ಗೋಣಿಕೊಪ್ಪಲು: ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕಪ್ ಕೊಡವ ಕೌಟುಂಬಿಕ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಮಚ್ಚಮಾಡ ತಂಡದ ಬೋಪಣ್ಣ 22 ಬಾಲ್ ಗಳಿಗೆ 72 ರನ್ ಗಳಿಸಿದ್ದರಿಂದ ಬೊಳ್ಳಂಗಡ ತಂಡದ ವಿರುದ್ಧ 97 ರನ್‌ಗಳಿಂದ ಭರ್ಜರಿ ಜಯಗಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮಚ್ಚಮಾಡ ತಂಡ ನಿಗದಿತ 6 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 130 ರನ್ ಕಲೆ ಹಾಕಿತು. ಬೃಹತ್ ಮೊತ್ತ ಬೆನ್ನಟ್ಟಿದ ಬೊಳ್ಳಂಗಡ ತಂಡ 4 ವಿಕೆಟ್ ನಷ್ಟಕ್ಕೆ ಕೇವಲ 34 ರನ್ ಗಳಿಸಲಷ್ಟೇ ಶಕ್ತವಾಯಿತು. ಬ್ಯಾಟಿಂಗ್‌ನಲ್ಲಿ ಉತ್ತಮ ಪದರ್ಶನ ತೋರಿದ ಮಚ್ಚಮಾಡ ತಂಡದ ಬೋಪಣ್ಣ, ಬೌಲಿಂಗ್‌ನಲ್ಲಿಯೂ ಮಿಂಚಿ 2 ವಿಕೆಟ್ ಗಳಿಸಿದರು.
ಅಚ್ಚಪಂಡ ತಂಡ ಕಾಳಿಮಾಡ ತಂಡದ ಎದುರು 7 ವಿಕೆಟ್ ಗಳಿಂದ ಜಯಗಳಿಸಿತು. ಕಾಳಿಮಾಡ ತಂಡ ನೀಡಿದ 35 ರನ್‌ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಅಚ್ಚಪಂಡ ತಂಡ ಕೇವಲ 3.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 36 ರನ್ ಗಳಿಸುವ ಮೂಲಕ ಗುರಿ ತಲುಪಿತು. ಅಚ್ಚಪಂಡ ತಂಡದ ಮಿಥುನ್ 11 ಬಾಲ್‌ಗಳಲ್ಲಿ 27 ರನ್ ಗಳಿಸಿ ತಂಡದ ಗೆಲುವಿನ ರೂವಾರಿಯಾದರು.
ಸಣ್ಣುವಂಡ ತಂಡ ಮಂಡಂಗಡ ತಂಡವನ್ನು 9 ವಿಕೆಟ್ ಗಳಿಂದ ಸೋಲಿಸಿ ಗೆಲುವಿನ ನಗೆ ಬೀರಿತು. ಮೊದಲು ಬ್ಯಾಟಿಂಗ್ ನಡೆಸಿದ ಮಂಡಂಗಡ ತಂಡ 5 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ಸಣ್ಣುವಂಡ ಉತ್ತಮ ಬ್ಯಾಟಿಂಗ್ ನಡೆಸಿ ಕೇವಲ 1 ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು.
ಆಟ್ರಂಗಡ ತಂಡ ಚಿರಿಯಪಂಡ ತಂಡದ ಮೇಲೆ 6 ವಿಕೆಟ್ ಗಳಿಂದ ಜಯಸಾಧಿಸಿತು. ಚಿರಿಯಪಂಡ ತಂಡದ 54ರನ್ ಗುರಿ ಬೆನ್ನಟ್ಟಿದ ಆಟ್ರಂಗಡ ತಂಡ 4 ವಿಕೆಟ್ ಕಳೆದುಕೊಂಡು 55 ರನ್ ಗಳಿಸಿ ಜಯದಾಖಲಿಸಿತು.
ದಿನದ ಕೊನೆಯ ಪಂದ್ಯದಲ್ಲಿ ಮಾಳೇಟೀರ (ಕೆದಮಳ್ಳೂರು) ತಂಡ ಮೂಕಳೇರ ತಂಡವನ್ನು 46 ರನ್‌ಗಳಿಂದ ಸೋಲಿಸಿತು. ಮಾಳೇಟೀರ ತಂಡದ ನೀಡಿದ 87 ರನ್‌ಗಳ ಗುರಿ ಬೆನ್ನತ್ತಲಾಗದ ಮೂಕಳೇರ ತಂಡ ಕೇವಲ 41 ರನ್ ಗಳಿಸಿ ಸೋಲಪ್ಪಿಕೊಂಡಿತು.
ಗುರುವಾರದ ಪಂದ್ಯಗಳು: ಬೆಳಿಗ್ಗೆ 9 ಗಂಟೆಗೆ ಕರವಟ್ಟೀರ–ಅಳಮೇಂಗಡ, 10 ಗಂಟೆಗೆ ಕಳಕಂಡ–ಅಳಮೇಂಗಡ, 11 ಗಂಟೆಗೆ ಆದೇಂಗಡ–ಕುಪ್ಪಣಮಾಡ, 12 ಗಂಟೆಗೆ ಮಣವಟ್ಟೀರ–ಮುಕ್ಕಾಟೀರ (ಹರಿಹರ), 2 ಗಂಟೆಗೆ ಕಾಣತಂಡ–ಬೊಟ್ಟಂಗಡ, 3 ಗಂಟೆಗೆ ಓಡಿಯಂಡ–ಅಮ್ಮಾಟಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.