ಮಡಿಕೇರಿ: ಮುಂಗಾರು ಸನ್ನಿಹಿತವಾಗುತ್ತಿದ್ದಂತೆ ಜಿಲ್ಲಾಡಳಿತವೂ ತನ್ನ ಸಿದ್ಧತಾ ಕಾರ್ಯಗಳನ್ನು ಚುರುಕುಗೊಳಿಸಿದೆ.
ಒಂದೆಡೆ ಹಾರಂಗಿ ಜಲಾಶಯದಲ್ಲಿ ಅಣಕು ರಕ್ಷಣಾ ಕಾರ್ಯಚರಣೆ ನಡೆಸಿದ್ದರೆ, ಮತ್ತೊಂದೆಡೆ ಪ್ರಕೃತಿ ವಿಕೋಪ ಸಂಭವಿಸಬಹುದಾದ ಪ್ರದೇಶಗಳನ್ನೂ ಗುರುತಿಸಿದೆ. ಅಲ್ಲಿ ಸಮೀಪದಲ್ಲಿಯೇ ಸುರಕ್ಷಿತ ಸ್ಥಳಗಳನ್ನು ಗುರುತಿಸಿ ಕಾಳಜಿ ಕೇಂದ್ರ ತೆರೆಯಲು ಸ್ಥಳಗಳನ್ನು ನಿಗದಿಪಡಿಸಿದೆ. ತೊಂದರೆಗೆ ಒಳಗಾಗುವ ಕುಟುಂಬಗಳನ್ನು ಗುರುತಿಸಿರುವುದು ಮಾತ್ರವಲ್ಲ ಜನಸಂಖ್ಯೆಯನ್ನೂ ಅಂದಾಜಿಸಿ, ಪಟ್ಟಿ ಸಿದ್ಧಪಡಿಸಿಕೊಂಡಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ.
ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಪ್ರವಾಹ ಸಂಭವಿಸಬಹುದಾದ ಒಟ್ಟು 102 ಸ್ಥಳಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಇಲ್ಲಿ ವಾಸವಿರುವ ಒಟ್ಟು 2,953 ಕುಟುಂಬಗಳನ್ನೂ ಗುರುತಿಸಲಾಗಿದ್ದು, ಇವರಿಗೆ ತಾತ್ಕಾಲಿಕ ಆಶ್ರಯ ನೀಡಲು ಒಟ್ಟು 90 ಕಾಳಜಿ ಕೇಂದ್ರಗಳನ್ನು ತೆರೆಯಲು ಈಗಾಗಲೇ ಸ್ಥಳ ಗುರುತಿಸಿದೆ.
ಮಡಿಕೇರಿ ನಗರ ಸೇರಿದಂತೆ ತಾಲ್ಲೂಕಿನಲ್ಲೇ ಅತ್ಯಧಿಕ 44 ಜನವಸತಿ ಪ್ರದೇಶಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸುವ ಸಾಧ್ಯತೆ ಇದೆ ಎಂದು ಆ ಪ್ರದೇಶಗಳನ್ನು ಗುರುತಿಸಲಾಗಿದೆ. ಇನ್ನುಳಿದಂತೆ, ಕುಶಾಲನಗರದಲ್ಲಿ 30, ವಿರಾಜಪೇಟೆಯಲ್ಲಿ 18 ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ 10 ಜನವಸತಿ ಪ್ರದೇಶಗಳನ್ನು ಗುರುತಿಸಿ, ಅಗತ್ಯ ಸಿದ್ಧತಾ ಕಾರ್ಯಗಳನ್ನು ನಡೆಸಿದೆ.
ಯಾವುದೇ ರೀತಿಯ ವಿಕೋಪಗಳು ಸಂಭವಿಸಿದ್ದಲ್ಲಿ, ಜನ, ಜಾನುವಾರು, ಹಾಗೂ ಆಸ್ತಿ-ಪಾಸ್ತಿ ರಕ್ಷಣೆ ಸಂಬಂಧ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವ ಬಗ್ಗೆ ಹಾರಂಗಿ ಜಲಾಶಯದಲ್ಲಿ ಗುರುವಾರ ಅಣಕು ಪ್ರದರ್ಶನ ನಡೆಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ನಡೆದ ಅಣಕು ಕಾರ್ಯಾಚರಣೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ನಡೆದ ಅಣಕು ಕಾರ್ಯಾಚರಣೆಯಲ್ಲಿ ಕಂದಾಯ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಗ್ನಿ ಶಾಮಕ, ಗೃಹರಕ್ಷಕ ದಳ, ಬೃಹತ್ ನೀರಾವರಿ ಹೀಗೆ ವಿವಿಧ ಇಲಾಖೆಗಳ 200 ಕ್ಕೂ ಹೆಚ್ಚು ಸಿಬ್ಬಂದಿಗಳು ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಯಾವುದೇ ರೀತಿಯ ವಿಕೋಪ ಸಂದರ್ಭದಲ್ಲಿ ಜನರನ್ನು ಸಂರಕ್ಷಿಸಿ ಪ್ರಥಮ ಚಿಕಿತ್ಸೆ ನೀಡುವುದು, ಕಾರ್ಯಾಚರಣೆ ಸಂದರ್ಭದಲ್ಲಿ ತಮ್ಮ ರಕ್ಷಣೆ ಜೊತೆಗೆ ವಿಕೋಪಕ್ಕೆ ತುತ್ತಾದವರನ್ನು ರಕ್ಚಿಸುವುದು ಅಣಕು ಕಾರ್ಯಾಚರಣೆಯಲ್ಲಿ ಗಮನ ಸೆಳೆಯಿತು.
ಮಡಿಕೇರಿ ಡಿವೈಎಸ್‍ಪಿ ಸೂರಜ್, ತಹಶೀಲ್ದಾರ್ ಕಿರಣ್ ಗೌರಯ್ಯ, ಕೃಷ್ಣಮೂರ್ತಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅನನ್ಯ ವಾಸುದೇವ್, ಅಗ್ನಿಶಾಮಕ ಅಧಿಕಾರಿ ರಾಜೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಇಂದೂಧರ, ಗೃಹರಕ್ಷಕ ದಳದ ತರಬೇತಿದಾರರಾದ ಅಕ್ಷಯ್, ಹಾರಂಗಿ ಜಲಾಶಯ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ಕಂದಾಯ, ಪೊಲೀಸ್, ಅಗ್ನಿಶಾಮಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ‘ಯಾವುದೇ ರೀತಿಯ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಜನ ಜಾನುವಾರು ಆಸ್ತಿ ಪಾಸ್ತಿ ರಕ್ಷಣೆ ಮಾಡುವುದು ಅತೀ ಮುಖ್ಯವಾಗಿದೆ. ಅದಕ್ಕಾಗಿ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ’ ಎಂದು ಹೇಳಿದರು. ವಿಕೋಪ ಎದುರಿಸುವಲ್ಲಿ ಸರ್ಕಾರದ ಮಾರ್ಗಸೂಚಿಯಂತೆ (ಎಸ್‍ಒಪಿ) ಕಾರ್ಯನಿರ್ವಹಿಸುವುದು ಸಹ ಅತೀ ಮುಖ್ಯ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ ‘ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ ಕಾರ್ಯಾಚರಣೆ ಮಾಡುವವರು ತಮ್ಮ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಇತರರ ರಕ್ಷಣೆ ಮಾಡುವುದು ಅತೀ ಮುಖ್ಯ. ಯಾವುದೇ ಕಾರಣಕ್ಕೂ ಗಾಬರಿಗೆ ಒಳಗಾಗದೆ ರಕ್ಷಣೆ ಕಾರ್ಯದಲ್ಲಿ ಆಯಾಯ ಸಂದರ್ಭದಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.