ADVERTISEMENT

ಮಡಿಕೇರಿ | ಸಾಂವಿಧಾನಿಕ ಬೇಡಿಕೆ ಈಡೇರಿಕೆಗೆ ಒತ್ತಾಯ: ಅಡಗೂರು ಎಚ್.ವಿಶ್ವನಾಥ್

ಸಿಎನ್‌ಸಿ ಆಯೋಜಿಸಿದ್ದ ‘ಕೈಲ್ ಪೊವ್ದ್’ ಹಬ್ಬ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:49 IST
Last Updated 2 ಸೆಪ್ಟೆಂಬರ್ 2025, 2:49 IST
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ಮಾತನಾಡಿದರು
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ಮಾತನಾಡಿದರು   

ಮಡಿಕೇರಿ: ‘ಕೊಡವರ ಶಕ್ತಿಯಂತಿರುವ ‘ಸಿಎನ್‌ಸಿ’ಯ ಬಹುಕಾಲದ ಸಾಂವಿಧಾನಿಕ ಬೇಡಿಕೆಗಳನ್ನು ಈಡೇರಿಸುವುದು ಸಾಂವಿಧಾನಿಕ ಬಾಧ್ಯತೆಯಾಗಿದ್ದು, ಇದನ್ನು ಅತ್ಯಂತ ಆದ್ಯತೆಯ ಮೇರೆಗೆ ಮತ್ತು ಮಾನವೀಯ ಧೋರಣೆಯೊಂದಿಗೆ ಪರಿಹರಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ತಿಳಿಸಿದರು.

ಇಲ್ಲಿನ ಹೊರ ವಲಯದದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ಸೋಮವಾರ ನಡೆದ 30ನೇ ವರ್ಷದ ಸಾರ್ವತ್ರಿಕ ‘ಕೈಲ್ ಪೊವ್ದ್’ ಹಬ್ಬ ಆಚರಣೆಯಲ್ಲಿ ಅವರು ಮಾತನಾಡಿದರು.

ಸಿಎನ್‌ಸಿ ಪ್ರತಿಪಾದಿಸುತ್ತಿರುವ ಸಂವಿಧಾನಬದ್ಧವಾಗಿರುವ ಬೇಡಿಕೆಗಳನ್ನು ಪರಿಗಣಿಸಬೇಕು. ಕೊಡವ ಸಂವಿಧಾನಬದ್ಧ ಹಕ್ಕನ್ನು ಅವರಿಗೆ ನೀಡಬೇಕು ಎಂದರು.

ADVERTISEMENT

ಕೊಡವರು ಕೇವಲ 1 ಲಕ್ಷದ ಒಳಗೆ ಇರುವ ಅತ್ಯಂತ ನಗಣ್ಯ ಜನಸಂಖ್ಯೆಯ ಎಥಿನಿಕ್ ಸಮುದಾಯವಾಗಿದ್ದು, ಭಾರತದಲ್ಲಿ ಇತರೆ ಸಮುದಾಯಗಳಿಗೆ ನೀಡಿದಂತೆ ಕೊಡವರಿಗೆ ಶಾಸನಾತ್ಮಕವಾದ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.

‘ಕೊಡವ ಮಣ್ಣಿನೊಂದಿಗೆ ಉಪ್ಪಿನಂತೆ ಬೆರೆತು ನಿರಂತರವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವರ ಹಕ್ಕಿನ ಹೋರಾಟಕ್ಕೆ ನನ್ನನ್ನು ಕರೆದಿದ್ದಾರೆ, ಕರೆದಾಗಲೆಲ್ಲ ನಾನು ಬರುತ್ತಲೇ ಇದ್ದೇನೆ, ಮುಂದೆಯೂ ಬರುತ್ತೇನೆ. ಜನಮಾನಸದಲ್ಲಿ ಕೊಡವ ಹೋರಾಟದ ಆದಮ್ಯ ಧ್ವನಿ ನಿರಂತರವಾಗಿ ಹಾಗೂ ಚಿರಂತನವಾಗಿ ಮುಂದುವರೆಯುವಂತೆ ಸಿಎನ್‌ಸಿ ತನ್ನ ಹೋರಾಟವನ್ನು ಮುಂದುವರೆಸಿದೆ’ ಎಂದು ಶ್ಲಾಘಿಸಿದರು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ‘ಶಸ್ತ್ರಾಸ್ತ್ರಗಳನ್ನು ಹೊಂದುವುದು ಯೋಧ ಪರಂಪರೆಯ ಕೊಡವರ ಅನುವಂಶಿಕ ಶಾಶ್ವತ ಹಕ್ಕಾಗಿದೆ. ಬಂದೂಕಿನೊಂದಿಗೆ ಕೊಡವರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅಡಿಯಲ್ಲಿ ಕೊಡವ ಜನಾಂಗವು ಶಾಸನಬದ್ಧ ರಕ್ಷಣೆಯನ್ನು ಪಡೆಯಬೇಕು ಎಂದರು.

ಸಮಾಜ ಸೇವಕ ಡಾ.ಮಾತಂಡ ಅಯ್ಯಪ್ಪ, ಕಲಿಯಂಡ ಮೀನಾ, ಪುಲ್ಲೇರ ಸ್ವಾತಿ, ಅಪ್ಪಚ್ಚೀರ ರೀನಾ, ನಂದೇಟಿರ ಕವಿತಾ, ಪಟ್ಟಮಾಡ ಲಲಿತಾ, ಚೋಳಪಂಡ ಜ್ಯೋತಿ, ಅರೆಯಡ ಸವಿತಾ, ಪಚ್ಚಾರಂಡ ಶಾಂತಿ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಳ್ಮಂಡ ಜೈ, ಕಾಂಡೇರ ಸುರೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶೆರಿನ್, ಚಂಬಂಡ ಜನತ್, ಅರೆಯಡ ಗಿರೀಶ್, ನಂದೇಟಿರ ರವಿ ಸುಬ್ಬಯ್ಯ ಭಾಗವಹಿಸಿದ್ದರು.

ಹಬ್ಬದ ಸಂಭ್ರಮದ ಪ್ರಯುಕ್ತ ಮಹಿಳೆಯರು ಹಾಗೂ ಪುರುಷರು ಬಂದೂಕನ್ನು ಹೆಗಲೇರಿಗೇರಿಸಿ ಗುರಿ ಇಟ್ಟರು

ನ. 26ರಂದು ‘ಕೊಡವ ನ್ಯಾಷನಲ್ ಡೇ’:

‘ಕೊಡವ ಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮಂಡಿಸುವ 35ನೇ ವರ್ಷದ ‘ಕೊಡವ ನ್ಯಾಷನಲ್ ಡೇ’ ಕಾರ್ಯಕ್ರಮವನ್ನು ನವೆಂಬರ್ 26ರಂದು ಕ್ಯಾಪಿಟಲ್ ವಿಲೇಜ್‌ನಲ್ಲಿ ಆಚರಿಸಲಾಗುವುದು’ ಎಂದು ಎನ್.ಯು.ನಾಚಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.