ಕುಶಾಲನಗರ: ಕೊಡಗು ವಿಶ್ವವಿದ್ಯಾಲಯ ಉಳಿಸುವಂತೆ ಕೋರಿಕೆ ಸಲ್ಲಿಸಲು ಸೋಮವಾರ ಶಾಸಕ ಡಾ.ಮಂತರಗೌಡ ನೇತೃತ್ವದಲ್ಲಿ ತೆರಳಿದ್ದ ಕೊಡಗು ವಿವಿ ಹಿತರಕ್ಷಣಾ ಸಮಿತಿಯ ನಿಯೋಗಕ್ಕೆ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಕೊಡಗು ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ, ಗೌರವಾಧ್ಯಕ್ಷ ವಿ.ಪಿ.ಶಶಿಧರ್ ಹಾಗೂ ಶಾಸಕರು ಡಿಸಿಎಂ ಶಿವಕುಮಾರ್ ಅವರ ನಿವಾಸದಲ್ಲಿ ಭೇಟಿ ಮಾಡಿ ಕೊಡಗು ವಿ.ವಿ.ಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಡಿಸಿಎಂ ಅವರು, ‘ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಜೊತೆಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ದೇಶ ವಿದೇಶಗಳ ವಿವಿಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಗೆ ಇಳಿಯಬೇಕೆಂಬುದು ನಮ್ಮ ಒತ್ತಾಸೆಯಾಗಿದೆ’ ಎಂದರು.
ಇದೇ ವೇಳೆ ಕೊಡಗಿನ ಮಂದಿಗೆ ಮಂಗಳೂರು ವಿವಿ ಬೇಕೇ? ಕೊಡಗು ವಿವಿ ಬೇಕೇ? ಎಂದು ಪ್ರಶ್ನಿಸಿದ ಅವರು, ‘ಈ ಹಿಂದೆ ನಮಗೆ ಬಂದ ಮಾಹಿತಿಗಳ ಆಧಾರದ ಮೇಲೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಅಷ್ಟೇ. ಇದೀಗ ಮತ್ತೊಮ್ಮೆ ಪೂರ್ಣ ಮಾಹಿತಿ ತರಿಸಿಕೊಂಡು ಚರ್ಚಿಸಲಾಗುವುದು. ಕೊಡಗಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತೊಂದರೆ ಆಗದಂತೆ ಎಚ್ಚರ ವಹಿಸಲಾಗುವುದು’ ಎಂದು ಭರವಸೆ ನೀಡಿದರು.
‘ಮಂಗಳೂರು ವಿ.ವಿ ಗೆ ಸಂಯೋಜಿತಗೊಂಡ ಕೆಲವು ಬೋಧಕ ವರ್ಗದವರು ಮಂಗಳೂರು ವಿವಿಯಲ್ಲೇ ಕೊಡಗು ವಿವಿ ವಿಲೀನ ಮಾಡುವಂತೆ ಪತ್ರ ಬರೆದು ಸರ್ಕಾರಕ್ಕೆ ಒತ್ತಾಯಿಸಿದ್ದರು. ಹಾಗಾಗಿ ಮತ್ತಷ್ಟು ಮಾಹಿತಿಯನ್ನಾಧರಿಸಿ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಲಾಗಿದೆ ಅಷ್ಟೇ. ಮಡಿಕೇರಿ ಶಾಸಕ ಡಾ.ಮಂತರಗೌಡರ ವಿಶೇಷ ಕಾಳಜಿ ಹಾಗೂ ಕೊಡಗಿನ ಮಂದಿಯ ಕೋರಿಕೆಯನ್ನು ಸರ್ಕಾರ ಅಲ್ಲಗಳೆಯಲ್ಲ. ಆದರೆ, ಯಾವುದೇ ರಾಜಕೀಯಕ್ಕೂ ಬಗ್ಗಲ್ಲ. ಈ ಬಗ್ಗೆ ಮತ್ತೊಮ್ಮೆ ಸಂಪುಟ ಸಮಿತಿಯಲ್ಲಿ ಪರಾಮರ್ಶಿಸಿ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಪೂರಕವಾಗಿ ಸ್ಪಂದಿಸುವುದಾಗಿ’ ಶಿವಕುಮಾರ್ ಹೇಳಿದರು.
ಕೊಡಗು ವಿವಿಗೆ ಯಾವುದೇ ಧಕ್ಕೆಯಾಗದಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಶಾಸಕ ಡಾ.ಮಂತರಗೌಡ ಡಿಕೆಶಿಯವರಲ್ಲಿ ಮನವಿ ಮಾಡಿದರು.
ವಿವಿ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ವಿ.ಪಿ.ಶಶಿಧರ್, ಹೈಕೋರ್ಟ್ ವಕೀಲ ಎಚ್.ಎಸ್. ಚಂದ್ರಮೌಳಿ, ಕೆ.ಪಿ.ಚಂದ್ರಕಲಾ ಅವರು ಕೊಡಗಿನ ಪ್ರಾಕೃತಿಕ ಸನ್ನಿವೇಶಗಳನ್ನು ಮನಗಂಡು ಕೊಡಗಿನಲ್ಲಿರುವ ವಿವಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು’ ಎಂದು ಮನವರಿಕೆ ಮಾಡಿದರು.
ನಿಯೋಗದಲ್ಲಿ ಉದ್ಯಮಿ ನಾಪಂಡ ಮುತ್ತಪ್ಪ, ಶಿಕ್ಷಣ ಪ್ರೇಮಿ ಎನ್.ಎನ್.ಶಂಭುಲಿಂಗಪ್ಪ, ಕರವೇ ರಾಜ್ಯ ಸಂಚಾಲಕಿ ದೀಪಾ ಪೂಜಾರಿ, ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ ಗುಂಡೂರಾವ್, ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ, ಉಪನ್ಯಾಸಕ ಡಾ.ಜಮೀರ್ ಅಹಮದ್, ಎಚ್.ಎನ್.ರಾಜಶೇಖರ್, ಸಮಿತಿ ಪ್ರಮುಖರಾದ ಟಿ.ಕೆ.ಪಾಂಡುರಂಗ, ಟಿ.ಬಿ.ಜಗದೀಶ್, ರೈತ ಮುಖಂಡರಾದ ಸಂಜೀವಯ್ಯ, ಮಹದೇವ್, ಅಳುವಾರ ಮೂರ್ತಿ, ರಮೇಶ್, ಕಿಶೋರ್, ಆದಂ, ಅರುಣ್ ಕೊತ್ನಳ್ಳಿ, ಮಂಜು ಇದ್ದರು ಎಂದು ವಿವಿ ಹಿತರಕ್ಷಣಾ ಬಳಗವು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.