ADVERTISEMENT

ಕೊರೊನಾ ಭೀತಿ: ಗಡಿಭಾಗದಲ್ಲಿ ನಿಗಾ

ಡಿ.ಸಿ ಅನೀಸ್‌ ಕಣ್ಮಣಿ ಜಾಯ್‌ ಅಧ್ಯಕ್ಷತೆಯಲ್ಲಿ ಸಭೆ, ಟೋಲ್ ಫ್ರೀ ಸಂಖ್ಯೆ 104 ಸಂಖ್ಯೆಗೆ ಮಾಹಿತಿ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 13:24 IST
Last Updated 5 ಫೆಬ್ರುವರಿ 2020, 13:24 IST
ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು   

ಮಡಿಕೇರಿ: ಕೊರಾನಾ ವೈರಸ್ ಭೀತಿ ಎದುರಾಗಿದ್ದು, ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಅವರು ಅವರು ಮಾತನಾಡಿದರು.

ಚೀನಾ ಮತ್ತು ಜಪಾನ್ ದೇಶಗಳಲ್ಲಿ ಕೊರೊನಾ ವೈರಸ್ ಕಂಡುಬಂದಿದ್ದು, ಚೀನಾ, ಜಪಾನ್ ರಾಷ್ಟ್ರಗಳಿಂದ ಬರುವವರ ಬಗ್ಗೆ ನಿಗಾ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ADVERTISEMENT

ಜ.15ರ ನಂತರ ಚೀನಾ, ಜಪಾನ್ ರಾಷ್ಟ್ರಗಳಿಂದ ಆಗಮಿಸಿರುವವರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ‘ಸ್ವಯಂ ಘೋಷಣಾ ಪತ್ರ’ ಪಡೆಯುವಂತಾಗಬೇಕು. ಗಡಿ ಭಾಗದ ಪ್ರಾಥಮಿಕ ಮತ್ತು ಸಮುದಾಯ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಜಿಲ್ಲೆಯ ಗಡಿಭಾಗ ಕರಿಕೆ, ಕುಟ್ಟ, ಮಾಕುಟ್ಟ, ಮತ್ತಿತರ ಭಾಗಗಳ ಪ್ರಾಥಮಿಕ ಹಾಗೂ ಸಮುದಾಯ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಬಸ್ ನಿಲ್ದಾಣ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.

ಕೊರೊನಾ ವೈರಸ್ ಬಗ್ಗೆ ಶ್ರುಶ್ರೂಷಕರು, ಆಶಾ ಕಾರ್ಯಕರ್ತರು ಇತರರಿಗೆ ಮಾಹಿತಿ ನೀಡಲು ತಾಲ್ಲೂಕು ಮಟ್ಟದಲ್ಲಿ ತರಬೇತಿ ಕಾರ್ಯಕ್ರಮ ಏರ್ಪಡಿಸಿ ಎಂದು ಸಲಹೆ ನೀಡಿದರು.

ರಾಪಿಡ್ ರೆಸ್ಪಾನ್ಸ್ ತಂಡ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ಮೂರು ತಾಲ್ಲೂಕಿನಲ್ಲಿ ಮೂರು ವೈದ್ಯಾಧಿಕಾರಿಗಳು ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಜಿಲ್ಲೆಗೆ ತಜ್ಞ ವೈದ್ಯರ ಅಗತ್ಯವಿದ್ದಲ್ಲಿ ಹತ್ತಿರದ ಜಿಲ್ಲೆಗಳಿಂದ ಆಹ್ವಾನಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಎರಡು ವಾರದೊಳಗೆ ಅಗತ್ಯ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಕೇರಳದಲ್ಲಿ 3 ದೃಢೀಕೃತ ಕೊರೊನಾ ವೈರಸ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ವಹಿಸಬೇಕಿದೆ. ಆ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಮೈಸೂರು, ಮತ್ತು ಚಾಮರಾಜನಗರ ಜಿಲ್ಲೆಗಳ ಅಧಿಕಾರಿಗಳಿಗೆ ವಿಡಿಯೊ ಕಾನ್ಪೆರೆನ್ಸ್ ಸಭೆ ನಡೆಸಿ ಕೊರೊನಾ ವೈರಸ್ ಹರಡದಂತೆ ಅನುಸರಿಸಬೇಕಾದ ಕ್ರಮಗಳು ಹಾಗೂ ತುರ್ತಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ವಿವರವಾಗಿ ಸೂಚಿಸಿದ್ದು, ಅದರಂತೆ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಜಿಲ್ಲೆಯ ನಾಗರಿಕರು ಕೊರೊನಾ ವೈರಸ್ ಬಗ್ಗೆ ಯಾವುದೇ ರೀತಿಯ ಭಯಪಡದೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ವೈರಸ್ ಪ್ರಕರಣ ಕಂಡು ಬಂದಿರುವುದಿಲ್ಲ. ಕೊಡಗು ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಕೊರೊನಾ ವೈರಸ್ ಸಂಬಂಧಿಸಿದಂತೆ ಇದುವರೆಗೆ ವಹಿಸಲಾಗಿರುವ ಮುನ್ನೆಚ್ಚರಿಕಾ ಕ್ರಮಗಳು ಮತ್ತಿತರ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿ ಡಾ.ಶಿವಕುಮಾರ್, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಆನಂದ್, ಆರ್‌ಸಿಎಚ್ ಅಧಿಕಾರಿ ಡಾ,ಗೋಪಿನಾಥ್, ವೈದ್ಯಕೀಯ ಕಾಲೇಜಿನ ಅಧೀಕ್ಷಕರಾದ ಡಾ.ಲೋಕೇಶ್, ವಿರಾಜಪೇಟೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಯತಿರಾಜ್, ಡಾ.ಶ್ಯಾಮ್, ಡಾ.ಕೃಷ್ಣಾನಂದ, ಎಂಟಮಾಲಜಿಸ್ಟ್ ಮಂಜುನಾಥ್, ಪೌರಾಯುಕ್ತ ಎಂ.ಎಲ್.ರಮೇಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಧಿಕಾರಿ ದೇವರಾಜು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ದಯಾನಂದ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.