
ಮಡಿಕೇರಿ: ಸರ್ಕಾರ ಈ ಕೂಡಲೆ ಎಲ್ಲ ಗುತ್ತಿಗೆದಾರರ ಅಧಿಕೃತ ಸಭೆ ನಡೆಸಬೇಕು. ಮಾತ್ರವಲ್ಲ, ಗುತ್ತಿಗೆದಾರರಿಗೆ ಬರಬೇಕಿರುವ ₹ 37 ಸಾವಿರ ಕೋಟಿ ಹಣವನ್ನು ಏಕಕಂತಿನಲ್ಲಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯದಾದ್ಯಂತ ಕೆಲಸ ಸ್ಥಗಿತಗೊಳಿಸಿ ಮಾರ್ಚ್ 5ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಹೇಳಿದರು.
ಚಿಕ್ಕ ಜಿಲ್ಲೆಯಾದ ಕೊಡಗಿನಲ್ಲಿಯೇ ಗುತ್ತಿಗೆದಾರರಿಗೆ ಬರಬೇಕಿರುವ ಹಣ ₹ 180 ಕೋಟಿಯಷ್ಟಿದೆ. ಮಾತ್ರವಲ್ಲ, ಪ್ರಾಕೃತಿಕ ವಿಕೋಪದಂತ ಸಂದರ್ಭದಲ್ಲಿ ಮಾಡಿದ ಕೆಲಸಗಳ ಬಿಲ್‌ಗಳನ್ನೂ ಮಂಜೂರು ಮಾಡಿಲ್ಲ. ಹೀಗಾದರೆ, ಹೇಗೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಈ ಸಂಬಂಧ ಈಗಾಗಲೆ 100 ಪುಟಗಳ ಬೃಹತ್ ಪತ್ರ ಬರೆಯಲಾಗಿದೆ. ಆದರೂ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ದೂರಿದರು.
‘ಈ ಸರ್ಕಾರ ಬರಲು ನಮ್ಮ ಹೋರಾಟ ಸ್ವಲ್ಪಮಟ್ಟಿಗಾದರೂ ಕಾರಣವಾಗಿತ್ತು ಎನ್ನುವುದನ್ನು ಮರೆಯಬಾರದು. ಆದರೆ, ಹೊಸ ಸರ್ಕಾರ ಬಂದು ಎರಡೂವರೆ ವರ್ಷ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದರು.
‘ಕೇವಲ ಬಾಕಿ ಬಿಲ್‌ಗಳು ಮಾತ್ರವಲ್ಲ ಹಲವು ಸಮಸ್ಯೆಗಳೂ ಇವೆ. ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ. ನಿಜಕ್ಕೂ ನಮ್ಮ ಸ್ಥಿತಿ ತೀರಾ ಶೋಚನೀಯವಾಗಿದೆ. ಗುತ್ತಿಗೆದಾರರನ್ನು ಕುರಿತು ಸರ್ಕಾರ ತೀವ್ರತರವಾಗಿ ತಾತ್ಸಾರ ಮಾಡಿದೆ’ ಎಂದು ದೂರಿದರು.
‘ನಮ್ಮ ಹಣ, ನಮ್ಮ ಮನೆ, ಒಡವೆ ಗಿರವಿ ಇಟ್ಟು, ನಮ್ಮ ಸ್ನೇಹಿತರು, ಬಂಧುಗಳ ಬಳಿ ಸಾಲ ಪಡೆದು ಕೆಲಸ ಮಾಡಿದ್ದೇವೆ. ಆ ಕೆಲಸದ ಹಣ ಕೊಡಿ ಎಂದು ಕೇಳುತ್ತಿದ್ದೇವೆ. ನಮ್ಮ ಕೂಲಿ ನಮಗೆ ಕೊಡಿ’ ಎಂದು ಒತ್ತಾಯಿಸಿದರು.
‘ಈಗ ಸ್ಥಳೀಯವಾಗಿ ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿಲ್ಲ. ಹೊರರಾಜ್ಯದಿಂದ ಬಂದವರು ಪ್ಯಾಕೇಜ್ ರೂಪದಲ್ಲಿ ಕೆಲಸ ಪಡೆಯುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿರುವ ಗುತ್ತಿಗೆದಾರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ’ ಎಂದರು.
‘ನಾವು ಟೆಂಡರ್ ಹಾಕುತ್ತಿರುವುದು ರಾಜ್ಯಪಾಲರ ಹೆಸರಿನಲ್ಲಿ. ಆದರೆ, ಈಗಿನ ಸರ್ಕಾರ ಈ ಬಿಲ್ ಹಳೆಯ ಕಾಲದ್ದು, ಹಿಂದಿನ ಸರ್ಕಾರದ್ದು ಎಂದು ಹೇಳುತ್ತಾರೆ. ಇದು ವಿಪರ್ಯಾಸದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘದ ಪದಾಧಿಕಾರಿಗಳಾದ ಕೃಷ್ಣ, ಎ.ಜಿ.ಸುರೇಶ್, ರವಿ ಚೆಂಗಪ್ಪ, ಸಣ್ಣೇಗೌಡ, ಎಂ.ಕೆ.ಚೆಂಗಪ್ಪ, ರವೀಂದ್ರ ರೈ, ಕೆ.ಬಾಬು ಭಾಗವಹಿಸಿದ್ದರು.
ರಾಜ್ಯದಲ್ಲಿ ಗುತ್ತಿಗೆದಾರರಿ ಬರಬೇಕಿರುವುದು ₹ 37 ಸಾವಿರ ಕೋಟಿ ಕೊಡಗಿನಲ್ಲಿ ಬರಬೇಕಿರುವುದು ₹ 180 ಕೋಟಿ ಮಾರ್ಚ್ 5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.