ಏಡಿ ಹಿಡಿಯಲು ಪಡಬೇಕಿದೆ ಹರಸಾಹಸ | ಏಡಿ ಹಿಡಿಯುವುದಕ್ಕಿಂತ ಹುಡುಕುವುದೇ ಹೆಚ್ಚು ತ್ರಾಸು | ಮಡಿಕೇರಿಯಲ್ಲಿ ಒಂದೆಡೆ ಸಿಗುತ್ತಿದೆ ಜೀವಂತ ಏಡಿ
ಮಡಿಕೇರಿ: ‘ಮಳೆಗಾಲದ ಅತಿಥಿ’ ಎಂದೇ ಹೆಸರಾಗಿರುವ ಏಡಿ ಎಂದರೆ ಸಾಕು ಮೈಮನಗಳು ಪುಳಕಗೊಳ್ಳುತ್ತವೆ. ಮಾತ್ರವಲ್ಲ, ಬಾಯಲ್ಲಿ ನೀರೂರುತ್ತದೆ. ಆದರೆ, ಇಂತಹ ಏಡಿ ಈಗ ತೆರೆಮರೆಗೆ ಸರಿಯುತ್ತಿದೆ.
ಬೇಸಿಗೆಯಲ್ಲಿ ಮಲಗಿದ್ದ ಕೆರೆ, ತೋಡುಗಳನ್ನೆಲ್ಲ ಮುಂಗಾರು ಮಳೆ ಬಡಿದೆಬ್ಬಿಸಿ, ಜೀವ ತಳೆಯುವಂತೆ ಮಾಡುತ್ತದೆ. ಈ ಮಳೆಗೆ ಭತ್ತದ ಗದ್ದೆಗಳು ನೀರುಂಡು ಕೆಸರನ್ನೆಲ್ಲ ತುಂಬಿಕೊಳ್ಳುತ್ತವೆ. ಈ ವೇಳೆ ನೂರಾರು ಸಂಖ್ಯೆಯಲ್ಲಿ ಏಡಿಗಳೂ ಕಾಣಿಸಿಕೊಳ್ಳುತ್ತವೆ.
ಈ ಏಡಿಗಳನ್ನು ಹಿಡಿಯುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಕೆರೆ, ತೋಡುಗಳಲ್ಲಿ ಏಡಿ ಹಿಡಿಯುವುದೇ ಒಂದು ರೋಮಾಂಚನದ ಅನುಭವ. ಒಂದು ಏಡಿ ಸಿಕ್ಕಿದರಂತೂ ‘ಕೋಟಿ ದುಡ್ಡು’ ಸಿಕ್ಕಂತೆ ಮಕ್ಕಳು ಹಿರಿಹಿರಿ ಹಿಗ್ಗುತ್ತಿದ್ದರು. ಆದರೆ, ಈಗ ಏಡಿ ಹಿಡಿಯುವ ಮಕ್ಕಳೂ ಕಡಿಮೆ, ಏಡಿಗಳೂ ಕಡಿಮೆಯಾಗುತ್ತಿವೆ.
ಈ ಮೊದಲೆಲ್ಲ ಏಡಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು. ಏಡಿ ಹಿಡಿದು ಜೀವಂತವಾಗಿ ಮಾರಾಟ ಮಾಡುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅದಕ್ಕೂ ಮಿಗಿಲಾಗಿ ಯುವಕರು, ಮಕ್ಕಳು ತಾವೇ ಭತ್ತದ ಗದ್ದೆಗಳಿಗೆ ತೆರಳಿ ಏಡಿ ಹಿಡಿದು ತಂದು ಅದರಿಂದ ರುಚಿಕರ ಖಾದ್ಯ ತಯಾರಿಸಿ ಸೇವಿಸುತ್ತಿದ್ದರು. ಆದರೆ, ಈಗ ಇವೆಲ್ಲವೂ ಅಳಿಯುತ್ತಿದ್ದು, ಸದ್ಯಕ್ಕೆ ಮಡಿಕೇರಿಯಲ್ಲಿ ಒಬ್ಬ ವ್ಯಾಪಾರಿಯಷ್ಟೇ ಉಳಿದಿದ್ದಾರೆ.
ಏಕೆ ಹೀಗೆ?
ಭತ್ತದ ಗದ್ದೆಗಳೆಲ್ಲವೂ ಈಗ ಮಾಯವಾಗತೊಡಗಿವೆ. ನಗರೀಕರಣದ ಭರಾಟೆಯಲ್ಲಿ ಭತ್ತದ ಗದ್ದೆಗಳು ನಿವೇಶನಗಳಾಗುತ್ತಿವೆ. ಭತ್ತದ ಬೇಸಾಯ ಕಷ್ಟ ಮತ್ತು ಹೆಚ್ಚಿನ ಖರ್ಚು ಬೇಡುತ್ತದೆ ಎಂದು ಭಾವಿಸಿ ಬಹಳಷ್ಟು ರೈತರು ಗದ್ದೆಗಳನ್ನು ಉಳುಮೆ ಮಾಡುತ್ತಿಲ್ಲ. ಹೀಗಾಗಿ, ಏಡಿಗಳಿಗೆ ಜೀವ ತಳೆಯಲು ಜಾಗವೇ ಸಿಗದ ಸ್ಥಿತಿ ನಿರ್ಮಾಣವಾಗಿದೆ.
ಮತ್ತೊಂದು ಕಡೆ, ಇರುವ ಗದ್ದೆಗಳಿಗೂ ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಏಡಿಗಳು ಬದುಕುವುದೂ ಕಷ್ಟವಾಗುತ್ತಿದೆ. ಈ ಕಾರಣದಿಂದಲೂ ಏಡಿಗಳನ್ನು ಈಗ ಹುಡುಕಬೇಕಾದ ಸ್ಥಿತಿ ಇದೆ ಎಂದು ಏಡಿ ಹಿಡಿಯುವವರು ಹೇಳುತ್ತಾರೆ.
ಮುಂಚೆ ಸಮೀಪದಲ್ಲೆ ಇದ್ದ ಏಡಿ ಈಗ ಇಲ್ಲ! ‘ಮುಂಚೆ ಸಮೀಪದಲ್ಲೇ ಇದ್ದ ಏಡಿಗಳು ಈಗ ಕಾಣಿಸುತ್ತಿಲ್ಲ’ ಎಂದು ಮಡಿಕೇರಿಯ ಏಡಿ ವ್ಯಾಪಾರಿ ಕುಮಾರ ಹೇಳುತ್ತಾರೆ. ಈ ಕುರಿತು ‘ಪ‍್ರಜಾವಾಣಿ’ಯೊಂದಿಗೆ ಮಾತಿಗಿಳಿದ ಅವರು ‘ಮುಂಚೆ ಇಲ್ಲೇ ಸಮೀಪದ ಗದ್ದೆಗಳಲ್ಲೇ ಇವುಗಳನ್ನು ಹಿಡಿದು ತರುತ್ತಿದ್ದೆವು. ಆದರೆ ಈಗ ಸಮೀಪದಲ್ಲಿ ಗದ್ದೆಗಳೂ ಇಲ್ಲ ದೂರದ ಗದ್ದೆಗಳಲ್ಲೂ ಕಾಣಿಸುತ್ತಿಲ್ಲ. ಎಲ್ಲವೂ ಬದಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಭತ್ತದ ಗದ್ದೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕಿದ್ದರಿಂದಲೋ ಏನೋ ಏಡಿಗಳು ಗದ್ದೆಗಳಿಂದ ಮಾಯವಾಗಿವೆ. ಈಗೇನಿದ್ದರೂ ಹೊಳೆ ತೋಡು ಕೆರೆಗಳಲ್ಲೇ ಹಿಡಿಯಬೇಕಾದ ಸ್ಥಿತಿ ಇದೆ ಎಂದರು. ‘ಈಗ ಏಡಿ ಹಿಡಿಯಲು 70ರಿಂದ 80 ಕಿ.ಮೀ ದೂರ ಸುತ್ತಾಡಬೇಕಿದೆ. ನಾವು 5ರಿಂದ 6 ಮಂದಿ ಹಗಲು ರಾತ್ರಿ ಏಡಿ ಹಿಡಿದು ಜೀವಂತವಾಗಿ ಅವುಗಳನ್ನು ಸರಗಳನ್ನಾಗಿ ಕಟ್ಟಿ ತಂದು ಮಾರಾಟ ಮಾಡುತ್ತಿದ್ದೇವೆ. ಜನರಿಂದ ಬೇಡಿಕೆ ಇದ್ದರೂ ಮುಂಚಿನಷ್ಟು ಏಡಿಗಳು ಈಗ ಸಿಗುತ್ತಿಲ್ಲ ಎಂದರು.
ಏಡಿ ಸಾಕಾಣಿಕೆಗೆ ಇದೆ ತಾಂತ್ರಿಕ ಮಾರ್ಗದರ್ಶನ
ಕೃತಕವಾಗಿ ಏಡಿಗಳನ್ನು ಸಾಕಾಣಿಕೆ ಮಾಡುವ ತಂತ್ರಜ್ಞಾನ ಮೀನುಗಾರಿಕೆ ಇಲಾಖೆಯಲ್ಲಿ ಲಭ್ಯವಿದೆ. ಆದರೆ ಇದುವರೆಗೂ ಕೊಡಗು ಜಿಲ್ಲೆಯಲ್ಲಿ ಯಾರೊಬ್ಬರೂ ಏಡಿ ಸಾಕಾಣಿಕೆ ಕಡೆಗೆ ಗಮನ ಹರಿಸಿಲ್ಲ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಸಿ.ಎಸ್.ಸಚಿನ್ ‘ಪ್ರಜಾವಾಣಿ’ಗೆ ತಿಳಿಸಿದರು. ನದಿಯ ನೀರಿನ ಹರಿವಿನ ಬದಲಾವಣೆ ಹವಾಮಾನ ಬದಲಾವಣೆ ಮರಳು ತೆಗೆಯುವುದು ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ ಕಾಲುವೆಗಳ ಕಾಂಕ್ರೀಟೀಕರಣ ಚೆಕ್‌ಡ್ಯಾಂಗಳ ನಿರ್ಮಾಣ ಸೇರಿದಂತೆ ಹಲವು ಕಾರಣಗಳಿಂದ ನೈಸರ್ಗಿಕವಾಗಿ ಸಿಗುವ ಏಡಿಗಳು ಕಡಿಮೆಯಾಗುತ್ತಿವೆ ಎಂದರು. ಈಗ ತಮಿಳುನಾಡು ಮತ್ತು ಕೇರಳಗಳಲ್ಲಿ ಏಡಿ ಸಾಕಾಣಿಕೆ ನಡೆಯುತ್ತಿದೆ. ಆಸಕ್ತರು ಮೊ: 9980674821 ಸಂಪರ್ಕಿಸಬಹುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.