
ವಿರಾಜಪೇಟೆ: ‘ಜಿಲ್ಲೆಯ ಬಡ ಜನರ ಏಳಿಗೆಗಾಗಿ ಕಳೆದ 20 ವರ್ಷಗಳಿಂದ ಆಗದಂತಹ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದ್ದರೂ ಬಿಜೆಪಿಯ ಕೆಲವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಆರೋಪಿಸಿದರು.
ಪಟ್ಟಣದಲ್ಲಿನ ಡಾ.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ವಿವಿಧ ಪಕ್ಷಗಳ ಪ್ರಮುಖರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ, ಭಾಗಮಂಡಲ ಇತರೆಡೆಗಳಲ್ಲಿ ಬಡಜನರ ಆರೋಗ್ಯಕ್ಕಾಗಿ ನೂತನ ಆಸ್ಪತ್ರೆ ಮತ್ತು ಮೇಲ್ದರ್ಜೆಗೇರಿಸಲು ಕೋಟಿಗಟ್ಟಲೆ ಅನುದಾನ ಹಾಗೂ ಲೋಕೋಪಯೊಗಿ ಇಲಾಖೆಯ ರಸ್ತೆಗಳ ಅಭಿವೃದ್ಧಿಗೆ ₹140 ಕೋಟಿ ಅನುದಾನ ಒದಗಿಸಿರುವುದು ಸೇರಿದಂತೆ ಮುಖ್ಯವಾಗಿ ಕೊಡಗಿನ ಜಮ್ಮಬಾಣೆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಬಿಲ್ಲವ ಸಮಾಜಕ್ಕೆ ಈಚೆಗೆ ಮಡಿಕೇರಿಯಲ್ಲಿ ಜಾಗ ಕೊಡಿಸಲಾಗಿದೆ. ಕೊಡಗಿನ ಆಚಾರ, ವಿಚಾರ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ‘ಕೊಡಗಿನ ಜಮ್ಮಬಾಣೆ ಸಮಸ್ಯೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ಅವರು ಬಗೆಹರಿಸಿದ್ದಾರೆ. ಪಕ್ಷದ ಕಾರ್ಯಕರ್ತರು, ನಾಯಕರನ್ನು ಒಗ್ಗೂಡಿಸಿಕೊಂಡು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕು’ ಎಂದರು.
ಶ್ರೀರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ‘ಹಿಂದುಳಿದ ವರ್ಗಗಳ ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸಿರುವುದು ಕಾಂಗ್ರೆಸ್ ಸರ್ಕಾರ ಮಾತ್ರ. ಬೇರೆ ಯಾವುದೇ ಪಕ್ಷ ಬಡ ಜನರ ಏಳಿಗೆಗಾಗಿ ಗಮನಹರಿಸಿಲ್ಲ’ ಎಂದರು.
ಕಾಂಗ್ರೆಸ್ ಸೇರ್ಪಡೆ: ಕಾರ್ಯಕ್ರಮದಲ್ಲಿ ಮೇಚಿರ ಸುಭಾಷ್ ನಾಣಯ್ಯ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಸುಭಾಶ್ ನಾಣಯ್ಯ ಮಾತನಾಡಿ, ಶಾಸಕರ ಕಾರ್ಯವೈಖರಿಯನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು.
ಪಕ್ಷದ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್, ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿದರು.
ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಕೊಡಗು ಹೆಗ್ಗಡೆ ಸಮಾಜದ ಪಿ.ಜಿ.ಅಯ್ಯಪ್ಪ, ಕೊಡವ ತಕ್ಕ ಜನಾಂಗ ಒಕ್ಕೂಟದ ಸರ ಚಂಗಪ್ಪ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಹನೀಫ್, ಜಿಲ್ಲಾ ಕಾಂಗ್ರೆಸ್ನ ಮಾಜಿ ಉಪಾಧ್ಯಕ್ಷ ಪಿ.ಕೆ.ಪೊನ್ನಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ರಂಜಿ ಪೂಣಚ್ಚ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.