ADVERTISEMENT

ಲಾಕ್‌ಡೌನ್‌ ಅವಧಿಯಲ್ಲಿ ಮೈದೊಳೆದ ಕಾವೇರಿ, ಕಪಿಲೆಯರು!

ಶುದ್ಧ ನೀರು–ಗಾಳಿಯಿಂದ ಜಲಚರ, ಖಗ–ಮೃಗಗಳಿಗೆ ಹಿಗ್ಗು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 20:00 IST
Last Updated 22 ಏಪ್ರಿಲ್ 2020, 20:00 IST
ಸ್ವಚ್ಛವಾಗಿರುವ ಕಪಿಲಾ ನದಿ
ಸ್ವಚ್ಛವಾಗಿರುವ ಕಪಿಲಾ ನದಿ   
""

ಮಡಿಕೇರಿ/ ಮೈಸೂರು: ಲಾಕ್‌ಡೌನ್‌ ಅವಧಿಯಲ್ಲಿ ನದಿಗಳೆಲ್ಲ ಮೈದೊಳೆದಿವೆ! ಶುಭ್ರವಾಗಿರುವ ನೀರು ಕನ್ನಡಿಯಂತೆ ಫಳಫಳನೆ ಹೊಳೆಯುತ್ತಿದ್ದು, ಜಲಚರಗಳೊಂದಿಗೆ ನದಿ ತಳದ ಕಲ್ಲು–ಮಣ್ಣು ಕೂಡ ನಿರಾತಂಕವಾಗಿ ಉಸಿರಾಡುತ್ತಿವೆ.

ಜೀವನದಿ ಎನಿಸಿದ ಕಾವೇರಿ ಶುದ್ಧವಾಗಿ ಹರಿಯುತ್ತಿದ್ದು, ನೀರಿನ ಗುಣಮಟ್ಟ ವೃದ್ಧಿಯಾಗಿದೆ. ನದಿ ದಡದ ಆಸುಪಾಸಿನಲ್ಲೇ ಇರುವ ಹೋಂ ಸ್ಟೇಗಳು, ರೆಸಾರ್ಟ್‌ಗಳಿಂದ ಕಾವೇರಿಯ ಒಡಲು ಸೇರುತ್ತಿದ್ದ ಕಲುಷಿತ ನೀರು ಸ್ಥಗಿತಗೊಂಡಿದೆ.‌ಉಗಮ ಸ್ಥಾನದಲ್ಲೇ ಕಲುಷಿತಗೊಳ್ಳುತ್ತಿದ್ದ ಕಾವೇರಿ, ಶುಚಿರ್ಭೂತಳಾಗಿದ್ದಾಳೆ. ಕೊಡಗಿನಲ್ಲಿ ಒಂದು ತಿಂಗಳಿಂದ ಪ್ರವಾಸೋದ್ಯಮ ಬಂದ್‌ ಆಗಿದೆ. ದುಬಾರೆಯಲ್ಲಿ ಡೀಸೆಲ್‌ ಮೋಟಾರ್‌ ಬೋಟ್‌ಗಳು ಹೊಗೆ ಉಗುಳುವುದನ್ನು ನಿಲ್ಲಿಸಿವೆ. ಇದೆಲ್ಲದರ ಪರಿಣಾಮ ನದಿ ಮತ್ತು ತೀರದಲ್ಲೆಲ್ಲ ಗೆಲುವು.

‘ಕೆಲವು ವರ್ಷಗಳಿಂದ ಬೇಸಿಗೆ ಅವಧಿಯಲ್ಲಿ ನೀರಿನ ಗುಣಮಟ್ಟ ‘ಬಿ’ ಹಾಗೂ ‘ಸಿ’ ದರ್ಜೆಗೆ ತಲುಪುತ್ತಿತ್ತು. ಆದರೆ, ಈಗ ಏಪ್ರಿಲ್‌ ಅವಧಿಯಲ್ಲೂ ನದಿಯ ನೀರು ‘ಎ’ ದರ್ಜೆಯ ಗುಣಮಟ್ಟಕ್ಕೆ ಏರಿಕೆ ಕಂಡಿರುವ ಸಾಧ್ಯತೆ ಇದೆ. ಲಾಕ್‌ಡೌನ್‌ ಬಳಿಕ ಕಾವೇರಿ ನದಿಯಲ್ಲಿ ನೀರು ಶುಭ್ರವಾಗಿದೆ. ಭಾಗಮಂಡಲ, ನಾಪೋಕ್ಲು, ದುಬಾರೆ, ಕುಶಾಲನಗರ ಭಾಗದಲ್ಲಿ ನೀರಿನ ಗುಣಮಟ್ಟ ಪರಿಶೀಲಿಸಲಾಗಿದೆ. ಪ್ರಯೋಗಾಲಯದ ಅಧಿಕೃತ ವರದಿಯ ನಿರೀಕ್ಷೆಯಲ್ಲಿದ್ದೇವೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ‍ಪ್ರಯೋಗಾಲಯದ ಅಧಿಕಾರಿ ಜಿ.ಆರ್‌.ಗಣೇಶನ್‌ ತಿಳಿಸಿದ್ದಾರೆ.

ADVERTISEMENT

ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಇಲ್ಲಿನ ರಾಜರ ಸೋಪಾನಕಟ್ಟೆ (ಸ್ನಾನಘಟ್ಟ), ಪಶ್ಚಿಮ ವಾಹಿನಿ, ದೊಡ್ಡ ಗೋಸಾಯಿಘಾಟ್‌, ಚಿಕ್ಕ ಗೋಸಾಯಿಘಾಟ್‌, ಕಾವೇರಿ ಸಂಗಮ, ಜೀಬಿ ಗೇಟ್‌, ಚಂದ್ರವನ ಆಶ್ರಮ ತೀರಗಳು ಶಾಂತವಾಗಿವೆ. ಪಿಂಡ ಪ್ರದಾನ, ಅಸ್ಥಿ ವಿಸರ್ಜನೆ, ತಿಥಿ, ಕಾವೇರಿ ಪೂಜೆ ಇತರ ವಿಧಿ ವಿಧಾನಗಳು ಸಂಪೂರ್ಣ ಸ್ಥಗಿತಗೊಂಡಿವೆ. ನಿತ್ಯವೂ ಜನದಟ್ಟಣೆಯಿಂದ ಕೂಡಿರುತ್ತಿದ್ದ ತಿ.ನರಸೀಪುರದ ತ್ರಿವೇಣಿ ಸಂಗಮ, ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯ ಕಪಿಲೆಯಲ್ಲೂ ಇದೀಗ ಜನರ ಸುಳಿವಿಲ್ಲ. ಹೀಗಾಗಿ ಯಾವ ತ್ಯಾಜ್ಯವೂ ನದಿಯನ್ನು ಸೇರುತ್ತಿಲ್ಲ. ಕಾರ್ಖಾನೆಗಳು ಬಂದ್‌ ಆಗಿ, ಅವು ಹೊರ ಹಾಕುತ್ತಿದ್ದ ಕಲ್ಮಶ ನಿಂತಿದೆ.

ಶ್ರೀರಂಗಪಟ್ಟಣದ ಸೋಪಾನಕಟ್ಟೆಯಲ್ಲಿ ಕಾವೇರಿ ನದಿ

ಕೊಳಚೆ ನೀರಿನ ಸೇರ್ಪಡೆ ಹೆಚ್ಚು

‘ಕಾವೇರಿ ಹಾಗೂ ಕಪಿಲೆ ನದಿ ನೀರಿನ ಗುಣಮಟ್ಟ ಪರಿಶೀಲಿಸಲು ಈ ತಿಂಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ವಾರದಲ್ಲಿ ಫಲಿತಾಂಶ ಬರಲಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮೈಸೂರು ಗ್ರಾಮಾಂತರದ ವಿಭಾಗದ ಅಧಿಕಾರಿ ಯತೀಶ್‌ ತಿಳಿಸಿದರು.

ಲಾಕ್‌ಡೌನ್‌ನಿಂದಾಗಿ ನೀರಿನ ಗುಣಮಟ್ಟ ಸುಧಾರಿಸಿದೆ. ಮಡಿಕೇರಿ, ಕುಶಾಲನಗರ, ಕೆ.ಆರ್‌.ನಗರ, ಹುಣಸೂರು, ಮೈಸೂರು, ತಿ.ನರಸೀಪುರ, ನಂಜನಗೂಡು, ಶ್ರೀರಂಗಪಟ್ಟಣದಲ್ಲಿನ ಕೊಳಚೆ ನೀರು ಹೆಚ್ಚಾಗಿ ನದಿ ಸೇರುತ್ತಿದೆ. ಈ ಭಾಗದಲ್ಲಿ ಕೈಗಾರಿಕಾ ತ್ಯಾಜ್ಯ ಕಡಿಮೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.