ADVERTISEMENT

ಕೊಡಗು: ನಾಳೆಯಿಂದ 4 ದಿನ ನಿಷೇಧಾಜ್ಞೆ

ಸಮಾವೇಶ, ಪ್ರತಿಭಟನೆಗೆ ದೊರೆಯದ ಅನುಮತಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 20:46 IST
Last Updated 22 ಆಗಸ್ಟ್ 2022, 20:46 IST
   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇದೇ 24ರ ಬೆಳಿಗ್ಗೆ 6 ಗಂಟೆಯಿಂದ 27ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೋಮವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಪ್ರತಿಭಟನೆ, ಜಾಥಾ, ಮೆರವಣಿಗೆ, ಕಪ್ಪುಬಾವುಟ ಪ್ರದರ್ಶನ ನಿಷೇಧಿಸಲಾಗಿದೆ. ಐವರು ಮತ್ತು ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡದಂತೆ ನಿರ್ಬಂಧ ವಿಧಿಸಲಾಗಿದೆ.

ಈ ಮೂಲಕ ಆ.26ರಂದು ಕಾಂಗ್ರೆಸ್ ಕರೆ ನೀಡಿದ್ದ ‘ಮಡಿಕೇರಿ ಚಲೋ’ ಹಾಗೂ ಬಿಜೆಪಿ ಆಯೋಜಿಸಿದ್ದ ‘ಜನಜಾಗೃತಿ ಸಮಾವೇಶ’ಗಳಿಗೆ ಅನುಮತಿ ನಿರಾಕರಿಸಲಾಗಿದೆ.

ADVERTISEMENT

‘ಕೃಷ್ಣ, ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಲಿ’

ಮೈಸೂರು: ‘ಬಿಜೆಪಿ ಪ್ರಮುಖರಾದ ಶಾಸಕ ಬಿ.ಎಸ್‌.ಯಡಿಯೂರಪ್ಪ, ಎಸ್.ಎಂ.ಕೃಷ್ಣ ಮಧ್ಯಸ್ಥಿಕೆ ವಹಿಸಿ ಎರಡೂ ಪಕ್ಷದವರ ಮನವೊಲಿಸಬೇಕು. ಕಾನೂನು–ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು’ ಎಂದು ‌ವಿಧಾನಪರಿಷತ್‌ ಸದಸ್ಯ ಎ.ಎಚ್‌.ವಿಶ್ವನಾಥ್‌ ಪ್ರತಿಪಾದಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೊಡಗಿನವರಿಗೆ ಕಾಂಗ್ರೆಸ್–ಬಿಜೆಪಿ ಎರಡೂ ಪಕ್ಷಗಳ ಮೇಲೂ ಆಕ್ರೋಶವಿದೆ. ಜಿಲ್ಲೆ ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಬೇಕು ಎನ್ನುವ ಕೊಡವರ ಬೇಡಿಕೆ ಹಾಗೇ ಉಳಿದಿದೆ. ಜಿಲ್ಲೆಯ ಅಭಿವೃದ್ಧಿ ಮೊದಲು ಚರ್ಚೆಯಾಗಲಿ’ ಎಂದರು.

‘ನಾಯಕರ ಮೇಲೆ ಜನ ಮೊಟ್ಟೆ, ಕಲ್ಲು, ಟೊಮೆಟೊ, ಸೆಗಣಿ ಎಸೆಯುವುದು ಸಹಜ. ಬೇಕಿದ್ದರೆ ವಿಧಾನಸಭೆಯಲ್ಲಿ ಅವಿಶ್ವಾಸ ಮಂಡಿಸಿ. ಚುನಾವಣೆ ಸಮೀಪಿಸುತ್ತಿದ್ದು ಏನು ಬೇಕಾದರೂ ಆಗಬಹುದು. ಅದಕ್ಕೆ ಹೊಣೆಯಾಗಬೇಡಿ’ ಎಂದು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು.

‘ಸಿದ್ದು ಸುಲ್ತಾನ್‌’ಗೆ ಹೆದರುತ್ತಾರೆಯೇ?’

‘ಸಿದ್ದರಾಮಯ್ಯ ಕೊಡಗಿನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಟಿಪ್ಪು ಸುಲ್ತಾನ್ ದಂಡೆತ್ತಿ ಬಂದಾಗಲೇ ಹೆದರದ ಕೊಡಗಿನ ಜನ, ಈ ಸಿದ್ದು ಸುಲ್ತಾನ್‌ಗೆ ಹೆದರುತ್ತಾರೆಯೇ?’ ಎಂದು ಮೈಸೂರು–ಕೊಡಗು ಬಿಜೆಪಿ ಸಂಸದ ಪ್ರತಾಪ ಸಿಂಹ ವ್ಯಂಗ್ಯವಾಡಿದರು.

‘ಅಕ್ಕ–ಪಕ್ಕದ ಜಿಲ್ಲೆಗಳ ಜನರೊಂದಿಗೆ ಕೇರಳದಿಂದ ಸಾಕುಮಕ್ಕಳಾದ ಎಸ್‌ಡಿಪಿಐ ಕಾರ್ಯಕರ್ತರನ್ನೂ ಕಾಂಗ್ರೆಸ್ ಕರೆತರಲಿ. ಹೊರಗಡೆಯಿಂದ ಜನರನ್ನು ಕರೆತರುವ ದೈನೇಸಿ ಸ್ಥಿತಿ ಕೊಡಗಿನ ಬಿಜೆಪಿಗೆ ಬಂದಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮೊಟ್ಟೆ ಎಸೆತ: ಬಂಧಿತರ ಸಂಖ್ಯೆ 18ಕ್ಕೆ ಏರಿಕೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕೋಳಿಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 18ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.