ADVERTISEMENT

ಕೊಡಗು: ಕಾಫಿ ತೂಕದಲ್ಲೂ ವಂಚನೆ ಜಾಲ, ವ್ಯಾಪಾರಿಗಳ ವಿರುದ್ಧ 9 ಪ್ರಕರಣಗಳು ದಾಖಲು

ಕೊಡಗು ಜಿಲ್ಲೆಯಲ್ಲಿ ವ್ಯಾಪಾರಿಗಳ ವಿರುದ್ಧ ದಾಖಲಾದವು 9 ಪ್ರಕರಣಗಳು

ಅದಿತ್ಯ ಕೆ.ಎ.
Published 9 ಮಾರ್ಚ್ 2022, 19:45 IST
Last Updated 9 ಮಾರ್ಚ್ 2022, 19:45 IST
ಕಾಫಿ ಪಾರ್ಚಿಮೆಂಟ್‌ (ಸಂಗ್ರಹ ಚಿತ್ರ)
ಕಾಫಿ ಪಾರ್ಚಿಮೆಂಟ್‌ (ಸಂಗ್ರಹ ಚಿತ್ರ)   

ಮಡಿಕೇರಿ: ಈ ವರ್ಷ ಅರೇಬಿಕಾ ಕಾಫಿ ಧಾರಣೆ ಏರಿಕೆಯಿಂದ ಬೆಳೆಗಾರರು ಸಂತಸದ ಅಲೆಯಲ್ಲಿ ತೇಲುತ್ತಿದ್ದರೂ, ಕಾಫಿ ವ್ಯಾಪಾರಸ್ಥರು ತೂಕದಲ್ಲಿ ಎಸಗುತ್ತಿರುವ ವಂಚನೆಯಿಂದ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.

ಕಾಫಿ ಬೆಳೆಯುವ ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರಿನಲ್ಲಿ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎಂದು ಬೆಳೆಗಾರರು ಸಂಶಯ ವ್ಯಕ್ತಪಡಿಸಿದ್ದಾರೆ.

ಹೊರ ಜಿಲ್ಲೆ, ಹೊರ ರಾಜ್ಯದ ವ್ಯಾಪಾರಸ್ಥರು ಜಿಲ್ಲೆಯ ಕಾಫಿ ಬೆಳೆಗಾರರ ಮನೆ ಬಳಿಗೆ ಬಂದು ಕಾಫಿ ಹಾಗೂ ಕಾಳು ಮೆಣಸು ಖರೀದಿಸುವಾಗ ತೂಕದಲ್ಲಿ ಮೋಸ ಎಸಗುತ್ತಿರುವುದು ಪತ್ತೆಯಾಗಿದೆ.

ADVERTISEMENT

ಕಾನೂನು ಮಾಪನಶಾಸ್ತ್ರ ನಿರೀಕ್ಷಕರಿಗೆ (ತೂಕ ಅಳತೆ) ದೂರು ಬಂದಿದ್ದ ಕಾರಣಕ್ಕೆ ವಿಶೇಷ ತಪಾಸಣೆ ನಡೆಸಿದ ಇಲಾಖೆ ತಂಡವು, ವರ್ತಕರು ಬೆಳೆಗಾರರಿಗೆ ಮೋಸ ಎಸಗುತ್ತಿರುವುದನ್ನು ಪತ್ತೆ ಮಾಡಿದೆ. ಜಿಲ್ಲೆಯ ಐದು ತಾಲ್ಲೂಕಿನಲ್ಲಿ ಕಾಫಿ ವ್ಯಾಪಾರ ನಡೆಯುತ್ತಿದ್ದ 30 ಸ್ಥಳಗಳಲ್ಲಿ ದಾಳಿ ನಡೆಸಿದ ತಂಡವು 9 ಪ್ರಕರಣಗಳನ್ನು ದಾಖಲಿಸಿಕೊಂಡು ಬಿಸಿ ಮುಟ್ಟಿಸಿದೆ.

ತೂಕದಲ್ಲಿ ವ್ಯತ್ಯಾಸ: ಕಾಫಿ ಬೆಳೆಗಾರರು ಸಾಮಾನ್ಯವಾಗಿ ಎಲೆಕ್ಟ್ರಿಕ್‌ ತೂಕದ ಯಂತ್ರಗಳನ್ನು ಮನೆಗಳಲ್ಲಿ ಇಟ್ಟುಕೊಂಡಿರುತ್ತಾರೆ. ಕಾಫಿ, ಕಾಳು ಮೆಣಸು ಒಣಗಿಸಿದ ನಂತರ ತೂಕ ಹಾಕಿ ಗೋದಾಮಿನಲ್ಲಿ ದಾಸ್ತಾನು ಮಾಡುತ್ತಾರೆ. ಕಾಫಿಯನ್ನು 50 ಕೆ.ಜಿ ತೂಕದ ಲೆಕ್ಕಾಚಾರ ಹಾಗೂ ಕಾಳು ಮೆಣಸು ಕ್ವಿಂಟಲ್‌ ಲೆಕ್ಕದಲ್ಲಿ ವರ್ತಕರು ಖರೀದಿಸುತ್ತಾರೆ.

‘ಈಗಿರುವ ಧಾರಣೆಯಲ್ಲಿ ಅರೇಬಿಕಾ ಕಾಫಿ ಪಾರ್ಚಿಮೆಂಟ್‌ನಲ್ಲಿ ಒಂದು ಕೆ.ಜಿ.ಯನ್ನು ತೂಕದಲ್ಲಿ ಮೋಸ ನಡೆದರೂ ಬೆಳೆಗಾರರಿಗೆ ₹312 ನಷ್ಟವಾಗಲಿದೆ. ಅದೇ ರೀತಿಯಲ್ಲಿ ಚೆರ್‍ರಿಯಲ್ಲಿ ಒಂದು ಕೆ.ಜಿ.ಯನ್ನು ತೂಕದಲ್ಲಿ ಕಳೆದರೂ ₹152 ನಷ್ಟವಾಗಲಿದೆ. ರೋಬಸ್ಟಾ ಪಾರ್ಚಿಮೆಂಟ್‌ನಲ್ಲಿ ಒಂದು ಕೆ.ಜಿ. ಮೋಸ ಎಸಗಿದರೂ ಬೆಳೆಗಾರರು ₹162 ಹಾಗೂ ರೋಬಸ್ಟಾ ಚೆರ್‍ರಿಯ ತೂಕದಲ್ಲಿ ಮೋಸವಾದರೆ ₹80 ಕಳೆದುಕೊಳ್ಳಬೇಕಾಗುತ್ತದೆ’ ಎಂದು ಬೆಳೆಗಾರರು ನೋವಿನಿಂದ ಹೇಳುತ್ತಾರೆ.

‘ನಾವೇ ತೂಕ ಮಾಡಿಯೇ ಕಾಫಿ ಹಾಗೂ ಕಾಳು ಮೆಣಸು ದಾಸ್ತಾನು ಮಾಡಿದ್ದರೂ ವ್ಯಾಪಾರಸ್ಥರು ತೇವಾಂಶದ ಹೆಸರಿನಲ್ಲಿ ಕಳೆಯುತ್ತಾರೆ. ಬೆಳೆಗಾರರು ಏನು ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಕೆಲವೊಮ್ಮೆ ಕಾಫಿ ಕೊಯ್ಲು ಸಂದರ್ಭದಲ್ಲಿ ಅಕಾಲಿಕ ಮಳೆಯಾದರೆ ಕಾಫಿ ಒಣಗಿಸುವುದು ತ್ರಾಸದಾಯಕ. ಈ ವರ್ಷ ಅದೇ ಪರಿಸ್ಥಿತಿಯಿತ್ತು. ಕಾಫಿ ಕಪ್ಪಿಟ್ಟಿದ್ದರೆ ತೂಕದಲ್ಲಿ ಕಳೆಯುತ್ತಾರೆ. ಆಗಲೂ ನಷ್ಟವಾಗಲಿದೆ’ ಎಂದು ಬೆಳೆಗಾರರ ಸುರೇಶ್‌ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.