ADVERTISEMENT

ಭಾಗಮಂಡಲ: ಮಳಿಗೆ, ವಸತಿಗೃಹ ನಿರ್ಮಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 2:26 IST
Last Updated 12 ಡಿಸೆಂಬರ್ 2025, 2:26 IST
ಭಾಗಮಂಡಲದ ಭಗಂಡೇಶ್ವರ ದೇವಾಲಯದ ಬಳಿ ಅಂಗಡಿ ಮಳಿಗೆಗಳು ಹಾಗೂ ವಸತಿಗೃಹ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ
ಭಾಗಮಂಡಲದ ಭಗಂಡೇಶ್ವರ ದೇವಾಲಯದ ಬಳಿ ಅಂಗಡಿ ಮಳಿಗೆಗಳು ಹಾಗೂ ವಸತಿಗೃಹ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ   

ನಾಪೋಕ್ಲು: ಭಾಗಮಂಡಲದ ಭಗಂಡೇಶ್ವರ ದೇವಾಲಯದ ಬಳಿ ಅಂಗಡಿ ಮಳಿಗೆಗಳು ಹಾಗೂ ವಸತಿಗೃಹ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.

ದೇವಾಲಯದ ಸಮೀಪ ಕನ್ನಿಕೆ ನದಿ ಹರಿಯುತ್ತಿದ್ದು ಇದು ಕಾವೇರಿ ನದಿಯನ್ನು ಸಂಗಮಿಸಿ ತ್ರಿವೇಣಿ ಸಂಗಮವಾಗಿದೆ. ತ್ರಿವೇಣಿ ಸಂಗಮ ಭಾಗಮಂಡಲದ ಪವಿತ್ರ ಕ್ಷೇತ್ರವಾಗಿದ್ದು ಭಕ್ತಾದಿಗಳಿಗೆ ಧಾರ್ಮಿಕ, ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಇದೀಗ ಪವಿತ್ರ ಕ್ಷೇತ್ರದಲ್ಲಿ ಕಟ್ಟಡ ಸಮುಚ್ಚಯ ನಿರ್ಮಾಣಗೊಳ್ಳುತ್ತಿದ್ದು ದೇವಾಲಯದ ಪವಿತ್ರತೆಗೆ ಧಕ್ಕೆ ಬರಲಿದೆ. ಪರಿಸರ ಮಾಲಿನ್ಯಗೊಳ್ಳಲಿದೆ ಎಂಬ ಆತಂಕ ಸ್ಥಳೀಯರಲ್ಲಿ ಎದುರಾಗಿದೆ.

ಬಿಜೆಪಿ ಮುಖಂಡ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಮಾತನಾಡಿ, ‘ದೇವಾಲಯಕ್ಕೆ ಹೊಂದಿಕೊಂಡಂತೆ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಸಮುಚ್ಚಯದಿಂದ 10–15 ಮೀಟರ್ ದೂರದಲ್ಲಿ ಕನ್ನಿಕೆ ನದಿ ಹರಿಯುತ್ತಿದ್ದು ಗಲೀಜು ನೀರು ಕನ್ನಿಕೆ ನದಿಗೆ ಸೇರಿ ಕಲುಷಿತಗೊಳ್ಳಲಿದೆ’ ಎಂದರು.

ADVERTISEMENT

ಗ್ರಾಮ ಪಂಚಾಯತಿ ಅಧ್ಯಕ್ಷ ಕಾಳನ ರವಿ ಮಾತನಾಡಿ, ‘ಕಟ್ಟಡಗಳ ನಿರ್ಮಾಣದಿಂದ ದೇವಸ್ಥಾನದ ಮುಂಭಾಗ ಓಡಾಡಲು ಸ್ಥಳವಿಲ್ಲದಂತಾಗಿದೆ. ಆಡಳಿತ ಅಧಿಕಾರಿ ಚಂದ್ರಶೇಖರ್ ಅವರನ್ನು ಈ ಬಗ್ಗೆ ಮಾಹಿತಿ ಕೋರಿದಾಗ ಸೂಕ್ತ ಮಾಹಿತಿ ನೀಡಿಲ್ಲ ಎಲ್ಲವನ್ನು ಜಿಲ್ಲಾಧಿಕಾರಿಗಳೇ ನಿರ್ವಹಿಸುತ್ತಾರೆ ಎಂದಿದ್ದಾರೆ. ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗಿದೆ’ ಎಂದರು.

ಸಾಮಾಜಿಕ ಹೋರಾಟಗಾರ ಕುದುಕುಳಿ ಭರತ್ ಮಾತನಾಡಿ, ‘ಭಗಂಡೇಶ್ವರ ದೇವಾಲಯ ಧಾರ್ಮಿಕ ತಾಣವಾಗಿದೆ, ದೇವಸ್ಥಾನ ಸಮಿತಿಯವರು ಕಾನೂನಾತ್ಮಕವಾಗಿ ಅಗತ್ಯವಾದಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಅಂಗಡಿ ಮಳಿಗೆ ಹಾಗೂ ವಸತಿ ಗ್ರಹಗಳ ನಿರ್ಮಾಣದಿಂದ ಮಳೆಗಾಲದಲ್ಲಿ ಪ್ರವಾಹಕ್ಕೊಳಗಾಗುವ ಈ ಪ್ರದೇಶ ಮತ್ತು ಪರಿಸರವು ಹಾಳಾಗಲಿದೆ. ಕಟ್ಟಡ ನಿರ್ಮಾಣದ ವಿರುದ್ಧ ಜಿಲ್ಲೆಯ ಜನತೆ ಒಂದಾಗಿ ಹೋರಾಟ ನಡೆಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.