ಮಡಿಕೇರಿ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಸೊರಕೆ ಅವರು ಬುಧವಾರ ಜಿಲ್ಲೆಗೆ ಭೇಟಿ ನೀಡಿ ‘ಡಿಜಿಟಲ್ ಯೂತ್’ ಎಂಬ ಹೊಸ ಪ್ರಚಾರ ಪರಿಕಲ್ಪನೆಯೊಂದನ್ನು ಕಾಂಗ್ರೆಸ್ ಪದಾಧಿಕಾರಿಗಳ ಮುಂದೆ ಪ್ರಸ್ತಾಪಿಸಿದರು.
ಪ್ರತಿ ಬೂತ್‌ನಲ್ಲೂ ಇಬ್ಬರನ್ನು ನೇಮಕ ಮಾಡಿ ಅವರಿಗೆ ಡಿಜಿಟಲ್ ಪ್ರಚಾರದ ಹೊಣೆ ನೀಡಬೇಕು. ಇವರನ್ನು ‘ಡಿಜಿಟಲ್ ಯೂತ್’ ಎಂದು ಕರೆಯಲಾಗುತ್ತದೆ ಎಂದು ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಹೇಳಿದರು.
‘ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಯೋಜನೆಗಳು ಫಲಾನುಭವಿಗಳನ್ನು ತಲುಪುತ್ತಿವೆ. ಆದರೆ, ಈ ಕುರಿತು ಪ್ರಚಾರ ಕಾರ್ಯದಲ್ಲಿ ನಾವು ಹಿಂದೆ ಇದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಹಾಗಾಗಿ, ಗ್ಯಾರಂಟಿ ಸಮಿತಿಯೊಂದಿಗೆ ಸಂಯೋಜನೆ ಮಾಡಿಕೊಂಡು ಪ್ರಚಾರ ಸಮಿತಿಯೂ ಕಾರ್ಯನಿರ್ವಹಿಸಬೇಕು. ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಿದರೂ ಅವರಿಗೆ ಇದು ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದು ಮನವರಿಕೆಯಾಗಿಲ್ಲ. ಈ ನಿಟ್ಟಿನಲ್ಲಿ ಅವರಿಗೆ ಮನವರಿಕೆ ಮಾಡಿಸಬೇಕು ಎಂದರು.
ವಿರೋಧ ಪಕ್ಷಗಳು ಶೇ 5ರಷ್ಟು ಕೆಲಸ ಮಾಡಿ ಶೇ 95ರಷ್ಟು ಪ್ರಚಾರ ಪಡೆದುಕೊಳ್ಳುತ್ತವೆ. ಆದರೆ, ಕಾಂಗ್ರೆಸ್ ಶೇ 95ರಷ್ಟು ಕೆಲಸ ಮಾಡಿದರೂ ಶೇ 5ರಷ್ಟು ಮಾತ್ರ ಪ್ರಚಾರ ಪಡೆಯುತ್ತದೆ. ಹಾಗಾಗಿ, ಚುನಾವಣಾ ಸಮಯದಲ್ಲಿ ಮಾತ್ರವೇ ಪ್ರಚಾರ ಸಮಿತಿ ಕಾರ್ಯನಿರ್ವಹಿಸದೇ ವರ್ಷದ ಎಲ್ಲಾ ದಿನಗಳೂ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಮಹಿಳೆಯರಿಗೆ ‘ಗೃಹಲಕ್ಷ್ಮಿ’ಯೋಜನೆಯಡಿ ನೀಡಲಾಗುವ ಹಣದಿಂದ ಅವರ ಖರೀದಿ ಸಾಮರ್ಥ್ಯ ಹೆಚ್ಚಾಗಿದೆ. ಕೇವಲ ರಸ್ತೆ ಮಾಡುವುದು, ಕಟ್ಟಡ ಕಟ್ಟುವುದು ಮಾತ್ರವೇ ಅಭಿವೃದ್ಧಿ ಅಲ್ಲ. ಜನರಿಗೆ ಆರ್ಥಿಕ ಶಕ್ತಿ ತುಂಬುವುದೂ ಸಹ ಒಂದು ಬಗೆಯ ಅಭಿವೃದ್ಧಿ ಎಂಬುದನ್ನು ಪ್ರತಿ ಮತದಾರರಿಗೂ ತಿಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಈಗ ತಲಾದಾಯದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಜನರ ಆದಾಯ ಹೆಚ್ಚಾಗಲು ಗ್ಯಾರಂಟಿ ಯೋಜನೆಗಳು ಕಾರಣ ಎಂಬುದನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕಿದೆ ಎಂದರು.
ರಾಜ್ಯದಲ್ಲಿ ಒಂದು ಲಕ್ಷ ಕಾರ್ಯಕರ್ತರನ್ನು ಪ್ರಚಾರ ಸಮಿತಿಯಲ್ಲಿ ತೊಡಗಿಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಎಲ್.ಆರ್.ಲೋಬೊ, ಮುನೀರ್, ಸಂಯೋಜಕ ಫಾರೂಕ್, ಜಂಟಿ ಸಂಯೋಜಕ ಜಾನ್, ಮಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡೆನ್ನೀಸ್, ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ಹಂಸ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಸೋಷಿಯಲ್ ಮೀಡಿಯಾ ಜಿಲ್ಲಾ ಸಂಚಾಲಕ ಸೂರಜ್ ಹೊಸೂರು ಭಾಗವಹಿಸಿದ್ದರು.
ಗ್ಯಾರಂಟಿ ಸಮಿತಿ ಪ್ರಚಾರ ಸಮಿತಿ ಜಂಟಿಯಾಗಿ ಕೆಲಸ ಮಾಡಿ ಪ್ರತಿ ಮತದಾರರನ್ನು ಭೇಟಿ ಮಾಡುತ್ತೇವೆಟಿ.ಪಿ.ರಮೇಶ್ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ
ಜಿಲ್ಲಾ ತಾಲ್ಲೂಕು ಪಂಚಾಯಿತಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಿನಿಂದಲೇ ಪ್ರಚಾರಕ್ಕೆ ಮುಂದಾಗಬೇಕು. ಪ್ರತಿ ಮತದಾರರಿಗೂ ವಿಚಾರಗಳನ್ನು ಮುಟ್ಟಿಸಬೇಕುಎಲ್.ಆರ್.ಲೋಬೊ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.