ADVERTISEMENT

ಆನ್‌ಲೈನ್ ಔಷಧ ವ್ಯಾಪಾರಕ್ಕೆ ಕಡಿವಾಣ ಹಾಕಲು ಔಷಧ ವ್ಯಾಪಾರಸ್ಥರ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:24 IST
Last Updated 20 ಫೆಬ್ರುವರಿ 2026, 4:24 IST
ಮಡಿಕೇರಿಯಲ್ಲಿ ಕೊಡಗು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಸಂಘದ ಕಚೇರಿ ಮತ್ತು ಫಾರ್ಮಾ ಭವನವನ್ನು ಕರ್ನಾಟಕ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್.ರಘುನಾಥ ರೆಡ್ಡಿ ಉದ್ಘಾಟಿಸಿದರು
ಮಡಿಕೇರಿಯಲ್ಲಿ ಕೊಡಗು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಸಂಘದ ಕಚೇರಿ ಮತ್ತು ಫಾರ್ಮಾ ಭವನವನ್ನು ಕರ್ನಾಟಕ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್.ರಘುನಾಥ ರೆಡ್ಡಿ ಉದ್ಘಾಟಿಸಿದರು   

ಮಡಿಕೇರಿ: ಆನ್‌ಲೈನ್‌ನಲ್ಲಿ ಔಷಧ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು ಎಂದು ಕರ್ನಾಟಕ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್.ರಘುನಾಥ ರೆಡ್ಡಿ ಒತ್ತಾಯಿಸಿದರು.

ಇಲ್ಲಿ ಕೊಡಗು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಸಂಘದ ಕಚೇರಿ ಮತ್ತು ಫಾರ್ಮಾ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಔಷಧ ವಹಿವಾಟು ನೆಪದಲ್ಲಿ ಮಾದಕ ದ್ರವ್ಯ ಸಾಗಾಣಿಕೆಯೂ ಹೆಚ್ಚಾಗುತ್ತಿದೆ. ಇಂಥ ಸಂದರ್ಭದಲ್ಲಿ ಅನಗತ್ಯವಾಗಿ ಔಷಧ ವ್ಯಾಪಾರಿಗಳನ್ನು ತನಿಖಾ ಸಂಸ್ಥೆಗಳು ವಿಚಾರಣೆಗೊಳಪಡಿಸುತ್ತಿವೆ. ಆನ್‌ಲೈನ್ ಮೂಲಕ ಮಾದಕ ವಸ್ತುಗಳನ್ನು ಸಲೀಸಾಗಿ ಸಾಗಾಣಿಕೆ ಮಾಡುವ ದಂಧೆಗೆ ಕಡಿವಾಣ ಹಾಕಲು ಆನ್‌ಲೈನ್ ಔಷಧ ವಹಿವಾಟಿಗೇ ತಡೆಯೊಡ್ಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಸಂಘದ ಅಧೀನದಲ್ಲಿರುವ ಔಷಧ ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಮಾದಕ ಪದಾರ್ಥಗಳು, ಮಾದಕ ದ್ರವ್ಯಗಳ ಮಾರಾಟಕ್ಕೆ ಅವಕಾಶ ನೀಡಬಾರದೆಂದು ಈಗಾಗಲೇ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಪ್ರಸ್ತುತ 26 ಸಾವಿರ ಔಷಧ ಅಂಗಡಿಗಳಿದ್ದು, 45 ಸಾವಿರದಷ್ಟು ಔಷಧ ವ್ಯಾಪಾರಿಗಳಿದ್ದಾರೆ. ಔಷಧ ವ್ಯಾಪಾರಿಗಳು ಸಮಾಜಮುಖಿಯಾಗಿ ನಿಯಮ ಪಾಲಿಸಿಕೊಂಡು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಹೀಗಿದ್ದರೂ, ಸರ್ಕಾರಗಳು ಒಂದಿಲ್ಲೊಂದು ನಿಯಮಗಳ ಮೂಲಕ ಔಷಧ ವ್ಯಾಪಾರಿಗಳಿಗೆ ಸಮಸ್ಯೆಯುಂಟು ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿಂದ ಮುಂದಿನ ದಿನಗಳಲ್ಲಿ ಬ್ಯಾಂಕ್ ಪ್ರಾರಂಭಿಸುವಂತೆ ಸಲಹೆ ನೀಡಿದ ಅವರು ಫಾರ್ಮಾ ಭವನ ಕೊಡಗಿನ ಔಷಧ ವ್ಯಾಪಾರಸ್ಥರೆಲ್ಲರ ಒಗ್ಗಟ್ಟಿನ ಪ್ರತೀಕದ ಭವನವಾಗಲಿ ಎಂದೂ ಹೇಳಿದರು.

ಸಂಘದ ರಾಜ್ಯ ಕಾನೂನು ಸಲಹೆಗಾರ ಕೆ.ಹರೀಶ್ ಮಾತನಾಡಿ, ‘ಅವೈಜ್ಞಾನಿಕವಾದ ಕಾನೂನುಗಳು ವ್ಯಾಪಾರಸ್ಥರನ್ನು ಅತಂತ್ರಗೊಳಿಸುತ್ತಿವೆ. ಹೀಗಿದ್ದರೂ, ಇಂಥ ಕಾನೂನುಗಳ ವಿರುದ್ದ ರಾಜ್ಯ ಸಂಘವು ನಿರಂತರ ಹೋರಾಟ ಮಾಡುತ್ತಾ ಔಷಧ ವ್ಯಾಪಾರಿಗಳ ಹಿತಚಿಂತನೆ ಕಾಯಲು ಬದ್ದವಾಗಿದೆ’ ಎಂದು ಹೇಳಿದರು.

‌ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಂಬೇಕಲ್ ಜೀವನ್ ಕುಶಾಲಪ್ಪ ಮಾತನಾಡಿ, ‘ಔಷಧ ವ್ಯಾಪಾರ ಕೇವಲ ವಹಿವಾಟು ಅಲ್ಲ. ಅದೊಂದು ಸೇವೆ’ ಎಂದು ಹೇಳಿದರು.

ಫಾರ್ಮಾ ಭವನ ಜಿಲ್ಲೆಯ ಔಷಧ ವ್ಯಾಪಾರಸ್ಥರ ಒಗ್ಗಟ್ಟಿನ ಮನೆಯಂತಿರಲಿದೆ. ಸಂಘವು ಜನರ ಆರೋಗ್ಯದ ಹಿತಚಿಂತನೆಯೊಂದಿಗೆ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಕೊಡಗು ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕ ಅಜಯ್ ರಾಜ್ ಷಾ, ಕರ್ನಾಟಕ ಔಷದ ವ್ಯಾಪಾರಿಗಳ ಸಂಘದ ಖಜಾಂಜಿ ಬಿ.ಉಮೇಶ್, ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಗೌರವ ಕಾರ್ಯದರ್ಶಿ ಡಿ.ಐ.ಪುರುಷೋತ್ತಮ್, ಉಪಾಧ್ಯಕ್ಷರಾದ ಅಂಬೆಕಲ್ ವಿನೋದ್, ಮೇರ್ವಿನ್ ಫರ್ನಾಂಡೀಸ್, ಜಂಟಿ ಕಾರ್ಯದರ್ಶಿ ಕೆ.ವಸಂತ್ ಕುಮಾರ್, ಖಜಾಂಚಿ ಪ್ರಸಾದ್ ಗೌಡ, ನಿರ್ದೇಶಕ ಜಗನ್ನಾಥ್, ಡಾ.ಸುಧಾಕರ್ ಶೆಟ್ಟಿ ಭಾಗವಹಿಸಿದ್ದರು.

ಕೊಡಗಿನ ಹಿರಿಯ ಔಷಧ ವ್ಯಾಪಾರಸ್ಥರಾದ ಸುದರ್ಶನ್ ರೈ, ಎಸ್.ಎಲ್.ಶ್ರೀಪತಿ, ಕೆ.ಗೋಪಾಲ ಭಟ್, ಎಂ.ಎಂ.ನರೇಂದ್ರ, ಮೇರ್ವಿನ್ ಫೆರ್ನಾಂಡೀಸ್, ಅಂಬೆಕಲ್ ಕುಶಾಲಪ್ಪ, ಎಚ್.ಎಸ್.ಸುರೇಶ್, ಎಸ್.ಎಸ್. ಶ್ರೀನಿವಾಸ್, ಎನ್.ಯು. ಭೀಮಯ್ಯ, ಜಿ.ಎಸ್. ಬಸವರಾಜ್ ಅವರನ್ನು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.