ADVERTISEMENT

ವಿವಿಧ ಯೋಜನೆಗಳಡಿ ನೋಂದಣಿ ಮಾಡಿಕೊಳ್ಳಿ

ಟಿಆರ್‌ಎಡಿಎಸ್ ಆನ್‍ಲೈನ್ ಪ್ಲಾಟ್‍ಫಾರ್ಮ್ ಸಂಬಂಧಿತ ಕಾರ್ಯಾಗಾರದಲ್ಲಿ ಸಲಹೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 3:21 IST
Last Updated 25 ನವೆಂಬರ್ 2025, 3:21 IST
ಮಡಿಕೇರಿಯಲ್ಲಿ ನಡೆದ ಕಾರ್ಯಾಗಾರವನ್ನು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಉದ್ಘಾಟಿಸಿದರು
ಮಡಿಕೇರಿಯಲ್ಲಿ ನಡೆದ ಕಾರ್ಯಾಗಾರವನ್ನು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಉದ್ಘಾಟಿಸಿದರು   

ಮಡಿಕೇರಿ: ಇಲ್ಲಿ ಸೋಮವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ನಡೆದ ಕಾರ್ಯಾಗಾರದಲ್ಲಿ ಹಲವು ಯೋಜನೆಗಳ ಕುರಿತು ತಜ್ಞರು ಮಾಹಿತಿ ನೀಡಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ವೇಗಗೊಳಿಸುವ (ಆರ್‌ಎಎಂಪಿ) ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ ಉದ್ಯಮ ನೋಂದಣಿ ಪಡೆದಿರುವ ನೋಂದಾಯಿತ ಉದ್ಯಮಿಗಳಿಗೆ ಟ್ರೇಡ್ ರಿಸಿವೇಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್ (ಟಿಆರ್‌ಎಡಿಎಸ್) ಆನ್‍ಲೈನ್ ಪ್ಲಾಟ್‍ಫಾರ್ಮ್‍ಗೆ ಸಂಬಂಧಿಸಿದಂತೆ ಕಾರ್ಯಾಗಾರ ನಡೆಯಿತು.

ಇದರಲ್ಲಿ ‘ಟ್ರೇಡ್ಸ್’ ಯೋಜನೆಯಡಿ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳಿಗೆಂದೇ ಇರುವ ಹಲವು ಯೋಜನೆಗಳ ಮಾಹಿತಿಯನ್ನು ನೀಡಲಾಯಿತು.

ADVERTISEMENT

ಮುಖ್ಯವಾಗಿ, ಟೆಕ್ಸಾಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮುಖ್ಯ ಸಲಹೆಗಾರ ಸಿದ್ದರಾಜು ಅವರು, ‘ಟ್ರೇಡ್ಸ್ ರಿಸಿವೇಬಲ್ ಎಲೆಕ್ಟ್ರಾನಿಕ್ಸ್ ಡಿಸ್ಕೌಂಟಿಂಗ್ ವ್ಯವಸ್ಥೆ’ ಕುರಿತು ಮಾತನಾಡಿದರು. ಗ್ರಾಹಕರು ಮತ್ತು ಉದ್ಯಮದಾರರಿಗೆ ಇದರಿಂದ ಆಗುವ ಅನುಕೂಲಗಳನ್ನು ವಿವರಿಸಿದರು. ‘ಇದರಲ್ಲಿ ನೋಂದಣಿ ಮಾಡಿಕೊಂಡು ವ್ಯಾಪಾರ, ವಹಿವಾಟು ನಡೆಸಬೇಕು’ ಎಂದು ಸಲಹೆ ನೀಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ ಅವರು ಬ್ಯಾಂಕ್‍ಗಳಲ್ಲಿರುವ ಹಲವು ಯೋಜನೆಗಳ ಕುರಿತು ಮಾಹಿತಿ ನೀಡಿದರು.  ‘ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯಧನ ಕಲ್ಪಿಸಲಾಗುತ್ತದೆ. ಸಣ್ಣ ಸಣ್ಣ ವ್ಯಾಪಾರಿಗಳಿಗೆ ಹಲವಾರು ಸೌಲಭ್ಯಗಳಿದ್ದು, ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುವತ್ತ ಗಮನಹರಿಸಬೇಕು’ ಎಂದು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಕೆ.ಹನುಮಂತರಾಯ ಅವರು, ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಸೂಕ್ಷ್ಮ, ಸಣ್ಣ ಪ್ರಮಾಣದ ಕೈಗಾರಿಕೆ, ಆರೋಗ್ಯ ಮತ್ತು ಆತಿಥ್ಯ ಸೇವಾ ಘಟಕಗಳಿಗೆ ಹಾಗೂ ನಿರ್ಮಾಣ, ರಿಯಲ್ ಎಸ್ಟೇಟ್ ಚಟುವಟಿಕೆಗಳ ಘಟಕಗಳಿಗೆ ₹ 10 ಲಕ್ಷದಿಂದ ₹ 10 ಕೋಟಿಗಳವರೆಗೆ ಬಡ್ಡಿ, ಸಹಾಯಧನ, ಸಾಲ ಯೋಜನೆ ಒದಗಿಸಲಾಗುತ್ತದೆ’ ಎಂದು ಹೇಳಿದರು.

ಲೀಡ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ ಅವರು ಕಾರ್ಯಗಾರದಲ್ಲಿ ವಿಶೇಷ ತರಬೇತಿ ನೀಡಿದರು. ಕುಶಾಲನಗರ ತಾಲ್ಲೂಕು ಒಕ್ಕೂಟ ಆರ್.ಸಿ.ಕೂಡಿಗೆ ನಿರ್ದೇಶಕ ಕೆ.ಪ್ರಕಾಶ್ ಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಸಿ.ಎನ್.ರಘು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.