ADVERTISEMENT

ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ: ನಿರ್ಮಲಾನಂದನಾಥ್ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 4:29 IST
Last Updated 4 ಸೆಪ್ಟೆಂಬರ್ 2025, 4:29 IST
ಕುಶಾಲನಗರ ಎಪಿಸಿಎಂಎಸ್ಸಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ನಾಡಪ್ರಭು ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ್ ಸ್ವಾಮೀಜಿ ಉದ್ಘಾಟಿಸಿದರು. ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶಾಸಕ ಡಾ.ಮಂತರ್ ಗೌಡ, ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್ ಭಾಗವಹಿಸಿದ್ದರು
ಕುಶಾಲನಗರ ಎಪಿಸಿಎಂಎಸ್ಸಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ನಾಡಪ್ರಭು ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ್ ಸ್ವಾಮೀಜಿ ಉದ್ಘಾಟಿಸಿದರು. ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶಾಸಕ ಡಾ.ಮಂತರ್ ಗೌಡ, ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್ ಭಾಗವಹಿಸಿದ್ದರು   

ಕುಶಾಲನಗರ: ದೇಶದ ಅಭಿವೃದ್ಧಿಯಲ್ಲಿ ಸಹಕಾರ‌ ಕ್ಷೇತ್ರ ತನ್ನದೇ ಆದ ಕೊಡುಗೆ ನೀಡಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಬಳಿ ನಿರ್ಮಾಣಗೊಂಡಿರುವ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ, ನಂತರ ಎಪಿಸಿಎಂಎಸ್ಸಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಆರ್ಥಿಕ ಸಮೃದ್ಧಿ ಹೊಂದಿದ ವ್ಯಕ್ತಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ದೇಶದಲ್ಲಿ ಅನೇಕ ವ್ಯತ್ಯಾಸಗಳು ಆಗಿವೆ. ದೇಶದಲ್ಲಿ
ಹಸಿರು ಕ್ರಾಂತಿ ಉಂಟಾಗಿ ನಂತರ ವಿದ್ಯಾಸಂಸ್ಥೆ ಆರಂಭಗೊಂಡವು. ಮಠಮಾನ್ಯಗಳು ಕೂಡ ಸರ್ಕಾರದೊಂದಿಗೆ ಕೈಜೋಡಿಸಿ ಅಭಿವೃದ್ಧಿಗೆ ಒತ್ತು ನೀಡಿದವು. ಇತ್ತೀಚಿನ ವರ್ಷಗಳಲ್ಲಿ ಭಾರತೀಯರು ವಿದೇಶಗಳಲ್ಲೂ ತಮ್ಮ ಪ್ರತಿಭೆ ಹಾಗೂ ಛಾಪು ಮೂಡಿಸಿದ್ದಾರೆ ಎಂದರು.

ADVERTISEMENT

ಸಹಕಾರ ಸಂಘಗಳು ಆರಂಭಗೊಂಡ ನಂತರ ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಬಂದವು ಎಂದರು. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು 64 ಪೇಟೆಗಳನ್ನು ರಚನೆ ಮಾಡಿದರು. ಅವು ಜಾತಿ, ಜನಾಂಗದ ಪೇಟೆಗಳಾಗಿ ಕಂಡುಬಂದರೂ ಕೌಶಲ ಆಧಾರವಾಗಿರುವ ಪೇಟೆ ಆಗಿದ್ದವು ಎಂದು ಹೇಳಿದರು.

ಸಹಕಾರ ಸಂಘಗಳು ಆರ್ಥಿಕವಾಗಿ ಸಮೃದ್ಧಿಯಾಗಬೇಕು. ಜನರು ಬ್ಯಾಂಕ್ ಮೂಲಕ ಹಣ ಉಳಿತಾಯ ಮಾಡಬೇಕು. ಜೊತೆಗೆ ಸಾಲ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಸಹಕಾರ ಸಂಘಗಳು ಅಭಿವೃದ್ಧಿ ಹೊಂದಬೇಕು. 9 ವರ್ಷಗಳ ಹಿಂದೆ ಆರಂಭವಾದ ನಾಡಪ್ರಭು ಪತ್ತಿನ ಸಹಕಾರ ಉತ್ತಮ ಸಾಧನೆ ಮಾಡಿದೆ. ಈ ಸಂಘಕ್ಕೆ ಶಾಸಕ ನಿಧಿಯಿಂದ ₹10 ಲಕ್ಷ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಮಾತನಾಡಿ, ಕೊಡಗಿನಲ್ಲಿ ಹಿರಿಯ ಸಹಕಾರಿಗಳು ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ಭದ್ರಬುನಾದಿ ಹಾಕಿದ್ದಾರೆ. ದೂರದೃಷ್ಟಿ ಚಿಂತನೆಯ ಹಿರಿಯರು ಸಹಕಾರ ಕ್ಷೇತ್ರಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ ಎಂದರು.

ಕೊಡಗಿನ ವಿವಿಧ ಸಹಕಾರ ಸಂಘಗಳು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತ, ಖಾಸಗಿ ಬ್ಯಾಂಕ್ ಗಳಿಗೆ ಪೈಪೋಟಿ ನೀಡುತ್ತಿವೆ. ಸಹಕಾರ ಸಂಘದಲ್ಲಿ ದಕ್ಷ ಹಾಗೂ ಪ್ರಮಾಣಿಕ ಆಡಳಿತ ಇರಬೇಕು ಎಂದರು.

ನಾಡಪ್ರಭು ಪತ್ತಿನ ಸಹಕಾರ ಸಂಘ ಸ್ವಂತ ಕಟ್ಟಡವನ್ನು ಹೊಂದುವ‌ ಮೂಲಕ ಕೊಡಗಿನ ಸಹಕಾರ ಕ್ಷೇತ್ರಕ್ಕೆ ಮಾದರಿಯಾಗಿದೆ. ಜಾಗ ಮಾರಾಟ ಮಾಡದಂತೆ ಬೈಲಾದಲ್ಲು ಸೇರಿಸಬೇಕು. ಸದಸ್ಯರಿಗೆ ಕನಿಷ್ಠ ಷೇರು ನಿಗದಿಪಡಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹರಪಳ್ಳಿ ರವೀಂದ್ರ ಮಾತನಾಡಿ, ಆಧುನಿಕ ಬೆಂಗಳೂರು ಸ್ಥಾಪನೆಗೆ ಕೆಂಪೇಗೌಡ ಅವರ ಕೊಡುಗೆ ಅಪಾರವಾಗಿದೆ. ಇಡೀ ವಿಶ್ವವೇ ಬೆಂಗಳೂರು ಕಡೆ ನೋಡುವಂತೆ ಆಗಿದೆ. ನೂರಾರು ಕೆರೆಕಟ್ಟೆಗಳನ್ನು ಕಟ್ಟಿಸಿ ರೈತರ ಬದುಕನ್ನು ಹಸನಾಗುವಂತೆ ಮಾಡಿದ್ದಾರೆ ಎಂದು ಹೇಳಿದರು. 

ಇದೀಗ ನಮ್ಮ ಮುಂದೆ ಎರಡು ಜ್ವಲಂತ ಸಮಸ್ಯೆಗಳು ಸೃಷ್ಟಿಯಾಗಿವೆ. ಒಂದು ಜನಗಣತಿ ಹಾಗೂ ಸಿ ಆ್ಯಂಡ್ ಡಿ ಲ್ಯಾಂಡ್‌ ಸಮಸ್ಯೆ. ಅರಣ್ಯ ಇಲಾಖೆ ಸಿ ಆ್ಯಂಡ್‌ ಡಿ ಭೂಮಿಯಲ್ಲಿ ನೈಸರ್ಗಿಕ ಅರಣ್ಯ ಬೆಳೆಸಬೇಕು ಎಂದು ಆದೇಶ ಹೊರಡಿಸಿದ್ದಾರೆ. ಇದನ್ನು ಕೈಬಿಟ್ಟು ರೈತರಿಗೆ ಕೃಷಿ ಮಾಡಲು ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಆರ್‌.ಶರವಣಕುಮಾರ್ ಮಾತನಾಡಿ, ನಾಡಪ್ರಭು ಪತ್ತಿನ ಸಹಕಾರ ಕಡಿಮೆ ಅವದಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ರಹಿತವಾಗಿ ಕೆಲಸ ನಿರ್ವಹಿಸಿದರೆ ಖಂಡಿತ ಸಂಘಗಳು ಅಭಿವೃದ್ಧಿ ಹೊಂದುತ್ತವೆ ಎಂದರು.

ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದಲ್ಲಿ ಕಳೆದ 9 ವರ್ಷಗಳ ಹಿಂದೆ ಆರಂಭಗೊಂಡ ನಾಡಪ್ರಭು ಪತ್ತಿನ‌ ಸಹಕಾರ ಸಂಘವು ಅಭಿವೃದ್ಧಿಯತ್ತ ಸಾಗುತ್ತಿದ್ದು, ಸಂಘದ ಲಾಭಾಂಶದ ₹65 ಲಕ್ಷ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸಂಘದಲ್ಲಿ 960 ಸದಸ್ಯರು ಇದ್ದು, ಎಲ್ಲರ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದು ನಮ್ಮ ಸಂಘದ ದೊಡ್ಡ ಸಾಧನೆ ಎಂದು ಹೇಳಿದರು.

ನಾಡಪ್ರಭು ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿ, 2015ರಲ್ಲಿ ಒಕ್ಕಲಿಗರ ಸಂಘ ಸ್ಥಾಪನೆ‌ ಮಾಡಿ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಪ್ರಯೋಜನ ಸಿಗಬೇಕು ಎಂಬ ಉದ್ದೇಶದಿಂದ ನಾಡಪ್ರಭು ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಲಾಯಿತು. ಪ್ರತಿ ಮನೆಗೆ ಭೇಟಿ ನೀಡಿದಾಗ ಉತ್ತಮ ಸ್ಪಂದನೆ ಸಿಕ್ಕಿತು ಎಂದರು.

ಈ ಸಂದರ್ಭ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶೈಲಜಾ, ಸಂಘದ ಉಪಾಧ್ಯಕ್ಷ ಜಿ.ಬಿ.ಜಗದೀಶ್, ಸಂಸ್ಥಾಪಕ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ನಿರ್ದೇಶಕರಾದ ಸಿ.ವಿ.ನಾಗೇಶ್,ಎಂ.ಡಿ.ರವಿಕುಮಾರ್, ಕೆ.ಕೆ.ಹೇಮ್ ಕುಮಾರ್, ಕೆ.ಪಿ.ರಾಜು, ಎಸ್.ಸಿ.ಪ್ರಕಾಶ್, ಕಸ್ತೂರಿ ಮಹೇಶ್, ರೇಖಾ, ಎಂ.ಡಿ.ರಮೇಶ್, ಎಚ್.ಎನ್.ರಾಮಚಂದ್ರ, ಸತೀಶ್ ಗೌಡ, ಎಂ.ಎ.ರಘು, ಎಂ.ಕೆ.ಮಂಜುನಾಥ್, ಪ್ರಮೀಳಾ ಕುಮಾರಸ್ವಾಮಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಕೆ.ಸುನೀತಾ ಪಾಲ್ಗೊಂಡಿದ್ದರು.

ಸಂಘಕ್ಕೆ ಜಾಗ ದಾನ ನೀಡಿದ ಎಂ.ಡಿ.ನಾಗೇಶ್ ಮತ್ತು ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ಚಂದ್ರಿಕಾ ತಂಡದವರು ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಸಿ.ವಿ.ನಾಗೇಶ್ ಸ್ವಾಗತಿಸಿದರು. ಶಿಕ್ಷಕಿ ಗಾಯಿತ್ರಿ ನಿರೂಪಿಸಿದರು. ಶಿಕ್ಷಕಿ ನವೀನ ತಂಡದವರು ರೈತಗೀತೆ ಹಾಡಿದರು.

ಕುಶಾಲನಗರದಲ್ಲಿ ಬುಧವಾರ ಆಯೋಜಿಸಿದ್ದ ನಾಡಪ್ರಭು ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿರುವ ಸದಸ್ಯರು
ಸೆ.22 ರಿಂದ ಸರ್ಕಾರ ಜನಗಣತಿಯನ್ನು ಆರಂಭಿಸುತ್ತಿದ್ದು ಗಣತಿದಾರರು ಮನೆಗೆ ಭೇಟಿ ನೀಡಿದಾಗ ಸರಿಯಾದ ವಸ್ತುನಿಷ್ಠವಾದ ಮಾಹಿತಿ ನೀಡಬೇಕು
ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.