVERTISEMENT

ಉತ್ಸವದ ಪ್ರಮುಖ ಆಕರ್ಷಣೆಯಾದ ಮೆರವಣಿಗೆಯು ರಾತ್ರಿ 7ಕ್ಕೆ ಆರಂಭಗೊಂಡಿತು. ಉತ್ಸವ ಮೂರ್ತಿಯೊಂದಿಗೆ ಸಾಗಿದ ಮೆರವಣಿಗೆಯ ಮುಂಭಾಗದಲ್ಲಿ ದೀಪಾರತಿ ತಟ್ಟೆಯನ್ನು ಹಿಡಿದ ಬಾಲಕಿಯರು ಹಾಗೂ ಹೆಂಗಳೆಯರು ಸಾಗುತ್ತಿದ್ದರು.

ವಿದ್ಯುತ್ ಅಲಂಕೃತ ಮಂಟಪದಲ್ಲಿ ಚಲನ ವಲನಗಳಿರುವ ಅಯ್ಯಪ್ಪನ ವಿಗ್ರಹ, ಮೈಸೂರು ಬ್ಯಾಂಡ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗ, ಕೇರಳದ ಚಂಡೆ ವಾದ್ಯ ಸೇರಿದಂತೆ ವಿವಿಧ ಮನೋರಂಜನಾ ತಂಡಗಳು ಆಕರ್ಷಕ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಮೆರವಣಿಗೆಯು ಮಲೆತಿರಿಕೆ ಬೆಟ್ಟದ ಅಯ್ಯಪ್ಪ ದೇವಾಲಯದಿಂದ ಹೊರಟು ತೆಲುಗರ ಬೀದಿ, ಜೈನರಬೀದಿ, ಎಫ್ಎಂಸಿ ರಸ್ತೆ, ಮುಖ್ಯ ರಸ್ತೆಯ ಮಾರ್ಗವಾಗಿ ಮಲಬಾರ್ ರಸ್ತೆಯಲ್ಲಿರುವ ಮುತ್ತಪ್ಪ ದೇವಾಲಯವನ್ನು ತಲುಪಿ ಪೂಜೆಯನ್ನು ಸಲ್ಲಿಸಿ ಮಧ್ಯರಾತ್ರಿಯ ಸಮಯಕ್ಕೆ ದೇವಾಲಯಕ್ಕೆ ಹಿಂದಿರುಗಿತು. ದೇವಾಲಯದಲ್ಲಿ ಸುಬ್ರಮಣ್ಯ ದೇವರಿಗೆ ಪೂಜೆ ಸಲ್ಲಿಸುವುದರ ಮುಖಾಂತರ ಉತ್ಸವಕ್ಕೆ ತೆರೆ ಎಳೆಯಲಾಯಿತು. ಮೆರವಣಿಗೆಯ ಸಂದರ್ಭದಲ್ಲಿ ಉತ್ಸವ ಮೂರ್ತಿಗೆ ದಾರಿಯುದ್ದಕ್ಕೂ ಭಕ್ತಾದಿಗಳು ಇಡುಗಾಯಿ ಹೊಡೆದರೆ, ಮುತ್ತೈದೆಯರು ಪೂಜೆ ಸಲ್ಲಿಸುತ್ತಿದ್ದದ್ದು ಕಂಡು ಬಂತು.

ಅಯ್ಯಪ್ಪ ಸೇವಾ ಟ್ರಸ್ಟ್ ಸಮಿತಿಯ ಅಧ್ಯಕ್ಷ ಎಂ.ಕೆ.ಪೂವಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಎಸ್.ಶ್ಯಾಮ್ಕುಮಾರ್, ಕಾರ್ಯದರ್ಶಿ ಡಿ.ಎಂ.ರಾಜ್ಕುಮಾರ್, ಪದಾಧಿಕಾರಿಗಳಾದ ಪಿ.ಕೆ.ಪ್ರದ್ಯುಮ್ನ, ಬಿ.ಕೆ.ಚಂದ್ರು, ಎ.ಆರ್.ಯೋಗಾನಂದ ರಾವ್, ಮುಕ್ಕಾಟೀರ ಪೊನ್ನಪ್ಪ, ಎ.ಎನ್.ದಶರಥ ಈ ಸಂದರ್ಭ ಇದ್ದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ಜಯಕುಮಾರ್, ಸಿಪಿಐ ಕ್ಯಾತೆಗೌಡ ಅವರ ನೇತೃತ್ವದಲ್ಲಿ ಎಸ್ಐ ಮರಿಸ್ವಾಮಿ ಹಾಗೂ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.