
ರಾಜ್ಯದಾದ್ಯಂತ ಚಳಿ ಹೆಚ್ಚಳವಾಗಿದೆ.
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಚಳಿ ಥರಗುಟ್ಟಿಸುತ್ತಿದೆ. ಕನಿಷ್ಠ ತಾಪಮಾನ ಒಂದಂಕಿಗೆ ಕುಸಿದಿದ್ದು, ಜನಸಾಮಾನ್ಯರು ಚಳಿಯಿಂದ ತತ್ತರಿಸಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಡಿ. 19ರ ಬೆಳಿಗ್ಗೆ 8.30ರಿಂದ 20ರ ಬೆಳಿಗ್ಗೆ 8.30ರವರೆಗೆ ಕೇವಲ 7.4 ಡಿಗ್ರಿ ಸೆಲ್ಸಿಯಸ್ ಇತ್ತು. ಅಂದು ರಾಜ್ಯದಲ್ಲಿ ದಾಖಲಾದ ಕನಿಷ್ಠ ತಾಪಮಾನಗಳ ಜಿಲ್ಲೆಗಳ ಪೈಕಿ ಕೊಡಗು 7ನೇ ಸ್ಥಾನ ಪಡೆದಿತ್ತು. ಬೀದರ್‌ನಲ್ಲಿ ಅತ್ಯಂತ ಕಡಿಮೆ 5.3 ಇತ್ತು.
ಡಿ. 20ರ ಬೆಳಿಗ್ಗೆ 8.30ರಿಂದ 21ರವರೆಗೆ ಬೆಳಿಗ್ಗೆ 8.30ರವರೆಗೆ ಕೊಡಗಿನಲ್ಲಿ 9 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿತ್ತು. ಈ ಮೂಲಕ ರಾಜ್ಯದಲ್ಲಿ ಕನಿಷ್ಠ ತಾಪಮಾನ ದಾಖಲಾದ ಜಿಲ್ಲೆಗಳ ಪೈಕಿ ಕೊಡಗು 13ನೇ ಸ್ಥಾನದಲ್ಲಿತ್ತು.
ಡಿ. 21ರ ಬೆಳಿಗ್ಗೆ 8.30ರಿಂದ 22ರ ಬೆಳಿಗ್ಗೆ 7.30ರವರೆಗೆ ಕೊಡಗಿನಲ್ಲಿ 9.1 ಡಿಗ್ರಿ ಸೆಲ್ಸಿಯನಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗುವ ಮೂಲಕ ರಾಜ್ಯದಲ್ಲಿ ಕನಿಷ್ಠ ತಾಪಮಾನ ದಾಖಲಾದ ಜಿಲ್ಲೆಗಳ ಪೈಕಿ ಕೊಡಗು 6ನೇ ಸ್ಥಾನ ಪಡೆದಿತ್ತು.
ಭಾರತೀಯ ಹವಾಮಾನ ಇಲಾಖೆಯ ಪರಿಕರಗಳು ಸಹ ಕೊಡಗಿನಲ್ಲಿ ಈ ಅವಧಿಯಲ್ಲಿ ಕನಿಷ್ಠ ತಾಪಮಾನ 12 ಎಂದು ದಾಖಲಿಸಿವೆ.
ಇದರಿಂದ ಎಲ್ಲೆಲ್ಲೂ ಚಳಿಯ ವಾತಾವರಣ ಮೂಡಿದ್ದು, ಮಧ್ಯಾಹ್ನದ ಹೊತ್ತೂ ಸ್ವೆಟರ್ ಹಾಕಿಕೊಳ್ಳಬೇಕಾದ ಸ್ಥಿತಿ ಇದೆ. ಬೆಳಿಗ್ಗೆ ಹೊತ್ತು ಬೀಸುವ ಚಳಿಗಾಳಿಗೆ ಕೈಗಳು ಮರಗಟ್ಟಿ ಹೋಗುವಂತಾಗುತ್ತಿವೆ. ಜನಸಾಮಾನ್ಯರು ಚಳಿಯಿಂದ ಹೈರಾಣಾಗಿದ್ದಾರೆ.
ಏರಿಕೆಯಾಗುತ್ತಿದೆ ಶೀತ, ನೆಗಡಿ, ಜ್ವರ: ಕೊಡಗು ಜಿಲ್ಲೆಯಲ್ಲಿ ತಾಪಮಾನ ಕುಸಿಯುತ್ತಿದ್ದಂತೆ ನೆಗಡಿ, ಶೀತ, ಜ್ವರದ ಪ್ರಕರಣಗಳ ಸಂಖ್ಯೆಯೂ ಏರುಗತಿಯಲ್ಲಿದೆ. ಈ ವಿಷಯವನ್ನು ದೃಢಪಡಿಸಿರುವ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್, ಚಳಿಯಿಂದ ಎಲ್ಲರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಮಾತ್ರವಲ್ಲ, ಉಬ್ಬಸ ಇರುವವರು, ವೃದ್ಧರು ಸಹ ಚಳಿಯಲ್ಲಿ ಹೊರಗೆ ಹೋಗುವುದನ್ನು ಕಡಿಮೆ ಮಾಡಬೇಕು. ಚಳಿ ಹೆಚ್ಚಾಗಿರುವುದರಿಂದ ಎಲ್ಲರೂ ಮುಂಜಾಗ್ರತೆ ವಹಿಸಬೇಕು.
ತೀವ್ರ ಚಳಿ ಇರುವುದರಿಂದ ವೃದ್ಧರು ರೋಗಿಗಳು ಉಬ್ಬಸದಿಂದ ಬಳಲುವವರು ಚಳಿಯಲ್ಲಿ ವಾಯುವಿಹಾರ ಮಾಡುವುದನ್ನು ಆದಷ್ಟು ತಪ್ಪಿಸಬೇಕು. ಬಿಸಿನೀರು ಕುಡಿಯಬೇಕುಡಾ.ಕೆ.ಎಂ.ಸತೀಶ್‌ಕುಮಾರ್ ಜಿಲ್ಲಾ ಆರೋಗ್ಯಾಧಿಕಾರಿ.
ಪತ್ರಿಕೆ ವಿತರಕರು ಭದ್ರತಾ ಸಿಬ್ಬಂದಿಗೆ ಕಷ್ಟ
ಕುಸಿಯುತ್ತಿರುವ ಕನಿಷ್ಠ ತಾಪಮಾನ ಹಾಗೂ ಬೀಸುತ್ತಿರುವ ಚಳಿ ಗಾಳಿಯು ಎಲ್ಲರಿಗಿಂತ ಹೆಚ್ಚಾಗಿ ದಿನಪತ್ರಿಕೆ ಹಾಕುವವರು ಹಾಗೂ ಭದ್ರತಾ ಸಿಬ್ಬಂದಿಯನ್ನು ಹೈರಣಾಗಿಸಿದೆ. ನಸುಕಿನಲ್ಲೇ ಎದ್ದು ತಮ್ಮ ಕೆಲಸ ಆರಂಭಿಸುವ ದಿನಪತ್ರಿಕೆ ಹಾಕುವವರು ಚಳಿಯಿಂದ ತತ್ತರಿಸಿ ಹೋಗಿದ್ದಾರೆ. ಎಟಿಎಂಗಳು ವಿವಿಧ ಬ್ಯಾಂಕ್ ಹಾಗೂ ಕಚೇರಿಗಳ ಮುಂದೆ ಕಾವಲು ಕಾಯುವ ಭದ್ರತಾ ಸಿಬ್ಬಂದಿಯ ಸ್ಥಿತಿಯೂ ಶೋಚನೀಯವಾಗಿದೆ. ವಿಪರೀತವಾದ ಚಳಿಯಿಂದ ಅವರೆಲ್ಲ ಬಳಲುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.