
ವಿರಾಜಪೇಟೆ: ಸಮುದಾಯ ಬಾಂಧವರನ್ನು ಒಂದುಗೂಡಿಸುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವಂತೆ ಬಂಟರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ರೈ ಕರೆ ನೀಡಿದರು.
ಪಟ್ಟಣದ ಹಿಲ್ ಪ್ಯಾಲೆಸ್ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ನಡೆದ ಉದ್ದೇಶಿತ ಬಂಟರ ಭವನದ ಭೂಮಿಪೂಜೆಯ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಮುದಾಯ ಬಾಂಧವರು ಒಗ್ಗಟ್ಟಿನಿಂದ ಮುಂದುವರೆದರೆ ಸರ್ಕಾರದಿಂದ ಎಲ್ಲ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ಆದ್ದರಿಂದ ಸಂಘಟನೆಯಲ್ಲಿ ಮುಂದೆಯೂ ಕೂಡ ಯಾವುದೇ ಒಡಕಿಗೆ ಅವಕಾಶ ನೀಡದೆ ಮುನ್ನಡೆಯಬೇಕು. ಜೊತೆಯಾಗಿ ಮುನ್ನಡೆದರೆ ಎಲ್ಲರ ಪ್ರಗತಿ ಸಾಧ್ಯ ಎನ್ನುವುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.
ಮಡಿಕೇರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಆಧುನಿಕ ಮಾದರಿಯ ಬಂಟರ ಭವನದ ಕಾಮಗಾರಿಯ ಭೂಮಿಪೂಜೆಯನ್ನು ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಕೈಗೊಳ್ಳಲಾಗುತ್ತಿದೆ. ಭೂಮಿಪೂಜೆಯ ದಿನಾಂಕವನ್ನು ಸದ್ಯದಲ್ಲೆ ನಿಗದಿಪಡಿಸಲಾಗುವುದು. ಅಂದು ನಡೆಯುವ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಸೇರಿದಂತೆ ಗಣ್ಯರನ್ನು ಆಹ್ವಾನಿಸಲಾಗುವುದು. ಭೂಮಿಪೂಜೆಯ ಬಳಿಕ ಅಂದು ಉದ್ದೇಶಿತ ಭವನಕ್ಕೆ ನಿಗದಿಪಡಿಸಿರುವ ಸ್ಥಳದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸಮುದಾಯದ ಪ್ರತಿಯೊಬ್ಬರೂ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಈ ಯೋಜನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನೀಲಿಮಾಡು ಲೀಲಾಧರ ರೈ ಮಾತನಾಡಿ, ‘ದಕ್ಷಿಣ ಕೊಡಗಿನ ಭಾಗದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಸಮುದಾಯದ ಏಳಿಗೆಯ ದೃಷ್ಟಿಯಿಂದ ಪ್ರತಿಯೊಬ್ಬರೂ, ಜೊತೆಯಾಗಿ ಮುನ್ನಡೆಯೋಣ. ಉದ್ದೇಶಿತ ಭವನ ನಿರ್ಮಾಣಕ್ಕೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡಲಾಗುವುದು’ ಎಂದರು.
ಸಭೆಯಲ್ಲಿ ಬಂಟರ ಸಂಘದ ಮಡಿಕೇರಿ ನಗರ ಘಟಕದ ಅಧ್ಯಕ್ಷ ಪ್ರಭು ರೈ, ಬಂಟರ ಭವನದ ಟ್ರಸ್ಟ್‌ನ ಕಾರ್ಯದರ್ಶಿ ಗಿರೀಶ್, ಖಜಾಂಚಿ ಬಾಲಕೃಷ್ಣ ರೈ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಸಮಿತಿಯ ಸುರೇಶ್ ರೈ, ಸಂಪತ್ ಶೆಟ್ಟಿ, ಪ್ರದೀಪ್ ರೈ, ರಾಮಣ್ಣ ರೈ, ಡಾ.ಹೇಮಂತ್, ಬಂಟರ ಸಂಘದ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ನೀತು ಆಳ್ವ, ಬಿ.ಎಸ್.ಕುಸುಮಾ ರೈ, ಶಶಿಕಲಾ ರೈ, ಗಣೇಶ್ ರೈ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.