100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ | ಮಿದುಳು ಆರೋಗ್ಯ ಚಿಕಿತ್ಸಾಲಯದಲ್ಲಿ 3 ಸಾವಿರ ಮಂದಿಗೆ ಚಿಕಿತ್ಸೆ
ಮಡಿಕೇರಿ: ಜಿಲ್ಲಾಸ್ಪತ್ರೆಯಲ್ಲಿರುವ ‘ಮಿದುಳು ಆರೋಗ್ಯ ಚಿಕಿತ್ಸಾಲಯ’ದಲ್ಲಿ ತಲೆನೋವು ಸೇರಿದಂತೆ ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಿದುಳು ಆರೋಗ್ಯ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಡಾ.ಆನಂದ್ ತಿಳಿಸಿದರು.
ಇಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದ ವತಿಯಿಂದ ಮಂಗಳವಾರ ನಡೆದ ವಿಶ್ವ ಮಿದುಳು ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ನರರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿರುವುದನ್ನು ಗಮನಿಸಿದ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ತಲೆನೋವು, ಪಾರ್ಶ್ವವಾಯು, ಮೂರ್ಛೆರೋಗ, ಪಾರ್ಕಿನ್‌ಸನ್ ಕಾಯಿಲೆ ಮತ್ತು ಮರೆವಿನ ಕಾಯಿಲೆಗಳು ಕಂಡು ಬಂದಲ್ಲಿ ಈ ಚಿಕಿತ್ಸಾಲಯಕ್ಕೆ ಬಂದು ವೈದ್ಯರಿಗೆ ತೋರಿಸಿ ಉಚಿತ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯಬಹುದು’ ಎಂದರು.
ಕೊಡಗು ಜಿಲ್ಲೆಯಲ್ಲಿ ಮಿದುಳು ಆರೋಗ್ಯ ಕಾರ್ಯಕ್ರಮದಡಿಯಲ್ಲಿ 2024ರಿಂದ ಜೂನ್ 2025ನೇ ಸಾಲಿನವರೆಗೂ 3 ಸಾವಿರ ಮಂದಿ ಮಿದುಳು ಆರೋಗ್ಯ ಚಿಕಿತ್ಸಾಲಯದಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಮಿದುಳು ದೇಹದ ಅತ್ಯಂತ ಪ್ರಮುಖ ಅಂಗ. ದೈಹಿಕ ಚಲನೆಗಳಿಂದ ಹಿಡಿದು ಆಲೋಚನೆಗಳು ಭಾವನೆಗಳು ಮತ್ತು ಸ್ಮರಣೆಯವರೆಗೆ ಎಲ್ಲವನ್ನು ನಿಯಂತ್ರಿಸುವ ಅಂಗವಾಗಿದೆ ಎಂದು ಹೇಳಿದರು.
‘ವಿಶ್ವ ಮಿದುಳು ದಿನವನ್ನು ಆಚರಿಸುವ ಮೂಲಕ ಮಿದುಳಿನ ಮಹತ್ವ ಹಾಗೂ ಅದರ ಆರೋಗ್ಯ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಿದೆ. ಎಲ್ಲ ಸರ್ಕಾರಿ ಸಂಸ್ಥೆಗಳು, ಆರೋಗ್ಯ ವೃತ್ತಿಪರರು, ಆರೈಕೆದಾರರು, ನಾಗರಿಕರು ಎಲ್ಲರೂ ಸೇರಿ ಜಾಗೃತಿ ಮೂಡಿಸಿ ಕಾರ್ಯಕ್ರಮವನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಪ್ರಸಕ್ತ ಸಾಲಿಗೆ ‘ಎಲ್ಲಾ ವಯಸ್ಸಿನವರಿಗೂ ಮೆದುಳಿನ ಆರೋಗ್ಯ’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಹಿಂದೆ ಕೇವಲ ಹಿರಿಯರಷ್ಟೇ ಮಿದುಳಿನ ತೊಂದರೆಯಿಂದ ಬಳಲುತ್ತಿದ್ದರು. ಆದರೆ, ಈಗ ಎಲ್ಲ ವಯಸ್ಸಿನವರಲ್ಲೂ ಮಿದುಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡಲಾರಂಭಿಸಿವೆ ಎಂದರು.
ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮಂಜುಳಾ ಮಾತನಾಡಿ, ‘ಓದಿನ ಕಡೆ ಗಮನ ಹರಿಸಬೇಕು. ಈ ಬಗೆಯ ಚಿಕಿತ್ಸಾಲಯ ಇದೆ ಎಂದು ಹಾಗೂ ಮಿದುಳು ಆರೋಗ್ಯ ಕುರಿತು ಮನೆಮನೆಗೂ ಜಾಗೃತಿ ಮೂಡಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶುಶ್ರೂಷಕ ಅಧೀಕ್ಷಕಿ ವೀಣಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಮಿದುಳು ಆರೋಗ್ಯ ಕಾರ್ಯಕ್ರಮದ ತಂಡದ ವಿಕ್ರಂ, ಕಾವ್ಯಶ್ರೀ, ಪ್ರಿರ್ದೋಸ್ ಸುಲ್ತಾನ ಹಾಗೂ 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಿದುಳು ಸರಿಯಾಗಿ ಕೆಲಸ ನಿರ್ವಹಿಸದಿದ್ದಲ್ಲಿ ಮನುಷ್ಯರು ಪರಾವಲಂಬಿಯಾಗಿ ಬೇರೆಯವರಿಗೆ ಹೊರೆಯಾಗಬೇಕಾಗುತ್ತದೆ. ಹಾಗಾಗಿ ಮಿದುಳಿನ ಆರೋಗ್ಯದ ಕುರಿತು ಎಲ್ಲರೂ ಆದ್ಯತೆ ಗಮನ ನೀಡಿಡಾ.ಆನಂದ್ ಮಿದುಳು ಆರೋಗ್ಯ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ
ಮಿದುಳಿನ ಆರೋಗ್ಯಕ್ಕೆ ಏನು ಮಾಡಬೇಕು?
*ಆರೋಗ್ಯಕರ ಜೀವನ ಶೈಲಿ
* ಕನಿಷ್ಠ 7ರಿಂದ 8 ಗಂಟೆವರೆಗೆ ನಿದ್ದೆ ಮಾಡುವುದು
* ಮಾನಸಿಕವಾಗಿ ಸಕ್ರಿಯರಾಗಲು ಓದಬೇಕು * ಒತ್ತಡವನ್ನು ನಿಯಂತ್ರಿಸಬೇಕು
* ಧೂಮಪಾನ ಮತ್ತು ಮದ್ಯಪಾನ ಮಾಡದಿರುವುದು
* ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.