ಮಡಿಕೇರಿ: ರಾಹುಲ್ ಗಾಂಧಿ ಅವರ ಲೋಕಸಭೆಯ ಸದಸ್ಯತ್ವವನ್ನು ಈ ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿಯ ಎಸ್‌ಟಿ ಮೋರ್ಚಾ ಕಾರ್ಯಕರ್ತರು ಒತ್ತಾಯಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಸೇರಿದ ಅವರು, ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಮೊಳಗಿಸಿ, ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್, ‘ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಬೇಜವಾಬ್ದಾರಿಯಾಗಿ ಮಾತನಾಡಿದ್ದಾರೆ. ಇದು ಸರಿಯಲ್ಲ’ ಎಂದು ಖಂಡಿಸಿದರು.
ಅಮೆರಿಕದ ವಿಶ್ವವಿದ್ಯಾನಿಲಯದಲ್ಲಿ ಈಚೆಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾರತದಲ್ಲಿ ಮೀಸಲಾತಿ ರದ್ದುಪಡಿಸುವ ಕುರಿತು ಅವರು ನೀಡಿರುವ ಹೇಳಿಕೆ ಖಂಡನೀಯ ಎಂದರು.
ಭಾರತದ ಸಂವಿಧಾನದಲ್ಲಿ ಎಲ್ಲಾ ವರ್ಗದವರು ಸಮಾನತೆಯಿಂದಿರಬೇಕು ಎಂಬ ಕಾರಣಕ್ಕೆ ಮೀಸಲಾತಿ ನೀಡಲಾಗಿದೆ. ಆದರೆ, ರಾಹುಲ್‌ಗಾಂಧಿ ಅವರು ಕಾಂಗ್ರೆಸ್ ಅಧಿಕಾರಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದೂಳಿದ ವರ್ಗಕ್ಕೆ ನೀಡಿರುವ ಮೀಸಲಾತಿಯನ್ನು ತೆಗೆದು ಹಾಕುತ್ತೇವೆ ಎಂದು ಹೇಳುತ್ತಾರೆ. ಇದರಿಂದ ಬಡಜನರಿಗೆ ತೊಂದರೆಯಾಗುತ್ತದೆ ಎಂದು ಕಿಡಿಕಾರಿದರು.
ಇಂತಹ ಹೇಳಿಕೆಗಳನ್ನು ನೀಡುವ ರಾಹುಲ್ ಗಾಂಧಿ ಅವರು ವಿರೋಧಪಕ್ಷದ ನಾಯಕರಾಗಲು ಅನರ್ಹರು. ಅವರ ಲೋಕಸಭಾ ಸದಸ್ಯತ್ವವನ್ನು ಕೂಡಲೇ ರದ್ದುಗೊಳಿಸೇಕು ಎಂದು ಆಗ್ರಹಿಸಿದರು.
ಈ ವೇಳೆ ಪ್ರತಿಭಟನಾ ನಿರತರು ಜಿಲ್ಲಾಡಳಿತದ ಮೂಲಕ ಲೋಕಸಭಾ ಸ್ಪೀಕರ್‌ಗೆ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷೆ ಮಂಜುಳಾ, ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ, ಮುಖಂಡರಾದ ರಾಬಿನ್ ದೇವಯ್ಯ, ಮಹೇಶ್ ಜೈನಿ, ಪ್ರಭಾಕರ್, ಮುತ್ತುರಾಜ್, ಅಪ್ಪಾಜಿ, ಮಡಿಕೇರಿ ನಗರಸಭೆಯ ಬಿಜೆಪಿ ಸದಸ್ಯರು ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.