ಸಂತೋಷ್ ಲಾಡ್
ಮಡಿಕೇರಿ: ‘ಬಿಜೆಪಿಯನ್ನು ಏಕೆ ಸೋಲಿಸಬೇಕು ಎನ್ನುವ ಕುರಿತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸ್ಪಷ್ಟತೆ ಇರಬೇಕು. ಆ ಕುರಿತು ನಾವು ಗಟ್ಟಿಯಾಗಿ ಮಾತನಾಡಬೇಕು. ಆಗ ಮಾತ್ರ ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧ್ಯ’ ಎಂದು ಕಾರ್ಮಿಕ ಖಾತೆ ಸಚಿವ ಸಂತೋಷ್ ಎಸ್ ಲಾಡ್ ಪ್ರತಿಪಾದಿಸಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಪಕ್ಷದ ಮುಖಂಡರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ಸಂವಿಧಾನವನ್ನು ಹಂತಹಂತವಾಗಿ ಬದಲಾವಣೆ ಮಾಡುವ ಹುನ್ನಾರ ನಡೆದಿದೆ. ಇದರ ವಿರುದ್ಧ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹೋರಾಡುತ್ತಿದ್ದಾರೆ. ಇವರ ಹೋರಾಟವನ್ನು ಅರ್ಥೈಸಿಕೊಂಡು ಆಳವಾಗಿ ಚಿಂತಿಸಿ ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದರು.
‘1947ರಲ್ಲಿ ಈ ದೇಶದ ಮೇಲೆ ₹ 52 ಲಕ್ಷ ಕೋಟಿ ಸಾಲ ಇತ್ತು. ಆದರೆ, ಕಳೆದ 11 ವರ್ಷಗಳಿಂದ ₹ 211 ಲಕ್ಷ ಕೋಟಿ ಸಾಲ ಹೆಚ್ಚಾಗಿದೆ. ಈ ಕುರಿತು ಜನರಿಗೆ ಹೇಳಬೇಕು. ನಮ್ಮ ಗ್ಯಾರಂಟಿ ಯೋಜನೆಗಳ ಕುರಿತು ಅವರಲ್ಲಿ ಅರಿವು ಮೂಡಿಸಬೇಕು’ ಎಂದು ಹೇಳಿದರು.
ಗ್ಯಾರಂಟಿ ಯೋಜನಾ ಸಮಿತಿ ರಾಜ್ಯ ಉಪಾಧ್ಯಕ್ಷ ಮಹರೂಸ್ ಖಾನ್ ಮಾತನಾಡಿ, ‘ಶಕ್ತಿ ಯೋಜನೆಯಿಂದ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಈ ಕುರಿತು ಜನರಿಗೆ ಹೇಳಬೇಕು. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಮನೆಮನೆಗೆ ಹೋಗಿ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ ಮಾತನಾಡಿ, ‘ಇನ್ನು ಮುಂದೆ ಚುನಾವಣೆಗಳು ಬರುತ್ತವೆ. ಹಾಗಾಗಿ, ಎಲ್ಲರೂ ಅದಕ್ಕಾಗಿ ಸಿದ್ಧತೆ ನಡೆಸಬೇಕು’ ಎಂದರು.
ಶಾಸಕ ಡಾ.ಮಂತರ್‌ಗೌಡ, ಪಕ್ಷದ ಕೊಡಗು ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ದಿನೇಶ್ ಶೆಟ್ಟ, ಮುಖಂಡರಾದ ಮುನೀರ್ ಅಹಮ್ಮದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.