ADVERTISEMENT

ವಿನಯ್ ಸೋಮಯ್ಯ ಸಾವಿಗೆ ಬಿಜೆಪಿಯೇ ಹೊಣೆ: ಪೊನ್ನಣ್ಣ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 14:40 IST
Last Updated 6 ಏಪ್ರಿಲ್ 2025, 14:40 IST
<div class="paragraphs"><p>ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು</p></div>

ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು

   

– ಪ್ರಜಾವಾಣಿ ಚಿತ್ರ 

ಮಡಿಕೇರಿ: ‘ಸಾವಿನ ಮೇಲೆ ಬಿಜೆಪಿ ರಾಜಕೀಯ ಮಾಡುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಇಲ್ಲಿನ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ADVERTISEMENT

‘ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರ ಹೆಸರನ್ನು ಬಿಜೆಪಿಯವರು ಅನಗತ್ಯವಾಗಿ ಎಳೆದು ತರುತ್ತಿದ್ದಾರೆ’ ಎಂದು ಆರೋಪಿಸಿದರು. ಬಿಜೆಪಿ ಮುಖಂಡ ಪ್ರತಾಪಸಿಂಹ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಗಾಂಧಿ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ‘ವಿನಯ್ ಸೋಮಯ್ಯ ಆತ್ಮಹತ್ಯೆಗೆ ಬಿಜೆಪಿಯೇ ಹೊಣೆ. ಈ ಕುರಿತು ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.

‘ ವಿನಯ್‌ ಅವರನ್ನು ಬಿಜೆಪಿ ಬಲಿ ಕೊಟ್ಟಿದೆಯಾ ಅಥವಾ ಆತ್ಮಹತ್ಯೆ ನಡೆದಾಗ ಸಿಕ್ಕ ಅವಕಾಶವನ್ನೇ ಬಳಸಿಕೊಂಡಿದೆಯಾ? ಬಿಜೆಪಿಯ ‘ಐಟಿ ಸೆಲ್‌’ ಕಾರ್ಯವೈಖರಿ ಹೇಗಿದೆ ಎಂಬ ಬಗ್ಗೆ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದರು.

‘ಬಿಜೆಪಿಯಲ್ಲಿ ಸಜ್ಜನರಿದ್ದಾರೆ. ಅದಕ್ಕಾಗಿಯೇ ಶನಿವಾರ ನಡೆದ ಪ್ರತಿಭಟನೆಗೆ ಕೆಲವು ಮಂದಿಯಷ್ಟೇ ಭಾಗಿಯಾದರು. ಹೆಣದ ಮೇಲಿನ ರಾಜಕಾರಣವನ್ನು ಆ ಪಕ್ಷದ ಕಾರ್ಯಕರ್ತರೇ ತಿರಸ್ಕರಿಸಿದರು’ ಎಂದರು.

‘ನನಗೆ ಘೇರಾವ್ ಹಾಕುವಂತೆ ಬಿಜೆಪಿ ಮುಖಂಡರೊಬ್ಬರು ಶನಿವಾರ ಕರೆಕೊಟ್ಟರು. ಆ್ಯಸಿಡ್‌ನಿಂದ ತೊಳೆದರೂ ಸ್ವಚ್ಛವಾಗದ ವ್ಯಕ್ತಿಯವರು. ಬಿಜೆಪಿಯೇ ಬೂಟಲ್ಲಿ ಒದ್ದು ಕಸದ ಡಬ್ಬಿಗೆ ಹಾಕಿದರೂ ಅವರು ಪಾಠ ಕಲಿತಿಲ್ಲ. ಆ ಪಕ್ಷದ ನಿರ್ನಾಮಕ್ಕೆ ಹೊರಟಿರುವ ಅವರಿಗೆ ಘೇರಾವ್ ಹಾಕಲಿ’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಕಿಡಿಕಾರಿದರು.

ಇದಕ್ಕೂ ಮುನ್ನ, ವಿನಯ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ‘ಅವರ ಕುಟುಂಬದ ಜೊತೆ ನಿಲ್ಲುತ್ತೇನೆ’ ಎಂದು ಪೊನ್ನಣ್ಣ ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ, ‘ಬಿಜೆಪಿಯ ವಿರುದ್ಧ ತಾಲ್ಲೂಕುಮಟ್ಟದಲ್ಲಿ ಪ್ರತಿಭಟಿಸಲಾಗುವುದು’ ಎಂದು ತಿಳಿಸಿದರು.

ಶಾಸಕ ಡಾ.ಮಂತರ್‌ಗೌಡ ಗೈರುಹಾಜರಾದರು.

ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು– ಪ್ರಜಾವಾಣಿ ಚಿತ್ರ
ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವತಿಯಿಂದ ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿದರು– ಪ್ರಜಾವಾಣಿ ಚಿತ್ರ

‘ರಾಜಕೀಯ ಲಾಭಕ್ಕೆ ಬಳಕೆ’

ಬೆಂಗಳೂರು: ‘ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ‌‌’ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಧನಂಜಯ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕರಾದ ಎ.ಎಸ್‌. ಪೊನ್ನಣ್ಣ ಮತ್ತು ಮಂತರ್‌ಗೌಡ ಅವರಿಗೂ ವಿನಯ್ ಸೋಮಯ್ಯ ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ’ ಎಂದರು.

‘ಪೊನ್ನಣ್ಣ ಅವರ ಬಗ್ಗೆ ಮಾತನಾಡುವ ನೈತಿಕತೆ ಪ್ರತಾಪ್ ಸಿಂಹ ಅವರಿಗೆ ಇಲ್ಲ. ಇದೇ ಚಾಳಿಯನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಕಾಂಗ್ರೆಸ್ ಪಕ್ಷದ,‌‌‌ ಸರ್ಕಾರದ ಕೆಲಸಗಳ ಮೇಲೆ ನಿರಂತರ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಚಿತಾವಣೆ ಅಡಗಿದೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಹೇಳಿದರು.

‘ಮಹಾನ್ ನಾಟಕಕಾರರಾದ ವಿಜಯೇಂದ್ರ, ಪ್ರತಾಪ್ ಸಿಂಹ, ಛಲವಾದಿ ನಾರಾಯಣಸ್ವಾಮಿ ‌ಅವರು ಮೃತ ವಿನಯ್ ಸೋಮಯ್ಯ ಮನೆಗೆ ಹೋಗಿ ಸಾಂತ್ವನ ಹೇಳಲಿಲ್ಲ. ಸಾವನ್ನು ರಾಜಕೀಯ ತೆವಲಿಗೆ ಬಳಸಿಕೊಂಡರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.