ಕುಶಾಲನಗರ: ‘ಚಿಕ್ಲಿಹೊಳೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ನಾಲೆಗಳ ಹೂಳು ತೆಗೆದಿಲ್ಲ. ಇದರಿಂದ ಕೊನೆ ಹಂತದ ರೈತರ ಜಮೀನಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ’ ಎಂದು ನೀರಾವರಿ ಇಲಾಖೆ ವಿರುದ್ಧ ಗ್ರಾಮಸ್ಥರು ಮಂಗಳವಾರ ನಡೆದ ನಂಜರಾಯಪಟ್ಟಣ ಗ್ರಾಮ ಸಭೆಯಲ್ಲಿ ಅಸಮಧಾನ ವ್ಯಕ್ತಪಡಿಸಿದರು.
ಸಮೀಪದ ನಂಜರಾಯಪಟ್ಟಣ ಗ್ರಾಮಪಂಚಾಯಿತಿ 2024-25ನೇ ಸಾಲಿನ ಮೊದಲನೇ ಅವಧಿ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ಹೊಸಪಟ್ಟಣ ಗ್ರಾಮದ ಸಮುದಾಯ ಭವನದಲ್ಲಿ ನಡೆಯಿತು.
‘ಚಿಕ್ಲಿಹೊಳೆ ಜಲಾಶಯ ವ್ಯಾಪ್ತಿ ಜಂಗಲ್ ಕ್ಲಿಯರ್ ನಡೆಯುತ್ತಿಲ್ಲ, ಈ ಬಗ್ಗೆ ಸರಿಯಾದ ಪರಿಶೀಲನೆ ಅಗತ್ಯ, ನಾಲೆಗಳಲ್ಲಿ ಬೃಹತ್ ಹೊಂಡ ನಿರ್ಮಾಣಗೊಂಡಿವೆ. ಅಣೆಕಟ್ಟೆ ನೀರು ಬದಲು ಮಳೆ ನೀರು ನಾಲೆ ಮೂಲಕ ಕೃಷಿಕರ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಬೇಸತ್ತಿದ್ದಾರೆ’ ಎಂದು ಗ್ರಾಮಸ್ಥರಾದ ಕಾಳಿಂಗ, ರವಿ ಆರೋಪಿಸಿದರು.
ಮೀನುಕೊಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಹ್ಯಾಂಗಿಂಗ್ ಸೋಲಾರ್ ಫೆನ್ಸ್‌ಗಳು ನೆಲಕಚ್ಚಿದ್ದು ಈ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಬೇಕಿದೆ ಎಂದು ಸದಸ್ಯ ರಕ್ಷಿತ್ ಮಾವಾಜಿ ಡಿಆರ್‌ಎಫ್ಒ ಸುಬ್ರಾಯ ಅವರನ್ನು ಆಗ್ರಹಿಸಿದರು.
‘ಮಳೆಯಿಂದ ನೆಲಕ್ಕುರುಳಿದ ವಿದ್ಯುತ್ ಕಂಬಗಳು, ತಂತಿಗಳನ್ನು ನಿರ್ವಹಣೆ ಮಾಡುವಲ್ಲಿ ಸೆಸ್ಕ್ ವಿಳಂಬ ಧೋರಣೆ ಅನುಸರಿಸಿದೆ’ ಎಂದು ಆರೋಪಿಸಿದ ರಕ್ಷಿತ್ ಅವತು ಸೆಸ್ಕ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಕಾಡಾನೆ ಹಾವಳಿಯಿಂದ ಗಿರಿಜನರ ಬೆಳೆನಾಶಕ್ಕೆ ಪರಿಹಾರ ದೊರಕುತ್ತಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ ಸದಸ್ಯ ಆರ್.ಕೆ.ಚಂದ್ರ, ಅರಣ್ಯ ಹಕ್ಕು ಕಾಯ್ದೆ ಅನ್ವಯ ಸೂಕ್ತ ಪರಿಹಾರ ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮವಹಿಸಲು ಆಗ್ರಹಿಸಿದರು.
ಸ್ಮಶಾನ, ಪಡಿತರ ಚೀಟಿ, ಕೆರೆ ಒತ್ತುವರಿ, ಸ್ವಚ್ಛತೆ ಮತ್ತಿತರ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಸಿ.ಎಲ್.ವಿಶ್ವ ಮಾತನಾಡಿ, ‘ನಂಜರಾಯಪಟ್ಟಣ ಗ್ರಾಮವನ್ನು ಹೋಬಳಿ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು. ದುಬಾರೆಯಲ್ಲಿ ತೂಗುಸೇತುವೆ ನಿರ್ಮಾಣ ಮಾಡಬೇಕು. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಹ್ಯಾಂಗಿಂಗ್ ಫೆನ್ಸಿಂಗ್ ನಿರ್ಮಾಣ, ಖಾಯಂ ಪಶುವೈದ್ಯರ ನೇಮಕಾತಿ ವಿಚಾರಗಳ ಬಗ್ಗೆ ಗ್ರಾಮ ಪಂಚಾಯಿತಿ ಮೂಲಕ ಸಂಬಂಧಿಸಿದ ಇಲಾಖೆಗಳಿಗೆ ಹಲವು ಪತ್ರ ವ್ಯವಹಾರ ನಡೆಸುತ್ತಾ ಬರುತ್ತಿದೆ. ಅದರೆ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. 8 ಕುಟುಂಬಗಳಿಗೆ ಸ್ಲೈಂಡಿಂಗ್ ರೈಲ್ವೇ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಆದರೆ, ಇದು ಹಾನಿಗೊಳಗಾಗಿರುವ ಸ್ಲೈಂಡಿಂಗ್ ಬ್ಯಾರಿಕೇಡ್ ದುರಸ್ತಿಗೆ ಅರಣ್ಯ ಇಲಾಖೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಗೌಡ ಸಭೆಯ ನೋಡಲ್ ಅಧಿಕಾರಿಯಾಗಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಉಪಾಧ್ಯಕ್ಷೆ ಕುಸುಮಾ, ಸದಸ್ಯರಾದ ಆರ್.ಕೆ.ಚಂದ್ರ, ರಕ್ಷಿತ್ ಮಾವಾಜಿ, ಸಮೀರ, ಜಾಜಿ, ಲೋಕನಾಥ್, ಗಿರಿಜಮ್ಮ, ಪಿಡಿಒ ರಾಜಶೇಖರ್, ಕಾರ್ಯದರ್ಶಿ ಶೇಷಗಿರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.