ADVERTISEMENT

ಧರ್ಮದ ತಳಹದಿಯ ಮೇಲೆ ಮಹಿಳಾ ಸಬಲತೆ: ಸದಾಶಿವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 6:33 IST
Last Updated 23 ಆಗಸ್ಟ್ 2025, 6:33 IST
   

ಸುಂಟಿಕೊಪ್ಪ: ಧರ್ಮದ ತಳಹದಿಯ ಮೇಲೆ ಆರ್ಥಿಕ ಸಬಲತೆ ಹೊಂದುವ ವ್ಯವಸ್ಥೆಯನ್ನು ಮಹಿಳಾ ಸಬಲೀಕರಣದ ಮೂಲಕ ಧರ್ಮಸ್ಥಳ ಕ್ಷೇತ್ರ ಸಾಧಿಸಿದೆ ಎಂದು ಕೊಡ್ಲಿಪೇಟೆಯ ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಕೊಡಗರಹಳ್ಳಿಯ ನೇತಾಜಿ ಯುವಕ ಸಂಘದ ಸಭಾಂಗಣದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗುಡ್ಡೆಹೊಸೂರು ವಲಯ ಆಶ್ರಯದಲ್ಲಿ ಶುಕ್ರವಾರ ನಡೆದ ಕೌಟುಂಬಿಕ ಸೌಹಾರ್ದ ಹಾಗೂ ಗ್ರಾಮ ಸುಭಿಕ್ಷೆಗಾಗಿ ವಲಯಮಟ್ಟದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಧಾರ್ಮಿಕ ಉಪನ್ಯಾಸ ನೀಡಿದರು‌‌.

ಜನರಿಂದ, ಜನರಿಗಾಗಿ, ಜನರಿಗೋಸ್ಕರ ಗ್ರಾಮಾಭಿವೃದ್ಧಿ ಯೋಜನೆ ರೂಪುಗೊಂಡಿದ್ದು, ಮಾನಸಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಜನರನ್ನು ಎಚ್ಚರಗೊಳಿಸಿ ಧರ್ಮದ ತಳಹದಿಯ ಮೇರೆ ಆರ್ಥಿಕ ಸಬಲೀಕರಣದ ಮೂಲಕ ಬದುಕನ್ನು ಕಟ್ಟಿಕೊಳ್ಳುವುದು ಶ್ರೇಷ್ಠ ಸಾಧನೆಯೆಂದು ಸ್ವಾಮೀಜಿ ಬಣ್ಣಿಸಿದರು.

ADVERTISEMENT

ದೇಶವು ಎಲ್ಲ ರೀತಿಯಲ್ಲೂ ಪ್ರಗತಿ ಹೊಂದುತ್ತಿರುವ ದೇಶವಾಗಿದ್ದು, ವಿಶ್ವಗುರು ಎಂಬ ಪಟ್ಟಕ್ಕೆ ಹತ್ತಿರವಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಬಾಹ್ಯ ಅನುಕೂಲಗಳನ್ನು ಪಡೆಯಬಹುದು. ಆದರೆ, ಅಂತರಂಗದಲ್ಲಿ ಶಾಂತಿ, ಸಮಾಧಾನ, ಆರೋಗ್ಯವನ್ನು ಹೊಂದಲು ಧರ್ಮ ಅಗತ್ಯ‌. ತಾಳ್ಮೆ, ತಾಯಿತನದ ಪ್ರತಿರೂಪವಾಗಿರುವ ಮಹಿಳೆಯರು ಆರ್ಥಿಕ ಸಬಲೀಕರಣ ಆಡಳಿತ ರಂಗದಲ್ಲಿ ಸಕ್ರಿಯವಾಗಿರುವುದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ.ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವ, ಸಂಘಟನಾ ಚತುರತೆ, ನಾಯಕತ್ವದ ಗುಣಗಳ ಕಾರಣ ಎಂದು ಸ್ವಾಮೀಜಿ ಬಣ್ಣಿಸಿದರು‌‌.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಂ.ಎಸ್.ಸುರೇಶ್ ಚಂಗಪ್ಪ ಅವರು, ತೊಟ್ಟಿಲನ್ನು ತೂಗುವ ಕೈ ಪ್ರಪಂಚ ಆಳಬಲ್ಲದು ಎಂಬುದನ್ನು ಮಾಜಿ ಪ್ರಧಾನಿ ಇಂಧಿರಾ ಗಾಂಧಿಯವರಿಂದ ಹಿಡಿದು ಇಂದಿನವರೆಗೆ ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ಜ್ವಲಂತ ಸಾಕ್ಷಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಮ್ಮ ಮುಂದಿದ್ದು, ಜನೋಪಯೋಗಿ ಮತ್ತು ಸಮಾಜಮುಖಿಯಾಗಿದ್ದು, ಕಾರ್ಯಕ್ರಮಗಳಿಗೆ ನಾವೆಲ್ಲರೂ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು.

ದಂತ ವೈದ್ಯ ಡಾ.ಶಶಿಕಾಂತ ರೈ ಮಾತನಾಡಿ, ಸನಾತನ ಧರ್ಮದ ಪರಿಕಲ್ಪನೆಯಲ್ಲಿ ನಾವಿದ್ದು, ಪ್ರತಿಯೊಬ್ಬರಿಗೂ ಅವರವರ ಧರ್ಮ ಶ್ರೇಷ್ಠ. ಧರ್ಮಗಳ ನಡುವೆ ಒಡಕನ್ನು ತಾರದೆ ಶಾಂತಿ, ಗೌರವ, ಸಹಬಾಳ್ವೆ ಪಾಲಿಸಬೇಕು ಎಂದರು.

ಕಂಬಿಬಾಣೆಯ ಕಮಲ ನೆಹರೂ ಮಹಿಳಾ ಮಂಡಳಿಯ ಅಧ್ಯಕ್ಷೆ ಪೂರ್ಣಿಮಾ ಪ್ರಭಾಕರ್ ಮಾತನಾಡಿದರು.

ಗ್ರಾಮಾಭಿವೃದ್ಧಿ ಯೋಜನೆಯ ಸುಜ್ಞಾನ ನಿಧಿ ವಿಚಾರಣೆಯ ಅಡಿಯಲ್ಲಿ ಹಲವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಸುಂಟಿಕೊಪ್ಪ ಅಪರಾಧ ವಿಭಾಗದ ಉಪ ನಿರೀಕ್ಷಕಿ ಕೆ.ಎಚ್.ಭಾರತಿ, ತೊಂಡೂರು ಬಸವೇಶ್ವರ ದೇವಸ್ಥಾನದ ಕಾರ್ಯದರ್ಶಿ ಕೆ.ಜಿ.ಶಿವನ್, ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರವೀಶ್, ಗುಡ್ಡೆಹೊಸೂರು ವಲಯದ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಕೆ.ಎಂ.ರಮೇಶ್, ಶಾಂತಿನಿಕೇತನ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಎಂ.ಬಿ.ಕವಿತ, ಸೋಮವಾರಪೇಟೆ ತಾಲ್ಲೂಕಿನ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷ ಜೀವನ್ ಕುಮಾರ್, ಕುಂದುಮೊಟ್ಟೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಅರುಣ್ ಪೂಜಾರಿ, ನೇತಾಜಿ ಯುವಕ ಸಂಘದ ಅಧ್ಯಕ್ಷ ಎಂ.ಸಿ.ಪೂಣ್ಣಚ್ಚ, ಪತ್ರಕರ್ತ ಬಿ.ಸಿ.ದಿನೇಶ್ ಹಾಗೂ ಸೇವಾ ಪ್ರತಿನಿಧಿ ಹೇಮಾವತಿ, ಮೇಲ್ವಿಚಾರಕ ಕೆ. ಯತೀಶ್, ವಿವಿಧ ಒಕ್ಕೂಟಗಳ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿಯ ನೇತಾಜಿ ಯುವಕ ಸಂಘದ ಸಭಾಂಗಣದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗುಡ್ಡೆಹೊಸೂರು ವಲಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕೌಟುಂಬಿಕ ಸೌಹಾರ್ಧತೆ ಹಾಗೂ ವಲಯ ಮಟ್ಟದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು.
ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿಯ ನೇತಾಜಿ ಯುವಕ ಸಂಘದ ಸಭಾಂಗಣದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗುಡ್ಡೆಹೊಸೂರು ವಲಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕೌಟುಂಬಿಕ ಸೌಹಾರ್ಧತೆ ಹಾಗೂ ವಲಯ ಮಟ್ಟದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.