ADVERTISEMENT

ಕೊರೊನಾ ಭೀತಿ: ಸಂಪರ್ಕ ಬಂದ್ ಮಾಡಿದ ಜನರು

ಗೋಣಿಕೊಪ್ಪಲು– ಪಿರಿಯಾಪಟ್ಟಣ ರಾಜ್ಯ ಹೆದ್ದಾರಿಗೆ ಮಣ್ಣು, ಮುಳ್ಳು ಹಾಕಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 13:26 IST
Last Updated 8 ಏಪ್ರಿಲ್ 2020, 13:26 IST
ಗೋಣಿಕೊಪ್ಪಲು ಪಿರಿಯಾಪಟ್ಟಣ ನಡುವಿನ ಹೆದ್ದಾರಿಯನ್ನು ಮಣ್ಣು ಸುರಿದು ಬಂದ್ ಮಾಡಲಾಗಿದೆ
ಗೋಣಿಕೊಪ್ಪಲು ಪಿರಿಯಾಪಟ್ಟಣ ನಡುವಿನ ಹೆದ್ದಾರಿಯನ್ನು ಮಣ್ಣು ಸುರಿದು ಬಂದ್ ಮಾಡಲಾಗಿದೆ   

ಗೋಣಿಕೊಪ್ಪಲು: ಪಿರಿಯಾಪಟ್ಟಣದಿಂದ ಗೋಣಿಕೊಪ್ಪಲಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಬೂದಿತಿಟ್ಟು ಬಳಿ ಮಣ್ಣಿನ ರಾಶಿ ಹಾಕಿ ಮುಚ್ಚಲಾಗಿದೆ. ಜೆಸಿಬಿ ಮೂಲಕ ಮಣ್ಣು ಸುರಿದು ಅದರ ಮೇಲೆ ಮುಳ್ಳಿನ ಬೇಲಿ ಕಟ್ಟಲಾಗಿದೆ. ಇದರಿಂದ ವಾಹನಗಳಿರಲಿ, ಬೈಕ್‌ಗಳೂ ಸಂಚರಿಸಲು ಸಾಧ್ಯವಾಗುತ್ತಿಲ್ಲ.

ಕೊರೊನಾ ಭೀತಿಯಲ್ಲಿ ಗ್ರಾಮಸ್ಥರು ಪಟ್ಟಣಗಳಿಂದ ತಮ್ಮೂರಿಗೆ ಬರದಿರಲಿ ಎಂದು ಸಂಪರ್ಕವನ್ನೇ ಕಡಿತಗೊಳಿಸಿದ್ದಾರೆ ಎನ್ನಲಾಗಿದೆ.

ಪಿರಿಯಾಪಟ್ಟಣದಿಂದ ದಕ್ಷಿಣ ಕೊಡಗಿಗೆ ಬರುವ ಸೊಪ್ಪು ಮತ್ತು ತರಕಾರಿ ವಾಹನಗಳು ಅಬ್ಬಳತಿ ಮಾರ್ಗವಾಗಿ ಅಳ್ಳೂರು ತಲುಪಿ ಅಲ್ಲಿಂದ ಆನೆಚೌಕೂರು ಗೇಟ್‌ಗೆ ಬರಬೇಕಾಗಿದೆ. ವಾರದಲ್ಲಿ ಮೂರು ದಿನ ಮಾತ್ರ ವ್ಯಾಪಾರ ವಹಿವಾಟು ನಡೆಯುವ ಗೋಣಿಕೊಪ್ಪಲು, ಬಾಳೆಲೆ, ಪೊನ್ನಂಪೇಟೆ, ಹುದಿಕೇರಿ ಶ್ರೀಮಂಗಲ ಭಾಗಕ್ಕೆ ಸೊಪ್ಪಿನ ವ್ಯಾಪಾರಿಗಳು ಕಷ್ಟಪಟ್ಟು ಬರಬೇಕಾಗಿದೆ. ಮಣ್ಣಿನ ರಾಶಿ ಹಾಕಿರುವುದರಿಂದ ಪಿರಿಯಾಪಟ್ಟಣ ಮತ್ತು ಗೋಣಿಕೊಪ್ಪಲು ನಡುವಿನ ತುರ್ತು ಸಂದರ್ಭದ ವಾಹನ ಸಂಚಾರಕ್ಕೂ ಅಡಚಣೆಯಾಗಿದೆ.

ADVERTISEMENT

ದಕ್ಷಿಣ ಕೊಡಗಿನ ಜನತೆಗೆ ಪಿರಿಯಾಪಟ್ಟಣ ತಾಲ್ಲೂಕಿನ ಹಿಟ್ನೆಹೆಬ್ಬಾಗಿಲು, ಹಿಟ್ನಳ್ಳಿ ಗ್ರಾಮದಿಂದ ಸೊಪ್ಪು ತರಕಾರಿ ಬರಬೇಕಾಗಿದೆ. ಇಲ್ಲಿನ ವ್ಯಾಪಾರಸ್ಥರು ಬೆಳಿಗ್ಗೆ 5.30ಕ್ಕೆ ಪಿರಿಯಾಪಟ್ಟಣಕ್ಕೆ ಬಂದು ಅಲ್ಲಿಂದ ರಾಜ್ಯ ಸಾರಿಗೆ ಬಸ್‌ನಲ್ಲಿ ಗೋಣಿಕೊಪ್ಪಲಿಗೆ ಬರುತ್ತಿದ್ದರು. ಸಾರಿಗೆ ಬಸ್ ಸ್ಥಗಿತಗೊಂಡಿದ್ದರಿಂದ ವಾರದಲ್ಲಿ ಮೂರು ದಿನ ಗೂಡ್ಸ್ ಆಟೊದಲ್ಲಿ ಸೊಪ್ಪು ತರುತ್ತಿದ್ದರು. ಈಗ ರಸ್ತೆ ಬಂದ್ ಆದ್ದರಿಂದ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಬ್ಬರಿಗೂ ಸಮಸ್ಯೆಯಾಗಿದೆ. ಸಮಯಕ್ಕೆ ಸರಿಯಾಗಿ ಸೊಪ್ಪಿನ ವ್ಯಾಪಾರಿಗಳು ಬರಲಾಗುತ್ತಿಲ್ಲ.

ಸಂಬಂಧಿಸಿದ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಸೊಪ್ಪಿನ ವ್ಯಾಪಾರಕ್ಕೆ ಅನುಕೂಲವಾಗಲಿದೆ ಎಂದು ಹಲವು ರೈತರು, ವ್ಯಾಪಾರಿಗಳು ಮನವಿ ಮಾಡಿದ್ದಾರೆ.

ಎರಡು ದಿನಗಳಿಂದ ಆನೆಚೌಕೂರು ಗೇಟ್‌ನಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದು ಯಾವುದೇ ವ್ಯಾಪಾರಿಗಳನ್ನು ಬಿಡುತ್ತಿಲ್ಲ. ಹೊರಗಿನಿಂದ ಗೋಣಿಕೊಪ್ಪಲಿಗೆ ಬರುವ ವ್ಯಾಪಾರಸ್ಥರನ್ನು ತಿತಿಮತಿ ಸಮುದಾಯ ಆರೋಗ್ಯ ಕೇಂದ್ರದ ಸುಶ್ರೂಷಕಿಯರು ಹಾಗೂ ಸಿಬ್ಬಂದಿ ತಪಾಸಣೆ ನಡೆಸಿ ಒಳಗೆ ಬಿಡುತ್ತಿದ್ದಾರೆ.

ಈ ಸಿಬ್ಬಂದಿ ಹಗಲು ರಾತ್ರಿ ಪಾಳಿ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಈ ಸಿಬ್ಬಂದಿಗೆ ಉಪಾಹಾರ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.