
ಮಡಿಕೇರಿ: ಸರ್ಕಾರ ಕಾಫಿ ಬೆಳೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದ್ದರಿಂದ ಸಂಪಾಜೆ, ಕರಿಕೆ, ಪೆರಾಜೆ, ಚೆಂಬು ಭಾಗದಲ್ಲಿಯೂ ಸಹ ಕಾಫಿ ಬೆಳೆಯಬೇಕು ಎಂದು ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ ಹಾಗೂ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಪೆರಾಜೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶುಕ್ರವಾರ 72ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಕಾಫಿ ಉತ್ಪಾದನೆಗೆ ಸಹಾಯಧನ ಕಲ್ಪಿಸುತ್ತಿದೆ. ಜತೆಗೆ ಪ್ರೋತ್ಸಾಹ ನೀಡುತ್ತಿದೆ. ಹಾಗಾಗಿ ಅಡಿಕೆ, ರಬ್ಬರ್, ಗೇರು ಜೊತೆಗೆ ಕಾಫಿ ಬೆಳೆಯಲು ಪ್ರಯತ್ನಿಸುವಂತೆ ಹೇಳಿದರು.
ದೇಶವು ಕಾಫಿ ಉತ್ಪಾದನೆಯಲ್ಲಿ 3.60 ಲಕ್ಷ ಮೆಟ್ರಿಕ್ ಟನ್ ಉತ್ಪಾದಿಸುತ್ತಿದ್ದು, ಇದರಲ್ಲಿ 2.30 ಲಕ್ಷ ಮೆಟ್ರಿಕ್ ಟನ್ ಕಾಫಿಯನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಉಳಿದಂತೆ, ₹ 1.50 ಲಕ್ಷ ಮೆಟ್ರಿಕ್ ಟನ್ ದೇಶದಲ್ಲಿಯೇ ವ್ಯಾಪಾರ ಆಗುತ್ತಿದೆ ಎಂದು ತಿಳಿಸಿದರು.
ರಾಜ್ಯವು ಕಾಫಿ ಉತ್ಪಾದನೆಯಲ್ಲಿ ಶೇ 60 ರಿಂದ 65ರಷ್ಟು, ಕೊಡಗು ಜಿಲ್ಲೆ ಕಾಫಿ ಉತ್ಪಾದನೆಯಲ್ಲಿ ಶೇ 30 ರಿಂದ 35 ರಷ್ಟು, ಹಾಗೆಯೇ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಿಂದ ಶೇ 25 ರಿಂದ 30 ರಷ್ಟು, ಕೇರಳ, ತಮಿಳುನಾಡು, ಆಂದ್ರ ಪ್ರದೇಶದಲ್ಲಿ ಶೇ 20 ರಿಂದ 30 ರಷ್ಟು ಹಾಗೆಯೇ ಈಶಾನ್ಯ ರಾಜ್ಯಗಳಲ್ಲಿ ಶೇ 10 ರಿಂದ 15 ರಷ್ಟು ಕಾಫಿಯನ್ನು ಉತ್ಪಾದಿಸಲಾಗುತ್ತಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಮಾತನಾಡಿ, ‘ಸಹಕಾರ ಕ್ಷೇತ್ರ ಇಡೀ ವಿಶ್ವದಲ್ಲಿ ಬೃಹತ್ ಆಗಿ ಬೆಳೆದಿದ್ದು, ಇದನ್ನು ಮತ್ತಷ್ಟು ಬಲಪಡಿಸಿ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದರು.
1905 ರಲ್ಲಿ ಸಹಕಾರ ಚಳುವಳಿ ಆರಂಭವಾಯಿತು. ಕೊಡಗು ಜಿಲ್ಲೆಯಲ್ಲಿ ಶಾಂತಳ್ಳಿಯಲ್ಲಿ ಸಹಕಾರ ಸಂಘ ಸ್ಥಾಪನೆಯಾಗಿ ಇಂದು ಹೆಮ್ಮರವಾಗಿ ಬೆಳೆದಿದೆ. ಜಿಲ್ಲೆಯಲ್ಲಿ 288 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ಸಹಕಾರ ಸಂಘ ಸ್ಥಾಪಿಸುವ ಮೂಲಕ ಹಿರಿಯರು ಸಹಕಾರ ಸಂಘ ಬಲಪಡಿಸಲು ಶ್ರಮಿಸಿದ್ದಾರೆ ಎಂದರು.
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ಕೊಡಗು ಜಿಲ್ಲೆ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕ ಹೊಸೂರು ಸತೀಶ್ ಕುಮಾರ್, ಯೂನಿಯನ್ ನಿರ್ದೇಶಕರಾದ ಶ್ಯಾಮಲಾ, ಕೆ.ಎಂ.ತಮ್ಮಯ್ಯ, ವಿ.ಕೆ.ಅಜಯ್ ಕುಮಾರ್, ಬಲ್ಲಾರಂಡ ಮಣಿಉತ್ತಪ್ಪ, ಎಸ್.ಆರ್.ಸುನಿಲ್ ರಾವ್, ಎಂ.ಟಿ.ಸುಬ್ಬಯ್ಯ, ಪಿ.ಎನ್.ಚಂದ್ರಪ್ರಕಾಶ್, ಕೆ.ಎನ್.ಸತೀಶ್, ಸಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪಿ.ಎಂ.ಅಶೋಕ್ ಭಾಗವಹಿಸಿದ್ದರು.
ಮುಂದಿನ ದಿನಗಳಲ್ಲಿ ಎಲ್ಲಾ ವ್ಯವಹಾರಗಳು ಸಹಕಾರ ಸಂಘಗಳ ಮೂಲಕ ನಡೆಯುವ ಸಾಧ್ಯತೆ ಇದೆಎ.ಕೆ.ಮನುಮುತ್ತಪ್ಪ ಯೂನಿಯನ್‍ನ ನಿರ್ದೇಶಕ
ಸಹಕಾರ ಸಂಘಕ್ಕೆ 121 ವರ್ಷಗಳ ಇತಿಹಾಸವಿದ್ದು ಸಿದ್ದನೆಗೌಡ ಪಾಟೀಲ ಅವರು ಸಹಕಾರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ರಾಬಿನ್ ದೇವಯ್ಯ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.