ADVERTISEMENT

ಸಾಹಿತ್ಯ ನಮ್ಮ ಜೀವನದ ಒಂದು ಅಂಗವಾಗಲಿ: ಕೇಶವ ಕಾಮತ್

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 4:27 IST
Last Updated 17 ಸೆಪ್ಟೆಂಬರ್ 2025, 4:27 IST
ಎಸ್ಎಸ್ಎಫ್ ವತಿಯಿಂದ ನಾಪೋಕ್ಲು ಸಮೀಪದ ಕಡಂಗ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಕಮರುದ್ದಿನ್ ಅನ್ವಾರಿ ಸಖಾಫಿ ಮಾತನಾಡಿದರು 
ಎಸ್ಎಸ್ಎಫ್ ವತಿಯಿಂದ ನಾಪೋಕ್ಲು ಸಮೀಪದ ಕಡಂಗ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಕಮರುದ್ದಿನ್ ಅನ್ವಾರಿ ಸಖಾಫಿ ಮಾತನಾಡಿದರು    

ನಾಪೋಕ್ಲು: ‘ಸಾಹಿತ್ಯ ಯಾವುದೇ ಧರ್ಮಕ್ಕೆ ಸೀಮಿತವಾದದಲ್ಲ, ವಿದ್ಯಾರ್ಥಿಗಳಿಗೆ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಎಸ್ಎಸ್ಎಫ್ ಸಂಘಟನೆ ಮಾಡುತ್ತಿದೆ. ಸಾಹಿತ್ಯ ನಮ್ಮ ಜೀವನದ ಒಂದು ಅಂಗವಾಗಿರಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್ ಹೇಳಿದರು.

ಎಸ್ಎಸ್ಎಫ್ ವತಿಯಿಂದ ಸಮೀಪದ ಕಡಂಗ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ವನ್ಯ ಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಮಾತನಾಡಿ, ‘ಪ್ರತಿಯೊಬ್ಬನಲ್ಲಿ ಒಬ್ಬ ಸಾಹಿತಿ ಇರುತ್ತಾನೆ.ವಿದ್ಯಾರ್ಥಿಗಳಿಗೆ ಸಾಹಿತ್ಯದ ಅರಿವು ಪ್ರಾಥಮಿಕ ಶಿಕ್ಷಣದಲ್ಲಿ ಅಗತ್ಯ ಇದೆ. ಉತ್ತಮ ಸಮಾಜ ನಿರ್ಮಾಣದ ಹಿತ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಆರಂಭದ ತರಗತಿಯಿಂದಲೇ ಸಾಹಿತ್ಯವನ್ನು ತರಲು ಶಿಕ್ಷಣ ಸಚಿವಾಲಯಗಳು ಪ್ರಯತ್ನ ಪಡಬೇಕು’ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮಾತನಾಡಿ, ‘ಇಂದಿನ ಕಾಲದಲ್ಲಿ ಯುವಕರ ಮನಸ್ಸಿನಲ್ಲಿ ಜಾತಿಯ ವಿಷ ಬೀಜ ಬಿತ್ತುತ್ತಿರುವುದು ಖೇದಕರ. ಇಡೀ ಕರ್ನಾಟಕದ ಜನರು ಮೆಚ್ಚುವಂತಹ ಕೆಲಸ ಎಸ್ಎಸ್ಎಫ್ ಸಂಘಟನೆ ಮಾಡುತ್ತಿದೆ’ ಎಂದರು.

ಮಾದಕ ವ್ಯಸನದ ಕುರಿತು ಜನಜಾಗೃತಿ ಕುರಿತು ಆಯೋಜಿಸಿದ ಕಾರ್ಯಕ್ರಮದಲ್ಲಿ ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್ ಮಾತನಾಡಿದರು. ಎಸ್ ಎಸ್ ಎಫ್ 13ನೇ ಆವೃತ್ತಿಯ ಸಾಹಿತ್ಯೋತ್ಸವದ ಪ್ರಯುಕ್ತ ಕಡಂಗ ಪಟ್ಟಣದಲ್ಲಿ ನಿರ್ಮಿಸಿದ 13 ದ್ವಜ ಕಂಬದಲ್ಲಿ ಧ್ವಜಾರೋಹಣವನ್ನು ಸಂಘ ಕುಟುಂಬ ಹಾಗೂ ಸಂಘಟನೆಯ ಹಿರಿಯ ನೇತಾರರು ನೆರವೇರಿಸಿದರು.

ಜಾತಿ ಧರ್ಮಗಳನ್ನು ಮೀರಿದ ಭಾವೈಕ್ಯದ ಭಾವನೆ ಸಾಹಿತ್ಯವಾಗಿದೆ. ಯಾವುದೇ ಸಮುದಾಯಗಳ ಅಥವಾ ದೇಶ ಸಂಸ್ಕೃತಿಯನ್ನು ಪಸರಿಸಲು ಇರುವ ಒಂದೇ ಆಯುಧ; ಅದು ಸಾಹಿತ್ಯ
ಸಂಕೇತ್ ಪೂವಯ್ಯ, ಕರ್ನಾಟಕ ರಾಜ್ಯ ವನ್ಯ ಜೀವಿ ಮಂಡಳಿಯ ಸದಸ್ಯ

ಎಸ್ ಎಸ್ ಎಫ್ ಜಿಲ್ಲಾ ಘಟಕದ ಅಧ್ಯಕ್ಷ ಕಮರುದ್ದಿನ್ ಅನ್ವಾರಿ ಸಖಾಫಿ, ಕೋಶಾಧಿಕಾರಿ ನವಾಜ್ ಮದನಿ, ಪ್ರಧಾನ ಕಾರ್ಯದರ್ಶಿ ಜುನೈದ್, ಕಡಂಗ ಬದ್ರಿಯಾ ಮಸೀದಿಯ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿಯ ಚೆರ್ಮೆನ್ ಉಸ್ಮಾನ್, ಕಾರ್ಯದರ್ಶಿ ರಾಶಿದ್, ಎಸ್ ಎಸ್ ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಇದ್ದರು.

ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಸೆಪ್ಟೆಂಬರ್ 26ರಿಂದ 28ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ತುರ್ಕಳಿಕೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಸ್ಎಸ್ಎಫ್ ವತಿಯಿಂದ ನಾಪೋಕ್ಲು ಸಮೀಪದ ಕಡಂಗ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಎಸ್ಎಸ್ಎಫ್ ಸಂಘಟನೆಯ ಪ್ರಮುಖರು ನೆರವೇರಿಸಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.