ADVERTISEMENT

6,400 ಮಂದಿಗೆ ಅಂಗವಿಕಲರ ಚೀಟಿ; ಕೆ.ಜೆ.ವಿಮಲಾ

ಕೊಡಗು ಜಿಲ್ಲೆಯ 22 ಅಂಗವಿಕಲರಿಗೆ ಗಾಲಿ ಕುರ್ಚಿ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 4:26 IST
Last Updated 1 ಮಾರ್ಚ್ 2024, 4:26 IST
   

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ 6,400 ಮಂದಿಗೆ ಅಂಗವಿಕಲರ ಚೀಟಿ ವಿತರಿಸಲಾಗಿದೆ. ಸರ್ಕಾರದಿಂದ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ’ ಎಂದು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಕೆ.ಜೆ.ವಿಮಲಾ ತಿಳಿಸಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ, ರೋಟರಿ ಮಿಸ್ಟಿಹಿಲ್ಸ್, ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಹಾಗೂ ಜಿಲ್ಲಾ ಅಂಗವಿಕಲರ ಸಂಘದ ವತಿಯಿಂದ ನಗರದ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಕೊಡಗು ಜಿಲ್ಲೆಯ 22 ಅಂಗವಿಕಲರಿಗೆ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರದ ಜೊತೆಗೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿದಾಗ ಅಂಗವಿಕಲರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಹಕಾರಿಯಾಗಲಿದೆ ಎಂದರು.

ADVERTISEMENT

ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ‘ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಉತ್ತಮ ಗುಣಮಟ್ಟದ ಗಾಲಿಕುರ್ಚಿಗಳನ್ನು ವಿತರಿಸಲಾಗುತ್ತಿದೆ. ಇಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಇತರರಂತೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ರೆಡ್‍ಕ್ರಾಸ್ ಸಂಸ್ಥೆಯು ಅಗತ್ಯ ಸಹಕಾರ ನೀಡಲಿದೆ’ ಎಂದು ಹೇಳಿದರು.

ಹಲವು ಕಾರಣಗಳಿಂದ ಮನುಷ್ಯರಲ್ಲಿ ವಿಕಲತೆ ಉಂಟಾಗುತ್ತದೆ. ಆದ್ದರಿಂದ ಧೃತಿಗೆಡದೆ ಬದುಕು ಸವೆಸಬೇಕು. ಸವಾಲುಗಳನ್ನು ಎದುರಿಸಬೇಕು ಎಂದು ಹೇಳಿದರು.

ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ರತ್ನಾಕರ ರೈ ಮಾತನಾಡಿ, ‘ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಅಂಗವಿಕಲರಿಗೆ ಕೈಲಾದಷ್ಟು ಅಗತ್ಯ ಸಹಕಾರ ಕಲ್ಪಿಸಲಾಗುತ್ತದೆ. ಆ ನಿಟ್ಟಿನಲ್ಲಿ ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು’ ಎಂದರು.

ವಿಶೇಷಚೇತನರ ಜಿಲ್ಲಾ ಸಂಘದ ಅಧ್ಯಕ್ಷ ಮಹೇಶ್ವರ್ ಮಾತನಾಡಿ, ‘ಗಾಲಿಕುರ್ಚಿಗಳನ್ನು ಪಡೆದು ಮೂಲೆಗೆ ಎಸೆಯಬಾರದು. ಇಂತಹ ಸಾಧನ ಸಲಕರಣೆಗಳನ್ನು ಬಳಸಿಕೊಂಡು ಸಾಧ್ಯವಾದಷ್ಟು ಬದುಕುದೂಡಲು ಪ್ರಯತ್ನಿಸಬೇಕು’ ಎಂದರು.

ಸ್ವಾಮಿ ವಿವೇಕಾನಂದ ಯೂತ್ ಮೂವೆಮೆಂಟ್‍ನ ಖಜಾಂಜಿ ಡಾ.ಕೆ.ಎನ್.ಚಂದ್ರಶೇಖರ್ ಮಾತನಾಡಿ, ‘ಸ್ವಾಮಿ ವಿವೇಕಾನಂದ ಯೂತ್ ಮೂವೆಮೆಂಟ್‍ನಲ್ಲಿ 850ಕ್ಕೂ ಹೆಚ್ಚು ಜನರು ಕರ್ತವ್ಯ ನಿರ್ವಹಿಸುತ್ತಿದ್ದು, ಅಂಗವಿಕಲರು ಹಾಗೂ ಇತರರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಮುಂದಾಗಲಾಗಿದೆ’ ಎಂದು ಹೇಳಿದರು.

ಪ್ರತಿ ಗಾಲಿ ಕುರ್ಚಿಗೆ ₹ 25,410 ವೆಚ್ಚ ತಗುಲುವಂತಹ 10 ಗಾಲಿಕುರ್ಚಿಗಳು ಮತ್ತು ₹ 17 ಸಾವಿರ ವೆಚ್ಚದ 19 ಗಾಲಿಕುರ್ಚಿಗಳನ್ನು ಕೊಡಗು ಮತ್ತು ಹುಣಸೂರು ವಿಭಾಗಕ್ಕೆ ಸೇರಿದ 29 ಅಂಗವಿಕಲರಿಗೆ ವಿತರಿಸಲಾಯಿತು.

ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಚ್.ಆರ್.ಮುರಳೀಧರ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಬೋರಯ್ಯ, ವೆಂಕಚಾರಿ, ಅಭಿಷೇಕ್, ಸುನಿತಾ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.