ADVERTISEMENT

ಪೊನ್ನಂಪೇಟೆ: ತಾಯಿ ಮಡಿಲು ಸೇರಿಸಿದ ಅಧಿಕಾರಿಗಳು

ಕಾಫಿ ತೋಟದ ಹಳ್ಳದಲ್ಲಿ ಸಿಲುಕಿದ್ದ ಕಾಡಾನೆ ಮರಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 13:27 IST
Last Updated 23 ಜುಲೈ 2020, 13:27 IST
ಕಾಫಿ ತೋಟದ ಹಳ್ಳವೊಂದರಲ್ಲಿ ಸಿಲುಕಿಕೊಂಡಿದ್ದ ಕಾಡಾನೆ ಮರಿ
ಕಾಫಿ ತೋಟದ ಹಳ್ಳವೊಂದರಲ್ಲಿ ಸಿಲುಕಿಕೊಂಡಿದ್ದ ಕಾಡಾನೆ ಮರಿ   

ಪೊನ್ನಂಪೇಟೆ: ಕಾಫಿ ತೋಟದ ಹಳ್ಳದಲ್ಲಿ ಸಿಲುಕಿಕೊಂಡಿದ್ದ ಕಾಡಾನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ತಾಯಿಯೊಂದಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮರಿ ಜನಿಸಿ ಕೇವಲ ಒಂದು ದಿನವಾಗಿತ್ತು.

ಕುಟ್ಟ ಸಮೀಪದ ತೈಲ ಗ್ರಾಮದ ತೀತೀರ ವಾಸು ಎಂಬುವವರ ತೋಟದಲ್ಲಿ ಕಾಡಾನೆಯೊಂದು ಮರಿಗೆ ಜನ್ಮ ನೀಡಿ ಹಳ್ಳದಿಂದ ತನ್ನೊಂದಿಗೆ ಕರೆದೊಯ್ಯಲು ಸಾಧ್ಯವಾಗದೆ ತೋಟದಲ್ಲಿಯೇ ಬಿಟ್ಟು ಹಿಂಡಿನೊಂದಿಗೆ ಕಾಡಿನಲ್ಲಿ ಸೇರಿಕೊಂಡಿತ್ತು.
ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಬಂದ ಶ್ರೀಮಂಗಲ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಮರಿಯಾನೆಯನ್ನು ಹಳ್ಳದಿಂದ ರಕ್ಷಿಸಿ, ಕಾಡಿನಲ್ಲಿ ಸೇರಿಕೊಂಡಿದ್ದ ತಾಯಿ ಆನೆಯನ್ನು ಗುರುತಿಸಿ ಮರಿಯನ್ನು ಒಂದುಗೂಡಿಸಿರುವ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಕಾಡಿನ ಅಂಚಿನಲ್ಲಿದ್ದ ತೋಟದಿಂದ ಸುಮಾರು 3 ಕಿ.ಮೀ ದೂರವಿದ್ದ ಬ್ರಹ್ಮಗಿರಿ ವನ್ಯಜೀವಿ ವಿಭಾಗದ ಅರಣ್ಯದಲ್ಲಿ ತಾಯಿಯನ್ನು ಗುರುತಿಸಿದರು.

ADVERTISEMENT

ಇದಕ್ಕೂ ಮೊದಲು ಅರಣ್ಯದಲ್ಲಿ ಕಾಡಾನೆಗಳ ಹಿಂಡನ್ನು ಪತ್ತೆ ಹಚ್ಚುವ ಮೂಲಕ ಜನ್ಮ ನೀಡಿರುವ ಹೆಣ್ಣಾನೆ ಇದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಮರಿಯನ್ನು ತಾಯಿಯೊಂದಿಗೆ ಸೇರಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಮುಂಚಿತವಾಗಿ ತೋಟದಲ್ಲಿ ಪತ್ತೆಯಾದ ಕಾಡಾನೆ ಮರಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಕಾರ್ಯಾಚರಣೆ ನಡೆಸಿದರು. ಮರಿ ಆರೋಗ್ಯವಾಗಿದೆ ಎಂದು ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.