ಸೋಮವಾರಪೇಟೆ: ತಾಲ್ಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇನಕನಹಳ್ಳಿ ಗ್ರಾಮದ ನೇತಾಜಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಸ್ಥಳೀಯ ನಿವಾಸಿಗಳು ನೀರಿಗಾಗಿ ಪರದಾಡುತ್ತಿದ್ದಾರೆ.
ಕಳೆದ 25 ದಿನಗಳಿಂದ ನೀರಿನ ಸಮಸ್ಯೆಯಾಗಿದ್ದು, ಸ್ಥಳೀಯ ನಿವಾಸಿಗಳು ಸ್ವತಃ ಖಾಸಗಿ ವಾಹನಗಳಲ್ಲಿ ದಿನಕ್ಕೆ ಐದುನೂರು ರೂಪಾಯಿ ವ್ಯಯಿಸಿ ಕುಡಿಯುವ ನೀರು ತಂದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಕೂಲಿ ಕಾರ್ಮಿಕರೇ ವಾಸಿಸುತ್ತಿದ್ದು, ಅಧಿಕಾರಿಗಳು ರಸ್ತೆ ಕಾಮಗಾರಿಯ ನೆಪ ಹೇಳಿ, ನೀರಿನ ಸರಬರಾಜಿಗೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ದೂರಿದರು.
ಸೋಮವಾರ ಕೊಡಗು ಜಿಲ್ಲಾ ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ನೇತೃತ್ವದಲ್ಲಿ, ತಾಲ್ಲೂಕು ಪಂಚಾಯಿತಿ ಮುಖ್ಯಾಧಿಕಾರಿ ಪರಮೇಶಕುಮಾರ್ ಅವರಿಗೆ ಸಮಸ್ಯೆ ಮನವರಿಕೆ ಮಾಡಿಕೊಟ್ಟು, ಕೂಡಲೇ ಬಗೆಹರಿಸುವಂತೆ ಮನವಿ ಸಲ್ಲಿಸಿದರು. ತಪ್ಪಿದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ಸಂದರ್ಭ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ರೋಹಿತ್ ಗೌಡ, ಉಪಾಧ್ಯಕ್ಷ ಶಿವು, ನಗರ ಘಟಕದ ಅದ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರವೀಶ್ ಕಲ್ಕಂದೂರು, ಪ್ರಮುಖರಾದ ಹಿನಕನಹಳ್ಳಿ ಶಿವಪ್ಪ, ಸೀಮಂತ್, ಮನೋಹರ, ಪುನೀತ್, ಹರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.