ಮಡಿಕೇರಿಯಲ್ಲಿ ಭಾನುವಾರ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಮತ್ತು ಕನ್ನಡ ಭವನದ ಕೊಡಗು ಜಿಲ್ಲಾ ಘಟಕದ ವತಿಯಿಂದ ಕಿಗ್ಗಾಲು ಎನ್.ಗಿರೀಶ್ ಮೂರ್ನಾಡು, ಮೂಕಳೇರ ಟೈನಿ ಪೂಣಚ್ಚ ಪೊನ್ನಂಪೇಟೆ, ಪಂದ್ಯಂಡ ರೇಣುಕ ಸೋಮಯ್ಯ ಹೊಸೂರು ಅಮ್ಮತ್ತಿ, ಅಪರ್ಣಾ ಹುಲಿತಾಳ ಅವರಿಗೆ ನೀಡಿ ಗೌರವಿಸಲಾಯಿತು
ಮಡಿಕೇರಿ: ಅತ್ತ ವೇದಿಕೆಯಲ್ಲಿ ‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ, ಮಳೆ ಸುರಿಸಿ ಹಗುರಾದ ಮುಗಿಲಿನಂತೆ...’ ಎಂದು ಸೋಮವಾರಪೇಟೆಯ ತೆರೇಸಾ ಲೋಬೊ ಅವರು ಹಾಡುತ್ತಿದ್ದರೆ, ಇತ್ತ ಅಲ್ಲಿಯವರೆಗೂ ಮಳೆ ಸುರಿಸಿದ್ದ ಮುಗಿಲೊಂದು ಹಗುರಾಗಿ ಗಗನದಲ್ಲಿ ತೇಲಿತು.
ಇದಕ್ಕೆ ಪೂರಕವಾಗಿ ಮಳೆಗೆ ಸಂಬಂಧಿಸಿದಂತೆ ಉಡುಪಿಯಿಂದ ಬಂದಿದ್ದ ಶೋಭಾ ದಿನೇಶ್ ಅವರು, ‘ಅಂದು ಮಳೆ ಬಂದರೆ ತುಂಬಿ ಹರಿಯುತ್ತಿತ್ತು ಹೊಳೆ, ಇಂದು ಮಳೆ ಬಂದರೆ ರಸ್ತೆಯೇ ಹೊಳೆ’ ಎಂದರೆ, ಬೆಂಗಳೂರಿನಿಂದ ಬಂದಿದ್ದ ಮಾಲತಿರಾವ್ ಅವರು ಕಾವೇರಿ ಕುರಿತು, ಸೋಮವಾರಪೇಟೆಯ ಕವಿತಾ ಅವರು ಮಳೆಯಿಂದ ಉಂಟಾದ ತೋಡಿನ ಕುರಿತು ಚುಟುಕುಗಳನ್ನು ವಾಚಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಮತ್ತು ಕನ್ನಡ ಭವನದ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆದ ಕೊಡಗು ಮಳೆಗಾಲ ಕವಿಗೋಷ್ಠಿಯಲ್ಲಿ ಕಂಡುಬಂದ ದೃಶ್ಯವಿದು.
35ಕ್ಕೂ ಹೆಚ್ಚು ಕವಿಗಳು ಚುಟುಕುಗಳನ್ನು ವಾಚಿಸಿ ಗಮನ ಸೆಳೆದರು. ಕೆ.ಆರ್.ಮನ ಅವರ ಚುಟುಕಿನಲ್ಲಿ ಪೆಹಲ್ಗಾಮ್ ಘಟನೆ, ಸೇನೆಯ ವಿಚಾರಗಳು ಕಂಡರೆ, ಅಪರ್ಣಾ ಹುಲಿತಾಳ ಅವರು ತಮ್ಮ ಚುಟುಕಿನಲ್ಲಿ ಯೋಧರು, ರೈತರನ್ನು ಸ್ಮರಿಸಿದರು. ಹಿರಿಯರಾದ ಭಾಗೀರಥಿ ಹುಲಿತಾಳ ಅವರು ಚುಟುಕುಗಳ ಬ್ರಹ್ಮ ದಿನಕರ ದೇಸಾಯಿ ಕುರಿತು, ಸುಶೀಲಾ ಹಾನಗಲ್ ಅವರು ಹೆಣ್ಣಿನ ಸಮಸ್ಯೆ ಕುರಿತು ವಾಚಿಸಿದರು. ಶರತ್ ಬೋಪಣ್ಣ, ಭವ್ಯಾ ಹಾಗೂ ಮತ್ತಿತ್ತರ ಚುಟುಕುಗಳು ತಿಳಿನಗೆಯ ಕಾರಂಜಿಯನ್ನೇ ಚಿಮ್ಮಿಸಿದವು.
ಇದಕ್ಕೂ ಮುನ್ನ ಕಿಗ್ಗಾಲು ಎನ್.ಗಿರೀಶ್ ಮೂರ್ನಾಡು, ಮೂಕಳೇರ ಟೈನಿ ಪೂಣಚ್ಚ ಪೊನ್ನಂಪೇಟೆ, ಪಂದ್ಯಂಡ ರೇಣುಕ ಸೋಮಯ್ಯ ಹೊಸೂರು ಅಮ್ಮತ್ತಿ, ಅಪರ್ಣಾ ಹುಲಿತಾಳ, ಅಯ್ಯನೆರವಂಡ ಪ್ರಿತುನ್ ಪೂವಣ್ಣ ಅವರಿಗೆ ‘ಕೊಡಗು ಜಿಲ್ಲಾ ಚುಟುಕು ಕಾವ್ಯಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಭವನ ಕಾಸರಗೋಡಿನ ಅಂತರರಾಜ್ಯ ಪ್ರಶಸ್ತಿ ‘ಕನ್ನಡ ಪಯಸ್ವಿನಿ ಪ್ರಶಸ್ತಿ’ಯನ್ನು ಲೇಖಕಿ ಸ್ಮೀತಾ ಅಮೃತರಾಜ್, ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ, ಸ್ವೀಚ್ ಹಾಗೂ ಇಂಪ್ಲಾಂಟ್ ಕ್ಲಿನಿಕ್ ಇಂಡಿಯಾ ಹಾಗೂ ಮರ್ಕರಾ ಪೋಸ್ಟ್ ವ್ಯವಸ್ಥಾಪಕ ನಿರ್ದೇಶಕ, ಪಿ.ಆರ್.ಮ್ಯಾನೇಜರ್ ಜೈರಸ್ ಥಾಮಸ್ ಅಲೆಗ್ಸಾಂಡರ್ ಅವರಿಗೆ ನೀಡಿ ಗೌರವಿಸಲಾಯಿತು.
ಕೊಡವ ಮಕ್ಕಡ ಕೂಟದ 116ನೇ ಪುಸ್ತಕ ಟಿ.ವೈಶಾಲಿನಿ ಅವರ ‘ಮುಖವಾಡ’ ಕವನ ಸಂಕಲನವನ್ನು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಬಿಡುಗಡೆ ಮಾಡಿದರು.
ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಸ್ಥಾಪಕ ಸಂಚಾಲಕರಾದ ಡಾ.ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಉದ್ಘಾಟಿಸಿದರು. ಕೊಡಗು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು.
ಕೊಡಗು ಕನ್ನಡ ಭವನ ಕೋಶಾಧಿಕಾರಿ ವಿನೋದ್ ಕುಡ್ತೇಕರ್, ಕಾರ್ಯದರ್ಶಿ ವಸಂತ್ ಕೆರೆಮನೆ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು, ರಂಜಿತ್ ಜಯರಾಂ, ನಿವ್ಯ ದೇವಯ್ಯ, ಅರುಣ್ ಕುಮಾರ್, ಹರ್ಷಿತಾ ಶೆಟ್ಟಿ, ವಿನೋದ್ ಮೂಡಗದ್ದೆ, ಚಂದನ್ ನಂದರಬೆಟ್ಟು ಭಾಗವಹಿಸಿದ್ದರು.
ಎಸ್.ಎ.ರಿಶಾ ಅವರ ನೃತ್ಯ ಪ್ರದರ್ಶನ ಸೂಜಿಗಲ್ಲಿನಂತೆ ಸೆಳೆಯಿತು.
ಎಲ್ಲರನ್ನು ಬೆಸೆಯುವ ದೊಡ್ಡ ಶಕ್ತಿ ಸಾಹಿತ್ಯಕ್ಕಿದೆ. ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯ ಬರಹಗಾರರು ಹಾಗೂ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿರುವುದು ಶ್ಲಾಘನೀಯಸುಬ್ರಾಯ ಸಂಪಾಜೆ ಸಾಹಿತಿ
ಡಾ.ವಾಮನ್ ರಾವ್ ಬೇಕಲ್ ಅವರು ನೀಡುತ್ತಿರುವ ಕೊಡುಗೆ ಅಪಾರ. ಇವರ ಪ್ರಯತ್ನಗಳಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕುಬೊಳ್ಳಜಿರ ಬಿ.ಅಯ್ಯಪ್ಪ ಕೊಡಗು ಕನ್ನಡ ಭವನದ ಅಧ್ಯಕ್ಷ
ಇನ್ನು ಮುಂದೆಯೂ ತಾಲ್ಲೂಕು ಮತ್ತು ಗ್ರಾಮೀಣ ಮಟ್ಟದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಿ ಯುವ ಸಮೂಹದಲ್ಲಿ ಕನ್ನಡ ಭಾಷಾಭಿಮಾನವನ್ನು ಮೂಡಿಸಲಾಗುವುದುಎಂ.ಎ.ರುಬೀನಾ ಚುಟುಕು ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷೆ
ಪುಸ್ತಕದ ಹೆಸರು: ಮುಖವಾಡ
ಲೇಖಕರು: ವೈಶಾಲಿನಿ ಟಿ.
ಪ್ರಕಾಶನ: ಕೊಡವ ಮಕ್ಕಡ ಕೂಟ
ಪುಟಗಳು:
99 ಬೆಲೆ: ₹ 100
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.