ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ದಾನಿಗಳು ರಕ್ತ ಮಾಡಿದರು
ಗೋಣಿಕೊಪ್ಪಲು: ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ ಮಡಿಕೇರಿ ಹಾಗೂ ಪೊನ್ನಂಪೇಟೆ ಶ್ರೀನಂದೀಶ್ವರ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ಸಹಕಾರದೊಂದಿಗೆ ಪೊನ್ನಂಪೇಟೆ ಇಗ್ಗುತಪ್ಪ ಕೊಡವ ಸೌಹಾರ್ದ ಸಹಕಾರಿ ಸಂಘದ ಸಭಾಂಗಣದಲ್ಲಿ ಭಾನುವಾರ ರಕ್ತದಾನ ಶಿಬಿರ ನಡೆಯಿತು. ಇದರಲ್ಲಿ ಮಹಿಳೆಯರು ಸೇರಿದಂತೆ ಒಟ್ಟು 73 ಜನರು ರಕ್ತ ದಾನ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಕ್ತ ನಿಧಿ ಕೇಂದ್ರದ ಅಧಿಕಾರಿ ಡಾ. ಕರುಂಬಯ್ಯ ಮಾತನಾಡಿ, ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ಅರಿತು ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟು 65 ವಯಸ್ಸಿನವರೆಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು. ರಕ್ತದಾನದ ಬಗ್ಗೆ ಇರುವ ಮೂಢನಂಬಿಕೆಗಳನ್ನು ಬದಿಗಿಟ್ಟು ರಕ್ತದಾನ ಮಾಡುವುದರಿಂದ ರೋಗಿಗಳ ಜೀವ ಉಳಿಸಬಹುದು. ಇದರಿಂದ ರಕ್ತದಾನಿಗಳ ಆರೋಗ್ಯ ವೃದ್ಧಿಯಾಗುವುದರೊಂದಿಗೆ, ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತರಾಗಬಹುದು. ಪ್ರತೀ ಸಂಘ ಸಂಸ್ಥೆಗಳು ವರ್ಷಕ್ಕೊಮ್ಮೆ ಇಂತಹ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳ ಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಬ್ಲಡ್ ಡೋನರ್ಸ್ ಅಧ್ಯಕ್ಷ ಪಿ.ಪಿ.ಸುಕುಮಾರ್ ಅವರು ಮಾತನಾಡಿ, ರಕ್ತದಾನದಂತಹ ಮಹಾದಾನ ಮಾಡುವ ರಕ್ತ ದಾನಿಗಳೇ ನಮ್ಮ ಹೀರೋಗಳು. ಕೊಡಗು ಜಿಲ್ಲೆಯ ಹಲವೆಡೆ ಕೊಡಗು ಬ್ಲಡ್ ಡೋನರ್ಸ್ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಜೀವ ಉಳಿಸುವ ಕೆಲಸ ಮಾಡುತ್ತಿದೆ. ರಕ್ತದ ಬೇಡಿಕೆ ಬಂದಾಗ ತಕ್ಷಣ ಸ್ಪಂದಿಸಿ ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ. ರಕ್ತದಾನ ಕಾರ್ಯದಲ್ಲಿ ಕೊಡಗು ಬ್ಲಡ್ ಡೋನರ್ಸ್‌ನ ಪದಾಧಿಕಾರಿಗಳು ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ ಎಂದರು.
ಕೊಡಗು ಬ್ಲಡ್ ಡೋನರ್ಸ್ ಪೊನ್ನಂಪೇಟೆ ನಂದೀಶ್ವರ ಆಟೊ ಚಾಲಕ ಮತ್ತು ಮಾಲೀಕರ ಸಂಘದ ಸಹ ಕಾರ್ಯದರ್ಶಿ ಚೀರಂಡ ಚಂಗಪ್ಪ ಮಾತನಾಡಿದರು. ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ ಕಾರ್ಯದರ್ಶಿ ಮೈಕಲ್ ವೇಗಸ್ ಪ್ರಾಸ್ತಾವಿಕ ಮಾತನಾಡಿದರು. ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ನಂದೀಶ್ವರ ಆಟೊ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಪ್ಪ, ಉಪಾಧ್ಯಕ್ಷ ಚಮ್ಮಟಿರ ಶಾಂತ ಪೊನ್ನಪ್ಪ, ಕಾರ್ಯದರ್ಶಿ ಬಿ.ಎಸ್. ಸುರೇಶ್, ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ ಉಪಾಧ್ಯಕ್ಷ ಅಶ್ರಫ್, ನಿರ್ದೇಶಕರಾದ ಅನಿಲ್ ಕುಮಾರ್, ಬಶೀರ್ ಆಲಿ, ಬಾಳೆಯಡ ದಿವ್ಯ ಮಂದಪ್ಪ, ಲೀಲಾವತಿ, ಟಿ. ಅರ್.ವಿನೋದ್, ಶ್ರೀನಂದೀಶ್ವರ ಆಟೊ ಚಾಲಕ ಮತ್ತು ಮಾಲೀಕರ ಸಂಘದ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.