ADVERTISEMENT

ನಾಪೋಕ್ಲು: ದೇವಾಲಯದಲ್ಲಿ ಹೋಮ, ದೇವರ ನೃತ್ಯ ಬಲಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 4:15 IST
Last Updated 17 ಫೆಬ್ರುವರಿ 2026, 4:15 IST
ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಭಾಗಮಂಡಲದಲ್ಲಿ ದೇವರ ನೃತ್ಯಬಲಿ ಜರುಗಿತು
ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಭಾಗಮಂಡಲದಲ್ಲಿ ದೇವರ ನೃತ್ಯಬಲಿ ಜರುಗಿತು   

ನಾಪೋಕ್ಲು: ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಮಹಾಶಿವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಭಾಗಮಂಡಲದ ಭಗಂಡೇಶ್ವರ ,ಸುಬ್ರಮಣ್ಯ, ಮಹಾವಿಷ್ಣು ದೇಗುಲಗಳಲ್ಲಿ ಶಿವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಬೆಳಗಿನಿಂದಲೇ ಜರುಗಿದವು.

ದೇವಾಲಯದಲ್ಲಿ ಶತರುದ್ರಾಭಿಷೇಕ ರುದ್ರ ಹೋಮ, ಮಹಾಮಂಗಳಾರತಿ ಪ್ರಸಾದ ವಿತರಣೆ ಜರುಗಿತು. ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಉತ್ಸವದ ಅಂಗವಾಗಿ ದೇವರ ನೃತ್ಯ ಬಲಿ ನಡೆಯಿತು.

ADVERTISEMENT

ಸಂಜೆ ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಹಾಡುಗಾರಿಕೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಲಕ್ಷದೀಪೋತ್ಸವ, ಏಕಾದಶ ರುದ್ರಾಭಿಷೇಕ ಬಳಿಕ ದೇವರ ನೃತ್ಯ ಬಲಿ ನಡೆಯಿತು. ಬಳಿಕ ತ್ರಿವೇಣಿ ಸಂಗಮಕ್ಕೆ ತೆರಳಿ ನಂತರ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ರಾತ್ರಿ ಬಂಟ್ವಾಳದ ಚಂದಪ್ಪ ಪೂಜಾರಿ ಪ್ರತಿಷ್ಠಾನದಿಂದ ಯಕ್ಷಗಾನ ಬಯಲಾಟ ಪ್ರಸಂಗ ಓಂ ನಮಃ ಶಿವಾಯ ಜರುಗಿತು.

ಹೆಬ್ಬೆಟ್ಟಗೇರಿಯ ದಿ.ಕೊಕ್ಕಲೆರ ಶಾಂತಿ ಕಾರ್ಯಪ್ಪ ಇವರ ಜ್ಞಾಪಕಾರ್ಥವಾಗಿ ಪತಿ ಕೊಕ್ಕಲೆರ ಎ.ಕಾರ್ಯಪ್ಪ ಮತ್ತು ಮಕ್ಕಳು ಭಗಂಡೇಶ್ವರ ದೇವಾಲಯದ ಪಾರ್ವತಿ ದೇವರಿಗೆ ಒಟ್ಟು 2 ಕೆ.ಜಿ 349 ಗ್ರಾಂ ತೂಕದ ಬೆಳ್ಳಿಯ ಪ್ರಭಾವಳಿ ಮತ್ತು ಉತ್ಸವ ಮೂರ್ತಿಗೆ ಬೆಳ್ಳಿಯ ಕವಚವನ್ನು ಮಹಾಶಿವರಾತ್ರಿಯಂದು ಸಮರ್ಪಣೆ ಮಾಡಿದರು. ಸುಮಾರು 200 ವರ್ಷಗಳಷ್ಟು ಹಳೆಯದಾದ ಬೆಳ್ಳಿಯ ಪ್ರಭಾವಳಿ ಈ ವರ್ಷ ಹೊಸ ಮೆರುಗಿನೊಂದಿಗೆ ಕಂಗೊಳಿಸಿತು.

ಹರೀಶ್ ಭಟ್ಟ ಹಾಗೂ ರವಿ ಭಟ್ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮಡಿಕೇರಿ ಈಶ್ವರ ಭಟ್ ಹಾಗೂ ಕಲ್ಲುಮೊಗರು ವಿಘ್ನೇಶ್ ಭಟ್ ಸಾರಥ್ಯದಲ್ಲಿ ರುದ್ರ ಪಠಣ ನೆರವೇರಿತು.

ಉಪವಿಭಾಗಾಧಿಕಾರಿ ನಿತಿನ್ ಜಕ್ಕಿ, ಚೇರಂಬಾಣೆಯ ಉದ್ಯಮಿ ಯೋಗಾನಂದ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್, ಪ್ರಮುಖರಾದ ಕುದ್ದುಪಜೆ ಪ್ರಕಾಶ್, ಬಿದ್ದಾಟಂಡ ತಮ್ಮಯ್ಯ, ತಮ್ಮು ಪೂವಯ್ಯ, ಮಾಜಿ ವ್ಯವಸ್ಥಾಪಕರಾದ ಸಂಪತ್ ಕುಮಾರ್, ಉಪ ವಿಭಾಗಾಧಿಕಾರಿ ಚಂದ್ರಶೇಖರ್, ಪಾರುಪತ್ತೆಗಾರ ಪೊನ್ನಣ್ಣ, ಕೋಡಿ ಮಂಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.