ಮಡಿಕೇರಿ: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024–25ನೇ ಸಾಲಿನಲ್ಲಿ ಒಟ್ಟು ₹ 54.90ಲಕ್ಷ ನಿವ್ವಳ ಲಾಭ ಗಳಿಸಿದ್ದು, ಆ.24ರಂದು ವಾರ್ಷಿಕ 48ನೇ ಮಹಾಸಭೆಯು ನರೇಂದ್ರಮೋದಿ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ತಿಳಿಸಿದರು.
ಸದಸ್ಯರಿಗೆ ಶೇ 15ರಂತೆ ಲಾಭಾಂಶ ನೀಡುವ ಕುರಿತು ವಾರ್ಷಿಕ ಮಹಾಸಭೆಯ ಒಪ್ಪಿಗೆಗೆ ಮಂಡಿಸಲು ನಿರ್ಧರಿಸಲಾಗಿದೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2024–25ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಸಂಘದಲ್ಲಿ ಒಟ್ಟು ಎ ತರಗತಿಯ 1,195ಸದಸ್ಯರಿದ್ದು, ಸದಸ್ಯರಿಂದ ಪಾಲು ಬಂಡವಾಳ ಒಟ್ಟು ₹ 125.62 ಲಕ್ಷಗಳಿವೆ ಎಂದು ತಿಳಿಸಿದರು.
ಸಂಘದ ಬಂಡವಾಳವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಾಲು ಹಣ, ಕ್ಷೇಮ ನಿಧಿ ಹಾಗೂ ನಿರಖು ಠೇವಣಿಯಲ್ಲಿ ಹಾಗೂ ಇತರೆ ಸಹಕಾರ ಸಂಸ್ಥೆಯಲ್ಲಿ ಪಾಲು ಮತ್ತು ನಿರಖು ಠೇವಣಿ ರೂಪದಲ್ಲಿ ಒಟ್ಟು ₹ 59.07 ಕೋಟಿ ಠೇವಣಿ ಇಡಲಾಗಿದೆ. ಸದಸ್ಯರ ಅವಶ್ಯಕತೆಗನುಗುಣವಾಗಿ ಕೆ.ಸಿ.ಸಿ ಫಸಲು ಸಾಲ ಸೇರಿ ಇನ್ನಿತರ ಸಾಲವನ್ನು ಸದಸ್ಯರಿಗೆ ವಿತರಿಸಲಾಗಿದೆ ಎಂದು ಹೇಳಿದರು.
ಸಂಘವು ಎಂ.ಸಿ.ಎಫ್ ಮದ್ರಾಸ್ ಫರ್ಟಿಲೈಸರ್ಸ್ ಇಂಡಿಯನ್ ಪೊಟ್ಯಾಷ್ ಇಫ್ಕೊ ಫ್ಯಾಕ್ಟ್, ಪ್ಯೂಚರ್ ಫರ್ಟಿಲೈಸರ್ಸ್ ಜುವಾರಿ, ಕೋರಮಂಡಲ್, ಸ್ಟೇನ್ಸ್, ಸಂಸ್ಥೆಗಳ ಸಗಟು ಮತ್ತು ರಿಟೇಲ್ ಪರವಾನಗಿ ಹೊಂದಿದ್ದು ನೇರವಾಗಿ ರಸಗೊಬ್ಬರ ಖರೀದಿಸಿ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸಂಘದಲ್ಲಿ ಗೊಬ್ಬರ ಕೊರತೆ ಉಂಟಾಗಿಲ್ಲ ಎಂದರು.
2024–25ನೇ ಸಾಲಿನಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ಬೇಕಾದ ರಸಗೊಬ್ಬರ, ಹತ್ಯಾರು, ಸಿಮೆಂಟ್ ಹಾಗೂ ಇತರೆ ಅಗತ್ಯ ಸಾಮಾಗ್ರಿಗಳ ವಹಿವಾಟು ನಡೆಸಿ ₹ 38.22 ಲಕ್ಷ ವ್ಯಾಪಾರ ಲಾಭಗಳಿಸಿದೆ ಎಂದು ಹೇಳಿದರು.
ಸಂಘ ಜನಸ್ನೇಹಿಯಾಗಿ ಮತ್ತು ರೈತಪರ ಚಿಂತನೆಯೊಂದಿಗೆ ಅಭಿವೃದ್ಧಿ ಹೊಂದುತ್ತಿದ್ದರೂ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರಶಸ್ತಿಯನ್ನು ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯ ಕಚೇರಿ ಕಟ್ಟಡದ ಮೇಲ್ಭಾಗದಲ್ಲಿ ಪುಣ್ಯಕೋಟಿ ಅತಿಥಿಗೃಹ ನಿರ್ಮಿಸಿ ಬಾಡಿಗೆಗೆ ನೀಡಲಾಗುತ್ತಿದ್ದು, ಲಾಭದಲ್ಲಿ ಮುನ್ನಡೆದಿದೆ. ಸಂಘದಲ್ಲಿ ಮಣ್ಣು ಪರೀಕ್ಷಾಕೇಂದ್ರವನ್ನು ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಇದೀಗ ಇ-ಸ್ಟಾಂಪ್ ಸೌಲಭ್ಯ ಮತ್ತು ಆರ್‌ಟಿಸಿ ಕೂಡ ತೆಗೆದುಕೊಡಲಾಗುವುದು ಎಂದರು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶುದ್ಧನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಆರಂಭದಲ್ಲಿ ಅಧಿಕಾರ ವಹಿಸಿಕೊಂಡ ವೇಳೆ ನಷ್ಟದಲ್ಲಿದ್ದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಎಲ್ಲರ ಸಹಕಾರದಿಂದ ಲಾಭದೆಡೆಗೆ ಕೊಂಡೊಯ್ಯಲಾಗಿದೆ. ಎಲ್ಲಾ ರೈತರು, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಪೇರಿಯನ ಎಸ್.ಪೂಣಚ್ಚ, ನಿರ್ದೇಶಕರಾದ ಬಿ.ಎಂ.ಕಾಶಿ, ಬಟ್ಟೀರ ಸಿ.ವೇಣುಗೋಪಾಲ, ಮರದಾಳು ಜಿ.ಚೇತನ್ ಹಾಗೂ ಚೋಳಪಂಡ ಎಂ.ವಿಜಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.