ಮಡಿಕೇರಿ: ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಕೊಡಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬುಧವಾರ ಕಡಂಗದಲ್ಲಿ ಮಾನವ ಸರಪಳಿ ರಚಿಸಿ ಹಕ್ಕೊತ್ತಾಯವನ್ನು ಮಂಡಿಸಿತು.
ಈ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ‘ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ ನೀಡಿರುವ ‘ಸಂಘ’ ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ಕೂಡ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ ಪ್ರತ್ಯೇಕ ಲೋಕಸಭೆ ಮತ್ತು ವಿಧಾನಸಭೆಯ ಕೊಡವ ಮತ ಕ್ಷೇತ್ರವನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ವಿಧಾನಸಭೆ ಮತ್ತು ಸಂಸತ್ ಕ್ಷೇತ್ರಗಳ ಪುನರ್ ಪರಿಶೀಲನೆ, ಪುನರ್ ವ್ಯಾಖ್ಯಾನಕ್ಕಾಗಿ ನಡೆಯುತ್ತಿರುವ ಗಡಿ ರಚನಾ ಪ್ರಕ್ರಿಯೆಯಿಂದ ಕೊಡವ ಸಮುದಾಯದ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಘೋಷಿಸಬೇಕು, ಎಸ್‍ಟಿ ಟ್ಯಾಗ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದ ಸಿಎನ್‍ಸಿ ಸದಸ್ಯರು ಆದಿಮಸಂಜಾತ ಕೊಡವರ ಪ್ರಗತಿ ಹಾಗೂ ರಕ್ಷಣೆಗಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಸರ್ಕಾರ ಒದಗಸಿಕೊಡಬೇಕಕು ಎಂದು ಆಗ್ರಹಿಸಿದರು.
ಪಟ್ಟಚೆರುವಂಡ ಸ್ವಪ್ನ, ಪಟ್ಟಚೆರುವಂಡ ಪ್ರಗತಿ ಪೊನ್ನಣ್ಣ, ಕೋಡಿರ ದಿನಾ ಪೊನ್ನಮ್ಮ, ಸರ್ವಶ್ರೀ ಪಾಂಡಂಡ ಕಿಟ್ಟು, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಕೋಡಿರ ವಿನೋದ್ ನಾಣಯ್ಯ, ನೆರ್ಪಂಡ ಹರ್ಷ, ನೆರ್ಪಂಡ ಜಿಮ್ಮಿ, ಉದಿಯಂಡ ಚಂಗಪ್ಪ, ಸೊಮೆಯಂಡ ರೇಷ ತಮ್ಮಯ್ಯ, ಬಲ್ಲಚಂಡ ರವಿ, ಪಾಂಡಂಡ ಸುಧೀರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.