ಮಡಿಕೇರಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ತೋರಿಸಲೆಂದೇ ಬಿಜೆಪಿಯು, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕುರಿತು ಗೊಂದಲ ಸೃಷ್ಟಿಸಿದೆ’ ಎಂದು ಆರೋಗ್ಯ ಖಾತೆ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು.
‘ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಗೌಡ ಕ್ರಿಶ್ಚಿಯನ್ ಎಂಬುದನ್ನು ನಾವು ಸಮೀಕ್ಷೆಯಲ್ಲಿ ರಿಸಿದ್ದಲ್ಲ. ಇದಕ್ಕೂ ಸಿದ್ದರಾಮಯ್ಯ ಅವರಿಗೂ ಸಂಬಂಧವಿಲ್ಲ. ಹಿಂದಿನ ಸಮೀಕ್ಷೆಯ ವೇಳೆ ಸುಮಾರು 1 ಲಕ್ಷ ಮಂದಿ ಈ ರೀತಿ ಹೇಳಿಕೊಂಡಿದ್ದರು. ಆ ವರದಿಯನ್ನು ಆರ್.ಅಶೋಕ್ ಸಚಿವರಾಗಿದ್ದಾಗ ಒಪ್ಪಿಕೊಂಡಿದ್ದರು’ ಎಂದು ಅವರು ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಹಿಂದೂ ಧರ್ಮದಲ್ಲಿ ಅನೇಕ ಜಾತಿಗಳಿವೆ. ಜಾತಿಗಳಿದ್ದ ಮಾತ್ರಕ್ಕೆ ಧರ್ಮ ಒಡೆಯುತ್ತದೆಯೇ? ಸರ್ಕಾರ ಯಾವುದೇ ಜಾತಿ ಸೃಷ್ಟಿಸುತ್ತಿಲ್ಲ. ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲಿದೆ, ರಾಜ್ಯ ಸರ್ಕಾರವಲ್ಲ. ಅದು ಬೇಡವೆಂದಾದರೆ ಬಿಜೆಪಿಯವರು ಕೂಡಲೇ ಪ್ರಧಾನಿಗೆ ಪತ್ರ ಬರೆಯಲಿ. ನಮ್ಮದು ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಯ ಸಮೀಕ್ಷೆ’ ಎಂದರು.
‘ಸಮೀಕ್ಷೆ ವಿರೋಧಿಸುತ್ತಿರುವ ವಿಜಯೇಂದ್ರ ಅವರಿಗೆ ಎಷ್ಟು ಜ್ಞಾನವಿದೆಯೋ ಗೊತ್ತಿಲ್ಲ. ಮಾಹಿತಿ ಕೊರತೆ ಇರಬಹುದು, ಸರಿಯಾಗಿ ತಿಳಿದುಕೊಳ್ಳಲಿ. ಹಿಂದೆ ಕಾಂತರಾಜ ಆಯೋಗದ ಸಮೀಕ್ಷಾ ವರದಿಯನ್ನು ಇವರ ಸರ್ಕಾರವೇ ಒಪ್ಪಿಕೊಂಡು, ಜಯಪ್ರಕಾಶ್ ಹೆಗ್ಡೆ ಅವರನ್ನು ನೇಮಿಸಿ, ಅವರ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಿಲ್ಲವೇ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.