ADVERTISEMENT

ಸಾಧನೆಗೆ ಶಿಸ್ತು ಮುಖ್ಯ: ಅಂತಾರಾಷ್ಟ್ರೀಯ ಕ್ರೀಡಾಪಟು ಮಾದಂಡ ತಿಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 7:41 IST
Last Updated 6 ಅಕ್ಟೋಬರ್ 2023, 7:41 IST
ವಿರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಸೂಪರ್ ೫ ಫುಟ್ಬಾಲ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಅಂತರರಾಷ್ಟ್ರೀಯ ರಗ್ಬಿ ಮಾಜಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿದರು.
ವಿರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಸೂಪರ್ ೫ ಫುಟ್ಬಾಲ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಅಂತರರಾಷ್ಟ್ರೀಯ ರಗ್ಬಿ ಮಾಜಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿದರು.   

ವಿರಾಜಪೇಟೆ: ‘ಸಾಧನೆ ಮಾಡಬೇಕಾದರೆ ಕ್ರೀಡಾಪಟುಗಳಲ್ಲಿ ಶಿಸ್ತು ಮುಖ್ಯ’ ಎಂದು ಅಂತಾರಾಷ್ಟ್ರೀಯ ರಗ್ಬಿ ಮಾಜಿ ಆಟಗಾರ ಹಾಗೂ ಪ್ರಗತಿ ಶಾಲೆಯ ಮುಖ್ಯಸ್ಥ ಮಾದಂಡ ತಿಮ್ಮಯ್ಯ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಸೂಪರ್ 5 ಫುಟ್ ಬಾಲ್ ಟೂರ್ನಿಗೆ ಗುರುವಾರ ಚಾಲನೆ‌ ನೀಡಿ ಮಾತನಾಡಿದರು.
‘ಪ್ರತಿಯೊಬ್ಬರಿಗೂ ಕಾಲೇಜು ಜೀವನ ಅತೀ ಮುಖ್ಯ. ಆಟಗಾರರು ಶಿಸ್ತು ಕಾಪಾಡುವುದರ ಮೂಲಕ ಆರೋಗ್ಯಕರ ಜೀವನ ನಡೆಸಬೇಕು. ಆಟದಲ್ಲಿ ಗೆಲ್ಲುವುದಕ್ಕಿಂತ ಪಾಲ್ಗೊಳ್ಳುವಿಕೆಯೇ ಅತೀ ಮುಖ್ಯ’ ಎಂದರು.

ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮದಲೈ ಮುತ್ತು ಮಾತನಾಡಿ, ‘ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿ ಕ್ರೀಡೆ ಮುಖ್ಯ.  ವಿದ್ಯಾರ್ಥಿಗಳು ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಬೇಕು. ಕ್ರೀಡಾಕೂಟಗಳು ಸಾಮರಸ್ಯ ಬೆಳೆಸುತ್ತವೆ’ ಎಂದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್ ಮಾತನಾಡಿ,‘ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸುದರ ಜೊತೆಗೆ ಬಾಂಧವ್ಯ ಬೆಸೆಯುತ್ತವೆ’ ಎಂದರು.

ವೇದಿಕೆಯಲ್ಲಿ ವಿರಾಜಪೇಟೆಯ ಪ್ರಕೃತಿ ಮಾರ್ಕೆಟಿಂಗ್‌‌‌ನ ಮೊಹಮ್ಮದ್ ಷರೀಫ್, ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮಾ, ದೈಹಿಕ ನಿರ್ದೇಶಕ ರಾಜ ರೈ ಇದ್ದರು.

ಉದ್ಘಾಟನಾ ಪಂದ್ಯವು ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆ ಹಾಗೂ ಪ್ರಗತಿ ಶಾಲಾ ವಿದ್ಯಾರ್ಥಿಗಳ ತಂಡಗಳ ನಡುವೆ ನಡೆಯಿತು. ಮೊದಲ ಪಂದ್ಯವು ಮಡಿಕೇರಿಯ ಎಫ್.ಎಂ.ಸಿ ಕಾಲೇಜು ಹಾಗೂ ಬೆಳ್ತಂಗಡಿಯ ಸೇಕ್ರೆಡ್ ಹಾರ್ಟ್ ಕಾಲೇಜುಗಳ ನಡುವೆ ನಡೆಯಿತು. ಎರಡು ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ಒಟ್ಟು 32 ತಂಡಗಳು ಭಾಗವಹಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.