ತೆಂಗಿನಕಾಯಿ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ತೆಂಗಿನಕಾಯಿ ಧಾರಣೆಯಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ಗ್ರಾಹಕರ ಜೇಬಿಗೆ ಹೊರೆಯಾಗಿದೆ.
ಕಳೆದ 3 ತಿಂಗಳ ಹಿಂದೆ ಇಲ್ಲಿನ ಹಾಪ್‌ಕಾಮ್ಸ್‌ನಲ್ಲಿ ಕೆ.ಜಿಗೆ ₹ 40ರಿಂದ 50 ಇದ್ದ ಧಾರಣೆ ಈಗ ₹ 80 ತಲುಪಿದೆ. ಮೈಸೂರು ಹಾಪ್‌ಕಾಮ್ಸ್‌ನಲ್ಲೂ ಇದೇ ದರ ಇದೆ. ಇನ್ನುಳಿದಂತೆ, ಖಾಸಗಿ ಮಾರುಕಟ್ಟೆಯಲ್ಲೂ ದರ ದುಪ್ಪಟ್ಟಾಗಿದೆ.
ಪ್ರತಿ ವಾರ ನಡೆಯುವ ಸಂತೆಯಲ್ಲಿ ಸಾಮಾನ್ಯವಾಗಿ ಒಂದು ತೆಂಗಿನಕಾಯಿಗೆ ಕನಿಷ್ಠ ₹ 10ರಿಂದ ಗರಿಷ್ಠ ₹ 20 ಅಥವಾ ₹ 25ರವರೆಗೆ ದರ ಇರುತ್ತಿತ್ತು. ಆದರೆ, ಈಗ ₹ 10 ಇರಲಿ ₹ 20ಕ್ಕೂ ತೆಂಗಿನಕಾಯಿ ಸಿಗದ ಸ್ಥಿತಿ ನಿರ್ಮಾಣವಾಗಿದೆ. ₹ 10ಕ್ಕೆ ಸಿಗುತ್ತಿದ್ದ ತೆಂಗಿನಕಾಯಿ ಈಗ ₹ 30 ದಾಟಿದೆ. ಮಧ್ಯಮ ಗಾತ್ರದ ತೆಂಗಿನಕಾಯಿ ಬೆಲೆಯೇ ಈಗ ₹ 40 ಆಗಿದೆ. ಇದರಿಂದ ಜನಸಾಮಾನ್ಯರು ಖರೀದಿಗೆ ಹಿಂದೇಟು ಹಾಕುವಂತಾಗಿದೆ.
ಸಾಮಾನ್ಯವಾಗಿ, ಕೊಡಗಿನಲ್ಲಿ ಅಡುಗೆಗೆ ತೆಂಗಿನಕಾಯಿಯನ್ನು ಹೆಚ್ಚಾಗಿಯೇ ಬಳಸುತ್ತಾರೆ. ಸಾಮಾನ್ಯ ಜನರೂ ತೆಂಗಿನಕಾಯಿ ಬಳಸದೇ ಅಡುಗೆ ಮಾಡುವುದು ಅಪರೂಪ. ಎಲ್ಲರಿಗು ಬೇಕಾಗಿ, ಎಲ್ಲರಿಗೂ ಅಗತ್ಯವಾಗಿಯೆ ಇರುವ ತೆಂಗಿನಕಾಯಿ ಧಾರಣೆ ತುಟ್ಟಿಯಾಗಿರುವುದು ಎಲ್ಲರಿಗೂ ಹೊರೆ ಎನಿಸಿದೆ.
ಇನ್ನು ಶುಭ ಸಮಾರಂಭಗಳಿಗೂ ತೆಂಗಿನಕಾಯಿಗೂ ಅವಿನಾಭಾವ ಸಂಬಂಧ ಇದೆ. ಈ ಸಮಾರಂಭದಲ್ಲಿ ಮಾಡುವ ಅಡುಗೆಗಳಿಗೆ ತೆಂಗಿನಕಾಯಿಯನ್ನು ಬಳಸಿಯೇ ಬಳಸುತ್ತಾರೆ. ದರ ಏರಿಕೆಯು ಶುಭ ಸಮಾರಂಭ ಮಾಡುವವರ ಖರ್ಚು ಹೆಚ್ಚಾಗುವಂತೆ ಮಾಡಿದೆ.
ಕೊಡಗಿಗೆ ಸಾಮಾನ್ಯವಾಗಿ ಹೊಳೆನರಸೀಪುರ, ಚನ್ನರಾಯಪಟ್ಟಣ ಭಾಗಗಳಿಂದ ಹೆಚ್ಚಾಗಿ ತೆಂಗಿನಕಾಯಿ ಆವಕವಾಗುತ್ತಿದೆ. ಈಗ ಅಲ್ಲಿಂದ ಆವಕವಾಗುವುದು ಕಡಿಮೆಯಾಗುತ್ತಿದೆ. ಜೊತೆಗೆ, ಅಲ್ಲಿಯೇ ದರ ಹೆಚ್ಚಾಗಿದೆ. ಹಾಗಾಗಿ, ಜಿಲ್ಲೆಯಲ್ಲೂ ತೆಂಗಿನಕಾಯಿಯ ದರ ದುಪ್ಪಟ್ಟಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
‘ಸಾಕಷ್ಟು ವರ್ಷಗಳ ಹಿಂದೆ ತೆಂಗಿನಕಾಯಿಯ ಲಭ್ಯತೆ ಕಡಿಮೆಯಾಗಿ ಅದರ ದರ ದುಬಾರಿಯಾಗಿ ಜನಸಾಮಾನ್ಯರು, ಬಡವರು ಖರೀದಿಸುವುದಕ್ಕೆ ಆಗುತ್ತಿರಲಿಲ್ಲ. ಆಗ ಅಂಗಡಿಗಳಲ್ಲಿ ತೆಂಗಿನಕಾಯಿಯ ಬದಲಿಗೆ ತೆಂಗಿನಕಾಯಿಯ ಚೂರುಗಳನ್ನು ಚಿಲ್ಲರೆ ದರದಲ್ಲಿ ಮಾರಾಟ ಮಾಡುತ್ತಿದ್ದರು. ಈಗಿನ ಪರಿಸ್ಥಿತಿ ನೋಡಿದರೆ ಹಿಂದಿನ ಪರಿಸ್ಥಿತಿ ನೆನಪಾಗುತ್ತಿದೆ’ ಎಂದು ಹಿರಿಯ ರಾಮು ಅಜ್ಜ ಹೇಳುತ್ತಾರೆ.
ಸಂತೆ ಮಾರುಕಟ್ಟೆಗಳಲ್ಲೂ ದರ ಹೆಚ್ಚಳ ತುಟ್ಟಿಯಾದ ತೆಂಗಿನಕಾಯಿಯಿಂದ ಜನಸಾಮಾನ್ಯರು ಹೈರಾಣು ಮಳೆ ಸುರಿಯುವವರೆಗೂ ಇದೇ ಪರಿಸ್ಥಿತಿ ನಿರೀಕ್ಷೆ
ಕಾಯಾಗುವ ಮುನ್ನವೇ ಎಳನೀರನ್ನೇ ಹೆಚ್ಚಾಗಿ ಮಾರಾಟ ಮಾಡಲಾಗುತ್ತಿದ್ದು ತೆಂಗಿನಕಾಯಿ ದರ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚೆಗೆ ದರ ವಿಪರೀತ ಏರಿಕೆಯಾಗುತ್ತಿದೆನಾಸಿರ್ ತೆಂಗಿನಕಾಯಿ ವ್ಯಾಪಾರಿ.
ದರ ಏರಿಕೆ ಏಕೆ? ಚಳಿಗಾಲ ತೆರೆಮರೆಗೆ ಸರಿಯುತ್ತಿದ್ದು ಬಿರು ಬೇಸಿಗೆ ಎಲ್ಲೆಡೆ ಆವರಿಸುತ್ತಿದೆ. ಬಿಸಿಲ ಝಳ ಹೆಚ್ಚಾಗಿ ಎಲ್ಲರೂ ಬಸವಳಿಯುವಂತಹ ಸ್ಥಿತಿ ಇದೆ. ಕಳೆದ ವರ್ಷವಾದರೂ ಜನವರಿ ತಿಂಗಳಿನಿಂದಲೂ ಒಂದಿಷ್ಟು ಮಳೆಯಾಗುತ್ತಿತ್ತು. ಮೋಡಕವಿದ ವಾತಾವರಣ ಇರುತ್ತಿತ್ತು. ಆದರೆ ಈ ಬಾರಿ ಈ ವರ್ಷ ಇನ್ನೂ ಮೊದಲ ಮಳೆ ಸುರಿದಿಲ್ಲ. ಮೋಡ ಕವಿದ ವಾತಾವರಣ ಇರಲಿ ಗಗನದಲ್ಲಿ ಅಂಗೈ ಅಗಲದಷ್ಟು ಮೋಡವೂ ಇಲ್ಲ. ಇದರಿಂದ ಹೆಚ್ಚಿನ ಜನರು ಎಳನೀರಿನ ಮೊರೆ ಹೋಗುತ್ತಿದ್ದಾರೆ. ಇದೇ ಪರಿಸ್ಥಿತಿ ರಾಜ್ಯದ ಉದ್ದಗಲಕ್ಕೂ ಇದೆ. ಹಾಗಾಗಿ ಎಳನೀರಿಗೆ ಸೃಷ್ಟಿಯಾಗಿರುವ ಬೇಡಿಕೆಯಿಂದ ರೈತರು ತೆಂಗಿನಕಾಯಿ ಆಗುವುದಕ್ಕೂ ಮುನ್ನ ಎಳನೀರನ್ನೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ತೆಂಗಿನಕಾಯಿಯ ಆವಕ ಕಡಿಮೆಯಾಗಿದ್ದು ದರ ಏರಿಕೆ ಇದೇ ಪ್ರಧಾನ ಕಾರಣ ಎನಿಸಿದೆ. ಮಳೆ ಸುರಿದು ವಾತಾವರಣ ತಂಪಾಗಿ ಎಳನೀರಿಗೆ ಬೇಡಿಕೆ ಇಳಿಕೆಯಾಗುವವರೆಗೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.