ADVERTISEMENT

ಬದುಕಲು ಕಲಿಸಿದ್ದ ಸ್ವಾಮಿ ಜಗದಾತ್ಮಾನಂದರು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 5:48 IST
Last Updated 16 ನವೆಂಬರ್ 2018, 5:48 IST
ಸ್ವಾಮಿ ಜಗದಾತ್ಮಾನಂದರು
ಸ್ವಾಮಿ ಜಗದಾತ್ಮಾನಂದರು   

ಮಡಿಕೇರಿ: ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದ ಸ್ವಾಮಿ ಜಗದಾತ್ಮಾನಂದಜೀ ಮಹಾರಾಜರು ಬದುಕಲು ಕಲಿಸಿದವರು. ಅದೇ ಹೆಸರಿನಲ್ಲಿ ಪುಸ್ತಕ ರಚಿಸಿ ನಾಡಿನಾದ್ಯಂತ ಚಿರಪರಿಚಿತರಾಗಿದ್ದರು. ಬರೆದಂತೆಯೇ ಬದುಕಿದ್ದ ಜಗದಾತ್ಮಾನಂದಜೀ (89) ಅವರು ಗುರುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ ಜೆಎಸ್ಎಸ್‌ ಆಸ್ಪತ್ರೆಯಲ್ಲಿ ನಿಧನರಾದರು.

ಸರಳತೆ, ಸ್ನೇಹಮ ವ್ಯಕ್ತಿತ್ವ ಹೊಂದಿದ್ದ ಸ್ವಾಮೀಜಿ, ಸಹಜವಾಗಿಯೇ ವಿದ್ಯಾರ್ಥಿಗಳ ಪ್ರೀತಿಗೂ ಪಾತ್ರರಾಗಿದ್ದರು. ಅವರಿಂದ ಸಾಂತ್ವನ ಹಾಗೂ ಮಾರ್ಗದರ್ಶನ ಪಡೆಯಲು ವಿದ್ಯಾರ್ಥಿಗಳು ಉತ್ಸುಕರಾಗಿ ಮುಗಿಬೀಳುತ್ತಿದ್ದರು. ಪೊನ್ನಂಪೇಟೆಯಲ್ಲಿ ಯಾವಾಗಲೂ ಉಪನ್ಯಾಸಗಳು ಜರುಗುತ್ತಿದ್ದವು.

ಜಗದಾತ್ಮಾನಂದಜೀ ಅವರು ಶ್ರೀರಾಮಕೃಷ್ಣ ಮಹಾಸಂಘದ ಹಿರಿಯ ಸಂನ್ಯಾಸಿಗಳು. ಶ್ರೀರಾಮಕೃಷ್ಣರು, ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದ ಅವರ ಜೀವನ ಮತ್ತು ಸಂದೇಶಗಳಿಂದ ಸ್ಫೂರ್ತಿ ಪಡೆದ ಸ್ವಾಮೀಜಿ ಬೆಂಗಳೂರಿನ ಶಾಖೆಯಲ್ಲಿ ರಾಮಕೃಷ್ಣ ಸಂಘವನ್ನು ಸೇರಿದ್ದರು.

ADVERTISEMENT

ಬೆಂಗಳೂರು ಕೇಂದ್ರದ ಅಧ್ಯಕ್ಷರೂ ಆಗಿದ್ದ ಸ್ವಾಮಿ ಯತೀಶ್ವರಾನಂದಜೀ ಮಹಾರಾಜರ ಆಧ್ಯಾತ್ಮಿಕ ಮಾರ್ಗದರ್ಶನ ಪಡೆದು ಬೆಳೆದರು. ಸಂನ್ಯಾಸ ದೀಕ್ಷೆ ಪಡೆದ ಬಳಿಕ ಮಂಗಳೂರು, ಮೈಸೂರು, ಷಿಲ್ಲಾಂಗ್, ಸಿಂಗಪೂರ್‌ ಮತ್ತು ಪೊನ್ನಂಪೇಟೆಯ ರಾಮಕೃಷ್ಣಾಶ್ರಮಗಳಲ್ಲಿ ಸೇವೆ ಸಲ್ಲಿಸಿದ್ದು ಸ್ಮರಣೀಯ.

ಮೈಸೂರಿನಲ್ಲಿರುವಾಗ ರಾಮಕೃಷ್ಣ ವಿದ್ಯಾಶಾಲೆಯ ಕ್ಷೇಮಪಾಲಕರಾಗಿ, ಶಾಲೆ ಹಾಗೂ ಆಸ್ಪತ್ರೆ ಮೇಲ್ವಿಚಾರಣೆ ಜವಾಬ್ದಾರಿ ವಹಿಸಿಕೊಂಡಿದ್ದರು. ಭಗವದ್ಗೀತೆ, ಉಪ ನಿಷತ್ತುಗಳು, ರಾಮಕೃಷ್ಣ- ವಿವೇಕಾನಂದ ವೇದಾಂತ ಸಾಹಿತ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ವಿದ್ವಾಂಸರಾಗಿದ್ದರು.

ಸ್ವಾಮೀಜಿ ಅವರು ವಾಗ್ಮಿ ಜೊತೆಗೆ ಅತ್ಯುತ್ತಮ ಲೇಖಕರೂ ಆಗಿದ್ದರು. ಅವರ ಸುಪ್ರಸಿದ್ಧ ಕನ್ನಡ ಗ್ರಂಥ ‘ಬದುಕಲು ಕಲಿಯಿರಿ’ ಅನೇಕ ಮರು ಮುದ್ರಣಗಳನ್ನು ಕಂಡಿದೆ. ಇದುವರೆಗೆ ಸುಮಾರು 3 ಲಕ್ಷ ಪ್ರತಿಗಳು ಮಾರಾಟಗೊಂಡಿವೆ.

ತಮಿಳು, ತೆಲುಗು, ಮರಾಠಿ, ಗುಜರಾತಿ, ಇಂಗ್ಲಿಷ್‌ ಮುಂತಾದ ಹತ್ತು ಭಾಷೆಗಳಲ್ಲಿ ಅನುವಾದಗೊಂಡಿದೆ. ಇಂಗ್ಲಿಷ್ ಆವೃತ್ತಿ “Learn to Live” ಸಿಂಗಪೂರಿನಿಂದ ಪ್ರಕಟಗೊಂಡಿತು. ಅವರ ಸಾಹಿತ್ಯಸೇವೆಯನ್ನು ಪರಿಗಣಿಸಿ 2004ರಲ್ಲಿ ಅವರಿಗೆ ಆರ್ಯಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸ್ವಾಮಿ ಜಗದಾತ್ಮಾನಂದಜೀ ಅವರ ಉಪನ್ಯಾಸಗಳ ಪ್ರಭಾವ ವಿದೇಶಗಳಿಗೂ ಹಬ್ಬಿತು. ಮಲೇಶಿಯಾ, ಇಂಡೋನೇಶಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲೂ ಉಪನ್ಯಾಸ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.