ADVERTISEMENT

ಕೊಡಗು | ದಾನಿಯೊಬ್ಬರು ನೀಡಿದ್ದ ಬಸ್‌ತಂಗುದಾಣ ನೆಲಸಮ!

ಸುರಿಯುವ ಮಳೆಯಲ್ಲೇ ನೆನೆಯುತ್ತ ಬಸ್‌ಗಳಿಗಾಗಿ ನಿಲ್ಲಬೇಕಾದ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 3:07 IST
Last Updated 13 ಜುಲೈ 2025, 3:07 IST
ಹಳೇ ಸಿದ್ದಾಪುರದ ಬಸ್‌ ತಂಗುದಾಣ ನೆಲಸಮವಾಗಿರುವುದು
ಹಳೇ ಸಿದ್ದಾಪುರದ ಬಸ್‌ ತಂಗುದಾಣ ನೆಲಸಮವಾಗಿರುವುದು   

ಸಿದ್ದಾಪುರ: ರಾಬರ್ಟ್‌ ಎಂಬ ದಾನಿಯೊಬ್ಬರು ನೀಡಿದ್ದ ಇಲ್ಲಿನ ಸಿದ್ದಾಪುರ– ವಿರಾಜಪೇಟೆ ಮುಖ್ಯ ರಸ್ತೆಯ ಹಳೇ ಸಿದ್ದಾಪುರ ಬಳಿ ಇದ್ದ ಬಸ್‌ ತಂಗುದಾಣವು ಮರ ಕಡಿಯುವ ಸಂದರ್ಭ ಸಂಪೂರ್ಣ ಜಖಂಗೊಂಡಿದ್ದು, ಪ್ರಯಾಣಿಕರು ಇದೀಗ ಸಂಕಷ್ಟ ಎದುರಿಸುವಂತಾಗಿದೆ.

ಹಳೇ ಸಿದ್ದಾಪುರದ ಮೇರಿ ಮಾತಾ ಚರ್ಚ್ ಬಳಿ ಕಳೆದ 30 ವರ್ಷಗಳಿಂದ ಬಸ್‌ತಂಗುದಾಣವಿತ್ತು. ಸ್ಥಳೀಯ ದಾನಿಯೊಬ್ಬರು ತಂಗುದಾಣ ನಿರ್ಮಿಸಿಕೊಟ್ಟಿದ್ದರು. ಹೈಸ್ಕೂಲ್ ಪೈಸಾರಿ, ಗುಹ್ಯ, ಕೂಡುಗದ್ದೆ ಸೇರಿದಂತೆ ಹಳೇ ಸಿದ್ದಾಪುರ ಭಾಗದ ಜನರು ವಿರಾಜಪೇಟೆ ಸೇರಿದಂತೆ ವಿವಿಧ ಪ್ರದೇಶಕ್ಕೆ ತೆರಳಲು ಈ ತಂಗುದಾಣವನ್ನೇ ಆಶ್ರಯಿಸಿದ್ದರು. ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ತಂಗುದಾಣದಿಂದ ಉಪಯೋಗವಾಗುತ್ತಿತ್ತು. ಮಳೆಗಾಲದಲ್ಲಿ ದ್ವಿಚಕ್ರ ಸವಾರರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಆಶ್ರಯತಾಣವೂ ಆಗಿತ್ತು.

ಸಿದ್ದಾಪುರ-ವಿರಾಜಪೇಟೆ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸುತ್ತಿದ್ದು, ಮರ ಕಡಿಯುವ ಸಂದರ್ಭ ಬೃಹತ್ ಕೊಂಬೆ ಬಸ್‌ ತಂಗುದಾಣದ ಮೇಲೆ ಬಿದ್ದಿದೆ. ಕೊಂಬೆಯನ್ನು ಸಣ್ಣ ಸಣ್ಣ ತುಂಡಾಗಿ ಕಡಿಯುವ ಬದಲು ಬೃಹತ್ ಕೊಂಬೆಯನ್ನು ಕಡಿದಿದ್ದು, ಇಡೀ ಬಸ್‌ತಂಗುದಾಣವೇ ನಿರ್ಣಾಮವಾಗಿದೆ. ತಂಗುದಾಣ ಇದ್ದರೂ ಬೇಜವಾಬ್ದಾರಿಯಿಂದ ಮರ ಕಡಿದ ಸಮೀಪದ ತೋಟದ ಮಾಲೀಕರಿಗೆ ಗ್ರಾಮ ಪಂಚಾಯಿತಿ ನೋಟೀಸ್ ಅನ್ನೂ ನೀಡಿದೆ.

ADVERTISEMENT

ಆದರೆ, ಇದೀಗ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಬಸ್‌ಗಾಗಿ ಮಳೆಯಲ್ಲೇ ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಿದ್ದಾಪುರ ಪ್ರೌಢಶಾಲೆ, ಬಿ.ಜಿ.ಎಸ್ ಶಾಲೆ ಸೇರಿದಂತೆ ಸಮೀಪದ ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆ ಬದಿಯಲ್ಲೇ ನಿಲ್ಲುವ ಸ್ಥಿತಿ ಇದೆ.

ಸಿದ್ದಾಪುರದ ಮುಖ್ಯ ಪ್ರದೇಶವಾದ ಹಳೇ ಸಿದ್ದಾಪುರ ತಿರುವಿನಲ್ಲಿ ಬಸ್‌ ತಂಗುದಾಣ ಅತ್ಯಗತ್ಯವಾಗಿದ್ದು, ಶೀಘ್ರದಲ್ಲಿ ಸಂಬಂಧಪಟ್ಟವರು ಬಸ್ ತಂಗುದಾಣವನ್ನು ನಿರ್ಮಾಣ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ದೂರದ ಊರುಗಳಿಗೆ ತೆರಳಲು ಮೇರಿ ಮಾತಾ ಚರ್ಚ್ ಬಳಿಯ ಬಸ್‌ ನಿಲ್ದಾಣವನ್ನೇ ಅವಲಂಬಿಸಿದ್ದೇವೆ. ಮಳೆಗಾಲದಲ್ಲಿ ತಂಗುದಾಣ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದೇವೆ.
ಪ್ರಾರ್ಥನಾ ವಿದ್ಯಾರ್ಥಿನಿ.
ಹಳೇ ಸಿದ್ದಾಪುರದ ತಿರುವಿನಲ್ಲಿ ಬಸ್‌ತಂಗುದಾಣ ಅತ್ಯಗತ್ಯವಾಗಿದ್ದು ಶೀಘ್ರದಲ್ಲಿ ಗ್ರಾಮ ಪಂಚಾಯಿತಿ ಬಸ್‌ತಂಗುದಾಣ ನಿರ್ಮಿಸಬೇಕು. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು
ವಿ.ಕೆ.ಗಿರೀಶ್ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.