
ನಾಪೋಕ್ಲು: ‘ಯಾವುದೇ ಅಧಿಕಾರ ಶಾಶ್ವತ ಅಲ್ಲ. ಜನಬೆಂಬಲ ಇದ್ದರೆ ಮಾತ್ರ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ’ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ನಾಪೋಕ್ಲು ಕೊಡವ ಸಮಾಜದ ವತಿಯಿಂದ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ನಡೆಯುತ್ತಿದೆ. ಮಳೆಗಾಲದ ಮೊದಲು ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು’ ಎಂದರು.
ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಇತ್ತೀಚೆಗೆ ಮುಕ್ತಾಯಗೊಂಡ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಶಾಸಕ ಪೊನ್ನಣ್ಣ ಅವರ ವಿಶೇಷ ಪ್ರಯತ್ನದಿಂದಾಗಿ ಭೂಕಂದಾಯ ವಿಧೇಯಕ ಅಂಗೀಕಾರ ಆಗಿರುವುದನ್ನು ಸಂಭ್ರಮಿಸಲು ಈ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾಯ್ದೆ ಅಂಗೀಕಾರ ಆಗಿರುವುದರಿಂದ ಜನರನ್ನು ಕಾಡುತ್ತಿದ್ದ ದಶಕಗಳ ಜಮ್ಮ ಮತ್ತು ಪಟ್ಟೆದಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತಾಗಿದೆ’ ಎಂದರು.
ನಮ್ಮ ಮನವಿಗೆ ಸ್ಪಂದಿಸಿ ಕೊಡವ ಸಮಾಜದ ರಸ್ತೆ ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ಮಾಡಲಾಗಿದೆ. ಹಾಗೆ ಮುಂದುವರೆಸಿ ಉಳಿದಿರುವ ರಸ್ತೆ ಸಮಸ್ಯೆಯನ್ನೂ ಪರಿಹರಿಸಿ ಕೊಡುವಂತೆ ಮನವಿ ಮಾಡಿದರು.
ಸಮಾಜದ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ಜಂಟಿ ಕಾರ್ಯದರ್ಶಿ ಮಾಚೇಚೆಟ್ಟಿರ ಕುಸು ಕುಶಾಲಪ್ಪ, ಪೊಮ್ಮಕ್ಕಡ ಪರಿಷತ್ ಅಧ್ಯಕ್ಷ ನಿಶಾ ಮೇದಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.