
ಮಡಿಕೇರಿ: ತ್ಯಾಜ್ಯದ ನೀರು ಚರಂಡಿ ಮೂಲಕ ಕಾವೇರಿ ನದಿಯ ಒಡಲನ್ನು ಕೊಡಗಿನ ಹಲವೆಡೆ ಸೇರುತ್ತಿದೆ. ಇದರಿಂದ ಭಾಗಮಂಡಲದಲ್ಲೇ ನದಿ ನೀರು ಕಲುಷಿತಗೊಂಡಿದೆ ಎಂದು ಪರಿಸರವಾದಿ ಹಾಗೂ ಪರಿಸರ ಮತ್ತು ಆರೋಗ್ಯ ಫೌಂಡೇಷನ್ (ಇಂಡಿಯಾ)ನ ಕಾರ್ಯದರ್ಶಿ ಕರ್ನಲ್ ಸಿ.ಪಿ.ಮುತ್ತಣ್ಣ ತಿಳಿಸಿದರು.
ನದಿಯ ಬಫರ್ ವಲಯದಲ್ಲಿ ವಾಣಿಜ್ಯ ಕಟ್ಟಡಗಳು, ರೆಸಾರ್ಟ್‌ಗಳು ನಿರ್ಮಾಣವಾಗಿವೆ. ಹಲವೆಡೆ ನದಿ ಹರಿಯುವ ಜಾಗವೇ ಒತ್ತುವರಿಯಾಗಿವೆ. ಜಿಲ್ಲಾಡಳಿತಕ್ಕೆ ಈಗಾಗಲೇ ದೂರು ನೀಡಿದ್ದರೂ, ಉದ್ದೇಶಪೂರ್ವಕವಾಗಿ ಒತ್ತುವರಿ ಸರ್ವೆಯನ್ನು ವಿಳಂಬ ಮಾಡಲಾಗುತ್ತಿದೆ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಒಂದು ವೇಳೆ ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಪರಿವರ್ತನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಹೆಚ್ಚು ಹೆಚ್ಚು ಕಟ್ಟಡಗಳು ನಿರ್ಮಾಣವಾಗುತ್ತವೆ. ಗ್ರಾಮ ಪಟ್ಟಣವಾದರೆ ಮಾಲಿನ್ಯ ಹೆಚ್ಚುತ್ತದೆ. ಲಕ್ಷ್ಮಣತೀರ್ಥ ನದಿ ಮಲೀನವಾಗಿ ನಾಗರಹೊಳೆ ಅರಣ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೋರಾಟಗಾರರಾದ ಗೋಪಿನಾಥ್ ತಿಮ್ಮಯ್ಯ, ಎಂ.ಕಾಳಯ್ಯ, ಚೇಂದಂಡ ಮಿಥುನ್ ಪೊನ್ನಪ್ಪ, ಶರತ್ ಸೋಮಣ್ಣ ಭಾಗವಹಿಸಿದ್ದರು.
ಬಫರ್ ವಲಯದಲ್ಲಿ ವಾಣಿಜ್ಯ ಕಟ್ಟಡ, ರೆಸಾರ್ಟ್ ನಿರ್ಮಾಣ ನದಿ ಹರಿಯುವ ಜಾಗವೇ ಒತ್ತುವರಿ: ಆರೋಪ
ವಿರಾಜಪೇಟೆ; ಮಂದಗತಿಯಲ್ಲಿ ಅತಿಕ್ರಮಣ ತೆರವು ಹೋರಾಟಗಾರರಾದ ಹಾಗೂ ವಿರಾಜಪೇಟೆ ನಾಗರಿಕ ಸೇವಾ ಸಮಿತಿಯ ಮುಖಂಡ ದುರ್ಗಾಪ್ರಸಾದ್ ಮಾತನಾಡಿ ‘ವಿರಾಜಪೇಟೆಯ ರಾಜಕಾಲುವೆಗಳಲ್ಲಿನ ಒತ್ತುವರಿ ತೆರವುಗೊಳಿಸಲು 7 ದಿನಗಳ ಗಡುವು ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿ ಹಲವು ದಿನಗಳೇ ಕಳೆದಿದ್ದು ತೆರವು ಕಾರ್ಯ ಮಂದಗತಿಯಲ್ಲಿ ನಡೆಯುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಜನಪ್ರತಿನಿಧಿಗಳು ಚುರುಕಾಗಿ ಕೆಲಸ ಮಾಡಿ ನುಡಿದಂತೆ ನಡೆಯುವ ಸರ್ಕಾರವೆಂದು ತೋರಿಸಿಕೊಡಬೇಕು. ಒಂದು ವೇಳೆ ಆಗದಿದ್ದರೆ ನಾಗರಿಕ ಸಮಿತಿಯ ಇನ್ನುಳಿದ ಪರಿಸರಪ‍್ರೇಮಿ ಸಂಘಟನೆಗಳ ಸಹಯೋಗದೊಂದಿಗೆ ನಿರಂತರ ಹೋರಾಟಗಳನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ವಿರಾಜಪೇಟೆಯಲ್ಲಿ ಮಲೆತಿರಿಕೆಬೆಟ್ಟದ ಬುಡದಿಂದ ಹರಿದು ಪಟ್ಟಣದ ಮಧ್ಯದಿಂದ ಹರಿದು ಹೋಗುತ್ತಿರುವ ನೀರಿನ ತೋಡು ಅತಿ ಹೆಚ್ಚಾಗಿ ಅತಿಕ್ರಮಣಕ್ಕೆ ಒಳಗಾಗಿದೆ. ಇದರಿಂದ ನೀರಿನ ಹರಿಯುವಿಕೆಗೆ ಅಡ್ಡಿಯಾಗಿ ಹೆಚ್ಚು ಮಳೆಯಾದಾಗ ನಗರದೊಳಗೆ ನೀರು ನುಗ್ಗುತ್ತಿದೆ ಎಂದು ಅವರು ಹೇಳಿದರು. ಕಾನೂನು ಪ್ರಕಾರ ಹೊಳೆ ತೋಡಿನ ದಂಡೆಯಿಂದ 30 ಮೀಟರ್‌ವರೆಗೆ ಕಟ್ಟಡಗಳು ಇರಬಾರದು. ಹಾಗಿದ್ದರೂ ಕೆಲವೆಡೆ ತೋಡಿ ಸಮೀಪದಲ್ಲೇ ಮನೆ ಕಟ್ಟಿ ತೋಡಿಗೆ ಪಾಯಿಖಾನೆಯ ನೀರನ್ನು ಬಿಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.