ADVERTISEMENT

ವಿರಾಜಪೇಟೆ: ಸೆರೆಯಾಗದ ದೃಶ್ಯ; ಮರೆಯಾಗದ ಆತಂಕ

ವಿರಾಜಪೇಟೆ: ಕೆಟ್ಟು ನಿಂತಿವೆ ಪ್ರಮುಖ ವೃತ್ತಗಳ ಸಿಸಿ ಟಿ.ವಿ ಕ್ಯಾಮೆರಾಗಳು...

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 19:45 IST
Last Updated 8 ಫೆಬ್ರುವರಿ 2020, 19:45 IST
ವಿರಾಜಪೇಟೆ ಪಟ್ಟಣದ ಗೋಣಿಕೊಪ್ಪಲು ಜಂಕ್ಷನ್ ಬಳಿ ಅಳವಡಿಸಿರುವ ಸಿಸಿ ಟಿ.ವಿ ಕ್ಯಾಮೆರಾಗಳು... 
ವಿರಾಜಪೇಟೆ ಪಟ್ಟಣದ ಗೋಣಿಕೊಪ್ಪಲು ಜಂಕ್ಷನ್ ಬಳಿ ಅಳವಡಿಸಿರುವ ಸಿಸಿ ಟಿ.ವಿ ಕ್ಯಾಮೆರಾಗಳು...    

ವಿರಾಜಪೇಟೆ: ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಸೂಕ್ತ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸುವುದು ಇಂದು ಅತೀ ಅಗತ್ಯ. ಆದರೆ, ವಿರಾಜಪೇಟೆ ಪಟ್ಟಣದಲ್ಲಿ ಅಳವಡಿಸಲಾಗಿರುವ ಬಹುತೇಕ ಸಿಸಿ ಟಿ.ವಿ ಕ್ಯಾಮೆರಾಗಳು ಕೆಲಸಕ್ಕೆ ಬಾರದೇ ಕೇವಲ ಬೆದರು ಬೊಂಬೆಗಳಂತೆ ಕಾರ್ಯ ನಿರ್ವಹಿಸುತ್ತಿರುವುದು ಮಾತ್ರ ಆತಂಕವುಂಟು ಮಾಡುತ್ತಿದೆ.

‘ಜಿಲ್ಲೆಯು ಉಗ್ರರ ತರಬೇತಿ ತಾಣ’ವಾಗುತ್ತಿದೆ ಎಂಬ ಸುದ್ದಿ ಒಂದೆಡೆಯಾದರೆ, ಪಟ್ಟಣದ ಮೂಲಕ ರಾಜ್ಯ ಹಾಗೂ ಅಂತರರಾಜ್ಯ ಹೆದ್ದಾರಿಗಳು ಹಾದುಹೋಗಿರುವುದು ಹಾಗೂ ಸಮೀಪದ ಪೆರುಂಬಾಡಿಯ ಚೆಕ್‌ ಪೋಸ್ಟ್‌ ಮೂಲಕ ದಿನನಿತ್ಯ ನೂರಾರು ವಾಹನಗಳು ಕೇರಳದಿಂದ ಪಟ್ಟಣವನ್ನು ಪ್ರವೇಶಿಸುತ್ತವೆ. ಇದರಿಂದ ಸಹಜವಾಗಿಯೇ ಪಟ್ಟಣದಲ್ಲಿ ಸಾಕಷ್ಟು ವಾಹನ ದಟ್ಟಣೆ ಹೆಚ್ಚಾಗಿದ್ದು, ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಅಗತ್ಯ.

ಟ್ರಾಫಿಕ್ ನಿಯಮ ಉಲ್ಲಂಘನೆ ಹಾಗೂ ಅಪರಾಧ ಕೃತ್ಯಗಳನ್ನು ಪತ್ತೆಹಚ್ಚಲು ಪಟ್ಟಣದ ವಿವಿಧೆಡೆ ಆಯಕಟ್ಟಿನ ಸ್ಥಳಗಳಲ್ಲಿ ಸುಮಾರು 18 ಸಿಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಲಾಗಿದೆ. ಆದರೆ, ಇವುಗಳಲ್ಲಿ ಹೆಚ್ಚಿನವು ನಿರ್ವಹಣೆಯಿಲ್ಲದೇ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವು ಕ್ಯಾಮೆರಾಗಳು ಸಿಡಿಲು ಹೊಡೆದು ಹಾನಿಗೊಳಗಾಗಿದ್ದರೆ, ಕೆಲವು ತಾಂತ್ರಿಕ ಕಾರಣಗಳಿಂದ ದುರಸ್ತಿಗೊಳಗಾಗಿದೆ.

ADVERTISEMENT

ಕೆಲವು ಕ್ಯಾಮೆರಾಗಳು ಸುಸ್ಥಿತಿಯಲ್ಲಿದ್ದರೂ ಕೂಡ ಖಾಸಗಿ ಕಟ್ಟಡಗಳಿಂದ ವಿದ್ಯುತ್ ಪಡೆದಿರುವುದರಿಂದ ಸಮರ್ಪಕ ವಿದ್ಯುತ್ ಸರಬರಾಜು ವ್ಯವಸ್ಥೆಯಿಲ್ಲದಿರುವುದರಿಂದ ಕೆಲವು ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ವಿಶೇಷವಾಗಿ ಪಟ್ಟಣದಲ್ಲಿ ಅಳವಡಿಸಲಾಗಿರುವ ಬಹುತೇಕ ಕ್ಯಾಮೆರಾಗಳು ಎಚ್‌ಡಿ ಗುಣಮಟ್ಟ ಹೊಂದದಿರುವುದರಿಂದ ಅಪರಾಧ ಪ್ರಕರಣದ ಪತ್ತೆಗೆ ತೊಡಕಾಗಿದೆ.

ಕೆಲವು ದಿನಗಳ ಹಿಂದೆ ಪಟ್ಟಣದ ವ್ಯಾಪ್ತಿಯ ಏಕಮುಖ ಸಂಚಾರ ವ್ಯವಸ್ಥೆಯನ್ನು ಹೊಂದಿದ ರಸ್ತೆಯಲ್ಲಿ ವೇಗವಾಗಿ ಬಂದ ಬೈಕ್ ಸವಾರನಿಗೆ ಮಹಿಳಾ ವಕೀಲರೊಬ್ಬರು 'ಇದು ಒನ್ ವೇ...’ ಎಂದು ಸೂಚಿಸಿದ್ದಾರೆ. ಇಷ್ಟರಿಂದಲೇ ಕುಪಿತಗೊಂಡ ಆತ ಹಿಂಬಾಲಿಸಿ ಬಂದು ಪಟ್ಟಣದ ಮುಖ್ಯ ರಸ್ತೆಯಲ್ಲಿಯೆ ವಕೀಲೆಯ ವಾಹನವನ್ನು ಅಡ್ಡಗಟ್ಟಿ ತಾನು ಮಾನವ ಹಕ್ಕು ಆಯೋಗದ ಸದಸ್ಯನೆಂದು ಹೇಳಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಕುರಿತು ವಕೀಲೆ ದೂರು ನೀಡಿದರೂ ಆತನನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.

ಮತ್ತೊಂದು ಪ್ರಕರಣದಲ್ಲಿ ಕೇರಳದ ನೋಂದಣಿ ಸಂಖ್ಯೆ ಹೊಂದಿರುವ ಬೈಕ್‌ನಲ್ಲಿ ಆಗಮಿಸಿದ ಇಬ್ಬರು ಯುವಕರು ಪಟ್ಟಣದ ಮುಖ್ಯ ರಸ್ತೆಯಲ್ಲಿನ ಮನೆಯೊಂದರ ಗೇಟ್‌ ತೆಗೆದು ಮನೆಯ ಬಳಿ ಎರಡುಮೂರು ಬಾರಿ ಬಂದು ಅಸಂಬದ್ಧವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಮಹಿಳೆ ಕೂಗಿಕೊಂಡಾಗ ಅಲ್ಲಿಂದ ಪರಾರಿಯಾಗಿದ್ದಾರೆ. ಪಟ್ಟಣದ ಪ್ರಮುಖ ಭಾಗದಲ್ಲಿ ಹಸುಗೂಸೊಂದು ನಾಪತ್ತೆಯಾಗಿ ತಿಂಗಳುಗಳೇ ಕಳೆದಿದ್ದರೂ, ಇನ್ನು ಸತ್ಯಾಂಶ ಬೆಳಕಿಗೆ ಬಂದಿಲ್ಲ.

ಇಂಥ ಇನ್ನು ಹಲವು ಘಟನೆಗಳಲ್ಲಿ ಸಿಸಿ ಟಿ.ವಿಗಳು ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ಆರೋಪಿಯ ಪತ್ತೆಗೆ ಹಿನ್ನಡೆಯಾಗುತ್ತಿದೆ. ಇಂಥ ಘಟನೆಗಳು ನಡೆದಾಗ ಸಿಸಿ ಟಿವಿ ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಅಸಹಾಯಕತೆ ವ್ಯಕ್ತಪಡಿಸುವಂತಾಗಿದೆ.

ಅಪರಾಧಗಳ ಸಂಖ್ಯೆ ಇಳಿಮುಖಗೊಳ್ಳುವಲ್ಲಿ ಆಯಾಕಟ್ಟಿನ ಸ್ಥಳದಲ್ಲಿ ಅಳವಡಿಸಿರುವ ಸಿಸಿ ಟಿ.ವಿ ಕ್ಯಾಮೆರ ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ.

ಒಂದು ವೇಳೆ ಅಪರಾಧಗಳು ನಡೆದರೂ ಅಪರಾಧಿಗಳ ಪತ್ತೆಕಾರ್ಯ ಪೊಲೀಸ್ ಇಲಾಖೆಗೆ ಸುಲಭವಾಗುತ್ತಿತ್ತು. ಟ್ರಾಫಿಕ್ ನಿಯಂತ್ರಣದಲ್ಲೂ ಸಿಸಿ ಟಿವಿಗಳು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರೆ ತಪ್ಪಿಲ್ಲ. ಸಿಬ್ಬಂದಿ ಕೊರತೆಯ ನಡುವೆ ಎಲ್ಲ ಸ್ಥಳಗಳಲ್ಲು ಖುದ್ದಾಗಿ ನಿಗಾವಹಿಸಲು ಸಾಧ್ಯವಿಲ್ಲ. ಠಾಣೆಯಲ್ಲಿ ಕುಳಿತ ಸಿಬ್ಬಂದಿಯು ಸಿಸಿ ಟಿ.ವಿಯಿಂದಾಗಿ ಪಟ್ಟಣದ ಯಾವ ಭಾಗದಲ್ಲಿ ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ ಮಾಡಲಾಗಿದೆ ಎನ್ನುವುದು ಸೇರಿದಂತೆ ಸಂಚಾರಿ ನಿಯಮ ಉಲ್ಲಂಘನೆಯಾಗಿರುವುದನ್ನು ಪತ್ತೆ ಮಾಡಿ ಸಮೀಪದಲ್ಲಿರುವ ಸಿಬ್ಬಂದಿಗೆ ಮಾಹಿತಿ ನೀಡಲು ಅನುಕೂಲವಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.