ADVERTISEMENT

ಅಯ್ಯಂಗೇರಿಯಲ್ಲಿ ಶ್ರದ್ಧಾಭಕ್ತಿಯ ಚಿನ್ನತಪ್ಪ ಉತ್ಸವ

ಕೃಷ್ಣನದು ಎನ್ನಲಾದ ಕೊಳಲು ನುಡಿಸಿದ ಹಿರಿಯರು, ಭಕ್ತಿಭಾವ ಮೆರೆದ ಭಕ್ತವೃಂದ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 11:39 IST
Last Updated 16 ಫೆಬ್ರುವರಿ 2023, 11:39 IST
ನಾಪೋಕ್ಲು ಸಮೀಪದ ಅಯ್ಯಂಗೇರಿಯಲ್ಲಿ ಚಿನ್ನತಪ್ಪ ಉತ್ಸವದ ಅಂಗವಾಗಿ ಬುಧವಾರ ಶ್ರೀ ಕೃಷ್ಣನದ್ದು ಎನ್ನಲಾದ ಕೊಳಲನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು
ನಾಪೋಕ್ಲು ಸಮೀಪದ ಅಯ್ಯಂಗೇರಿಯಲ್ಲಿ ಚಿನ್ನತಪ್ಪ ಉತ್ಸವದ ಅಂಗವಾಗಿ ಬುಧವಾರ ಶ್ರೀ ಕೃಷ್ಣನದ್ದು ಎನ್ನಲಾದ ಕೊಳಲನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು   

ನಾಪೋಕ್ಲು: ಸಮೀಪದ ಅಯ್ಯಂಗೇರಿಯಲ್ಲಿ ಪ್ರತಿವರ್ಷ ಗ್ರಾಮಸ್ಥರು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಚಿನ್ನತಪ್ಪ ಉತ್ಸವ ಬುಧವಾರ ಶ್ರದ್ಧಾಭಕ್ತಿಯಿಂದ ಜರುಗಿತು. ಅಧಿಕ ಸಂಖ್ಯೆಯಲ್ಲಿ ಭಕ್ತರು ಉತ್ಸವಕ್ಕೆ ಬಂದು ಶ್ರೀ ಕೃಷ್ಣನ ಕೊಳಲಿನ ನಾದವನ್ನು ಆಲಿಸಿದರು. ದೇವಾಲಯದಲ್ಲಿ ಹರಕೆ, ಪೂಜೆ ಸಲ್ಲಿಸಿದರು.

ಮಂಗಳವಾರ ಬೆಳಿಗ್ಗೆಯಿಂದಲೇ ವಾರ್ಷಿಕ ಉತ್ಸವ ಆರಂಭಗೊಂಡಿತ್ತು. ವಿವಿಧ ಭಾಗಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿ ಕೃಷ್ಣನ ಕೊಳಲಿನ ನಾದವನ್ನು ಆಲಿಸಿದರು. ಸೂರ್ಯಾಸ್ತವಾಗುತ್ತಿದ್ದಂತೆ ಸಮೀಪದ ಕಲ್ಲು ಹೊಳೆಗೆ ತೆರಳಿದ ಅವರು ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಬುಧವಾರ ನಸುಕಿನ 3 ಗಂಟೆಯವರೆಗೆ ಧಾರಾಪೂಜೆ, ಮಧ್ಯಾಹ್ನ ದೇವಾಲಯದಿಂದ ಶ್ರೀಕೃಷ್ಣನದು ಎನ್ನಲಾದ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತೆಗೆಯಲಾಯಿತು. ಹಬ್ಬಕ್ಕೆ ನಿಗದಿಪಡಿಸಿದ ಕುಟುಂಬದ ಹಿರಿಯರಾದ ಬಿದ್ದಿಯಂಡ ಹರೀಶ್ ಕೊಳಲನ್ನು ಹಿಡಿದು ನಿರ್ದಿಷ್ಟ ಸ್ಥಳಗಳಲ್ಲಿ ಮೂರು ಬಾರಿ ನುಡಿಸುತ್ತಾ ‘ಊರ ಮಂದ್’ಗೆ ಆಗಮಿಸಿದರು.

ADVERTISEMENT

ಅಶ್ವತ್ಥ ವೃಕ್ಷದ ಕೆಳಗೆ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಕೃಷ್ಣನ ಕೊಳಲನ್ನು ನುಡಿಸಲಾಯಿತು. ಇದೇ ಸಂದರ್ಭ ನಾಳಿಯಂಡ ಮಾನಿ ಎಂಬಲ್ಲಿಂದ ಎತ್ತುಪೋರಾಟದೊಂದಿಗೆ ಹೊರಟ ಶ್ವೇತ ವಸ್ತ್ರಧರಿಸಿದ ಮಹಿಳೆಯರು ಚೆಂಬುಚೆರ್ಕ್ ಹೊತ್ತು ಊರಮಂದ್‌ಗೆ ಬಂದರು. ಊರಮಂದ್ ಗದ್ದೆಯಲ್ಲಿ ಮೂರು ಸುತ್ತು ಎತ್ತು ಪೋರಾಟ ನಡೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಹಬ್ಬದ ಕಟ್ಟು ಸಡಿಲಿಸಲಾಯಿತು.

ತಪ್ಪಡ್ಕ ಸಲ್ಲಿಸಿದ ಬಳಿಕ ಶುದ್ಧಮುದ್ರಿಕೆಯವರನ್ನು ಮೀನಿಗೆ ಅಕ್ಕಿ ಹಾಕಲು ಆಹ್ವಾನಿಸಲಾಯಿತು. ಧಾರಾಪೂಜೆ ನಡೆದ ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಮೀನಿಗೆ ಅಕ್ಕಿ ಹಾಕಿದ ಬಳಿಕ ದೇವಾಲಯಕ್ಕೆ ತೆರಳುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.

ಚಿನ್ನತಪ್ಪ ಉತ್ಸವದಲ್ಲಿ ಅಯ್ಯಂಗೇರಿ ಗ್ರಾಮದ ಅಧಿಕ ಸಂಖ್ಯೆಯ ಗೊಲ್ಲ ಜನಾಂಗ ಬಾಂಧವರೊಂದಿಗೆ ಗ್ರಾಮದ 14 ಕುಲದವರು ಭಾಗಿಯಾಗಿದ್ದರು. ಉತ್ಸವದಲ್ಲಿ ತಕ್ಕರಾಗಿ ಬಿದ್ದಿಯಂಡ ಸುಭಾಷ್ ಕಾರ್ಯನಿರ್ವಹಿಸಿದರು.

ಎರಡು ದಿನದ ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಂಡ ಗ್ರಾಮದ ಭಕ್ತರು ಗುರುವಾರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.