ADVERTISEMENT

ವಿರಾಜಪೇಟೆ: ಇಂದು ಬೈತೂರು ಉತ್ಸವ

ಕೊಡಗು-ಕೇರಳ ನಡುವಿನ ಧಾರ್ಮಿಕ ಸಂಬಂಧಕ್ಕೆ ಸಾಕ್ಷಿಯಾಗಿರುವ ದೊಡ್ಡಹಬ್ಬ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:47 IST
Last Updated 24 ಜನವರಿ 2026, 6:47 IST
ವಿರಾಜಪೇಟೆಯಲ್ಲಿ ಬೈತೂರು ಉತ್ಸವದ ಅಂಗವಾಗಿ ಎತ್ತ್ ಪೋರಾಟ್ ನಡೆಯಿತು
ವಿರಾಜಪೇಟೆಯಲ್ಲಿ ಬೈತೂರು ಉತ್ಸವದ ಅಂಗವಾಗಿ ಎತ್ತ್ ಪೋರಾಟ್ ನಡೆಯಿತು   

ವಿರಾಜಪೇಟೆ: ಸಾಕಷ್ಟು ಹಿಂದಿನಿಂದಲೂ ಜಿಲ್ಲೆ ಹಾಗೂ ಕೇರಳ ರಾಜ್ಯದವರು ಜಂಟಿಯಾಗಿ ಶ್ರದ್ಧಾಭಕ್ತಿಯಿಂದ ಆಚರಿಸುತ್ತಿರುವ ಬೈತೂರು ಉತ್ಸವದ ದೊಡ್ಡಹಬ್ಬವು ಜ.24ರಂದು ನಡೆಯಲಿದೆ.

ಜಿಲ್ಲೆ ಹಾಗೂ ಕೇರಳ ರಾಜ್ಯದ ನಡುವಿನ ಬಾಂಧವ್ಯ ಹಾಗೂ ಅವಿನಾಭಾವ ಸಂಬಂಧಕ್ಕೆ ಬೈತೂರು ಉತ್ಸವವು ಈ ಉತ್ಸವ ಸಾಕ್ಷಿಯಾಗಿದೆ.

ನೆರೆಯ ಕೇರಳದ ಕಣ್ಣೂರು ಜಿಲ್ಲೆಯ ಇರಿಟ್ಟಿ ಸಮೀಪದ ಉಳಿಕ್ಕಲ್‌ಲ್ನಲ್ಲಿರುವ ವಾಯತ್ತೂರ್ ಕಳಿಯರ್ ಶಿವ (ಶ್ರೀ ಬೈತೂರಪ್ಪ) ದೇವಾಲಯದ ವಾರ್ಷಿಕ ಉತ್ಸವ ಜ.13ಕ್ಕೆ ಚಾಲನೆ ನೀಡಲಾಗಿದ್ದು, 25ರವರೆಗೆ ನಡೆಯಲಿದೆ. ಕೇರಳದ ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಈ ದೇವಾಲಯದ ತಕ್ಕಮುಖ್ಯಸ್ಥರಾಗಿ ಹಿಂದಿನಿಂದಲೂ ಕೊಡಗಿನ ಪುಗ್ಗೇರ ಕುಟುಂಬಸ್ಥರು ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿದೆ.

ADVERTISEMENT

ಮಲಯಾಳಿ ಮತ್ತು ಕೊಡವ ಸಮುದಾಯದ ಸದಸ್ಯರನ್ನೊಳಗೊಂಡ ಟ್ರಸ್ಟ್ ದೇವಾಲಯದ ಆಡಳಿತ ನಡೆಸುತ್ತಿದೆ. ಇದು ಎರಡು ರಾಜ್ಯಗಳ ನಡುವಿನ ಬಾಂಧವ್ಯದ ಪ್ರತಿಬಿಂಬವಾಗಿದೆ.

ದೊಡ್ಡಹಬ್ಬದಂದು ಪೂಜಾ ವಿಧಿವಿಧಾನಗಳು ನಡೆದ ಬಳಿಕ ಉತ್ಸವ ಮೂರ್ತಿಯನ್ನು ಆನೆಯ ಮೇಲಿರಿಸಿ ಚಂಡೆ ವಾದ್ಯದೊಂದಿಗೆ ದೇವಾಲಯಕ್ಕೆ ಪ್ರದಕ್ಷಿಣಿಕೆ ರೂಪದಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಜ. 25ರಂದು ಬೆಳಿಗ್ಗೆ 9.30ಕ್ಕೆ ಕೊಡಗಿನ ಎಲ್ಲಾ ತಿರುವಳಕಾರರ ದರ್ಶನ ಹಾಗೂ ಬೈತೂರಪ್ಪ ದೇವರ ಆಶೀರ್ವಾದ ಪಡೆಯುವ ಕಾರ್ಯಕ್ರಮ ನಡೆಯಲಿದೆ.

ವಿಶೇಷವಾಗಿ ಕೊಡವ ಸಮುದಾಯದವರು ತಮ್ಮ ಸಾಂಪ್ರದಾಯಿಕ ಉಡುಗೆ ಧರಿಸಿ ಉತ್ಸವದಲ್ಲಿ ಭಾಗವಹಿಸುತ್ತಾರೆ. ಜಿಲ್ಲೆಯ ಭಕ್ತರು ಹಾಗೂ ವೃತಧಾರಿಗಳು ಇಲ್ಲಿಯೇ ವಾಸ್ತವ್ಯ ಹೂಡಿ ಎಲ್ಲಾ ದೇವತಾ ಕಾರ್ಯ ಮುಗಿಸಿ ಮರಳುತ್ತಾರೆ. ಉತ್ಸವದ ಸಂದರ್ಭ ದೈವ ದರ್ಶನವೂ ಇರುತ್ತದೆ. ಮೈಮೇಲೆ ದೇವರ ಆವಾಹನೆಯಾಗುವವರು ಮೊದಲು ಇಲ್ಲಿಗೆ ಬರುವ ಪದ್ಧತಿಯಿದೆ. ಉತ್ಸವದ ಸಂದರ್ಭ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ನಡೆಯಲಿದೆ.

ಎತ್ತುಗಳ ಮೇಲೆ ಅಕ್ಕಿಯನ್ನು ಬೈತೂರು ದೇವಸ್ಥಾನಕ್ಕೆ ಸಾಗಿಸುವುದು (ಎತ್ತ್ ಪೋರಾಟ್) ಬೈತೂರು ಉತ್ಸವದ ಪ್ರಮುಖ ಆಚರಣೆಯಾಗಿದೆ. ಇದು ಕೊಡವರು ಬೈತೂರಪ್ಪ ಎಂದು ಕರೆಯುವ ವಾಯತೂರು ಕಲಿಯಾರ್ (ಶಿವ)ಗೆ ಅಕ್ಕಿಯನ್ನು ಸಮರ್ಪಿಸುವ ಪದ್ಧತಿ. ಗುರುವಾರ ಪುಗ್ಗೇರ ಕುಟುಂಬದ ಎತ್ತ್ ಪೋರಾಟ್ ಮತ್ತು ಅಕ್ಕಿ ಅಳೆಯುವ ಹಾಗೂ ಶುಕ್ರವಾರ ನಾಡಿನ ಎತ್ತ್ ಪೋರಾಟ್ ಮತ್ತು ಅಕ್ಕಿ ಅಳೆಯುವ ಕಾರ್ಯವು ಶ್ರದ್ಧಾಭಕ್ತಿಯಿಂದ ನೆರವೇರಿತು.

ಉತ್ಸವಕ್ಕೆ ಕೆಲ ದಿನಗಳ ಮೊದಲು ದೇವಾಲಯದ ಕೋಮರತಚ್ಚನ್ (ದರ್ಶನ ಪಾತ್ರಿ) ಸಂಪ್ರದಾಯದಂತೆ ಕೊಡಗಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಉತ್ಸವಕ್ಕೆ ಜಿಲ್ಲೆಯ ಜನತೆಯನ್ನು ಆಹ್ವಾನಿಸುವ ಸಂಪ್ರದಾಯವಿದೆ. ಕೋಮರತಚ್ಚನ್ ಜಿಲ್ಲೆಯ ವಿವಿಧ ದೇವಾಲಯಗಳು, ಮಡಿಕೇರಿ ಕೋಟೆ, ಓಂಕಾರೇಶ್ವರ ದೇವಾಲಯ, ಕೊಡವ ಕುಟುಂಬಗಳ ಐನ್‌ಮನೆ ಸೇರಿದಂತೆ ಜಿಲ್ಲೆಯ ಜನರನ್ನು ಭೇಟಿ ಮಾಡುವ ಪದ್ಧತಿ ಹಿಂದಿನಿಂದಲೂ ನಡೆದುಬಂದಿದೆ.

ಈ ಬಾರಿ ಡಿ. 30ರಿಂದ ಜ.9ರವರೆಗೆ ಕೋಮರತಚ್ಚನ್ ಜಿಲ್ಲೆಯ ನಿಗದಿತ ಸ್ಥಳಗಳಿಗೆ ಪದ್ಧತಿಯಂತೆ ಭೇಟಿ ನೀಡಿದ್ದರು. ಇಂದು ಹಾಗೂ ನಾಳೆ ಈ ಎರಡು ದಿನಗಳು ಹಿಂದಿನಂತೆ ಜಿಲ್ಲೆಯ ಸಾಕಷ್ಟು ಭಕ್ತರು ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.

ವಿರಾಜಪೇಟೆಯಲ್ಲಿ ಬೈತೂರು ಉತ್ಸವದ ಅಂಗವಾಗಿ ಗುರುವಾರ ಅಕ್ಕಿ ಅಳೆಯುವ ವಿಧಿವಿಧಾನ ನಡೆಸಲಾಯಿತು.
ಬೈತೂರು ಉತ್ಸವದ ಸಂದರ್ಭ ದೇವಾಲಯದ ಆವರಣದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ (ಸಂಗ್ರಹ ಚಿತ್ರ)
ಬೈತೂರು ಉತ್ಸವದ ಸಂದರ್ಭ ದೇವಾಲಯದ ಆವರಣದಲ್ಲಿ ಆನೆಯಲ್ಲಿ ಉತ್ಸವ ಮೂರ್ತಿಯನ್ನಿರಿಸಿ ಮೆರವಣಿಗೆ (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.