ADVERTISEMENT

ಮಡಿಕೇರಿ | ಸೆಸ್ಕ್‌: ಮಡಿಕೇರಿಗೆ ಪ್ರತ್ಯೇಕ ಸಹಾಯವಾಣಿ ಆರಂಭ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 3:57 IST
Last Updated 3 ಜೂನ್ 2025, 3:57 IST
<div class="paragraphs"><p>ಸಹಾಯವಾಣಿ</p></div>

ಸಹಾಯವಾಣಿ

   

ಮಡಿಕೇರಿ: ಸೆಸ್ಕ್‌ ವತಿಯಿಂದ ವಿದ್ಯುತ್ ಸಂಬಂಧಿತ ದೂರುಗಳನ್ನು ನೀಡಲು ಮಡಿಕೇರಿ ವಿಭಾಗಕ್ಕೆ ಪ್ರತ್ಯೇಕವಾದ ಸಹಾಯವಾಣಿಯನ್ನು ಆರಂಭಿಸಲಾಗಿದೆ.

ಉಚಿತ ಸಹಾಯವಾಣಿ ಸಂಖ್ಯೆ ‘1800-599-0061’ಗೆ ಕರೆ ಮಾಡಿ ವಿದ್ಯುತ್ ಸಂಬಂಧಿತ ದೂರುಗಳನ್ನು ಗ್ರಾಹಕರು ನೀಡಬಹುದು.

ADVERTISEMENT

ತೀವ್ರವಾದ ಮಳೆ-ಗಾಳಿಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,442 ಕಂಬಗಳು, 11 ವಿದ್ಯುತ್ ಪರಿವರ್ತಕಗಳು ಹಾಗೂ 13.105 ಕಿ.ಮೀ. ವಾಹಕಗಳು ಹಾನಿಗೊಳಗಾಗಿದೆ. ಈಗಾಗಲೇ 1,091 ಕಂಬಗಳನ್ನು ಹಾಗೂ 9 ಪರಿವರ್ತಕಗಳನ್ನು ಬದಲಾಯಿಸಲಾಗಿದೆ. ನಿತ್ಯ ಸರಾಸರಿ 100 ಕಂಬಗಳ ಬದಲಾವಣೆಯ ಕಾಮಗಾರಿ ನಡೆಯುತ್ತಿದೆ. ಮಳೆ ಗಾಳಿಯ ತೀವ್ರತೆ ಹೆಚ್ಚಾಗಿರುವುದರಿಂದ ವಿದ್ಯುತ್ ಕಂಬಗಳ ಮುರಿಯುವಿಕೆಯೂ ಮುಂದುವರಿಯುತ್ತಿದೆ.

ವಿದ್ಯುತ್ ಜಾಲದ ದುರಸ್ತಿ ಕಾರ್ಯವನ್ನು ಚುರುಕಗೊಳಿಸಲು, ವಿದ್ಯುತ್ ಜಾಲವನ್ನು ಪುನಃ ಸ್ಥಾಪಿಸಲು ಮಡಿಕೇರಿ ವಿಭಾಗದ 231  ಸಿಬ್ಬಂದಿ, ಇತರೆ ವಿಭಾಗಗಳಿಂದ 52  ಸಿಬ್ಬಂದಿ ಹಾಗೂ ಹೊರಗುತ್ತಿಗೆಯಿಂದ 75 ಸಿಬ್ಬಂದಿ ನೇಮಿಸಲಾಗಿದ್ದು, ಇವರ ಜೊತೆ 124  ವಿದ್ಯುತ್ ಗುತ್ತಿಗೆದಾರ ಸಿಬ್ಬಂದಿ ನಿರಂತರವಾಗಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

10 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ವಿಪರೀತ ಗಾಳಿಯಿಂದ ಕಂಬದ ಬದಲಾವಣೆ ಕಾಮಗಾರಿ ಹಾಗೂ ದುರಸ್ತಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ಮಳೆಗಾಳಿಯಿಂದ ಪದೇಪದೇ ವಿದ್ಯುತ್ ಜಾಲಕ್ಕೆ ಹಾನಿ ಉಂಟಾಗುತ್ತಿರುವುದರಿಂದ ವಿದ್ಯುತ್ ಸ್ಥಗಿತಗೊಳ್ಳುತ್ತಿದೆ.

ಶಾಖಾಧಿಕಾರಿಗಳು ಬ್ರೇಕ್‍ಡೌನ್ ನಿರ್ವಹಣೆ ಕಾಮಗಾರಿಗಳಲ್ಲಿ ನಿರತರಾಗಿದ್ದು, ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕರ ದೂರವಾಣಿ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಗ್ರಾಹಕರ ದೂರುಗಳನ್ನು ದಾಖಲಿಸಿ ನಿವಾರಿಸುವ ನಿಟ್ಟಿನಲ್ಲಿ ಮಡಿಕೇರಿ ವಿಭಾಗಕ್ಕೆ ಪ್ರತ್ಯೇಕವಾದ ಸಹಾಯವಾಣಿ ಆರಂಭಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಸೆಸ್ಕ್‌ನ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ರಾಮಚಂದ್ರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.