ನಾಪೋಕ್ಲು: ಇಲ್ಲಿನ ಹಿಂದೂ ಮಲಯಾಳಿ ಸಂಘದಿಂದ ಭಾನುವಾರ ಸಮೀಪದ ಹಳೆ ತಾಲ್ಲೂಕಿನ ಕೆಪಿಎಸ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಈಶ್ವರ ಇಗ್ಗುತ್ತಪ್ಪ-ಬಿ ತಂಡ ಪ್ರಥಮ ಸ್ಥಾನಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಪುರುಷರಿಗಾಗಿ ಆಯೋಜಿಸಲಾಗಿರುವ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಮೊದಲ ಬಹುಮಾನ ₹33,333 ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಯಿತು. ದ್ವಿತೀಯ ಸ್ಥಾನವನ್ನು ಈಶ್ವರ ಇಗ್ಗುತ್ತಪ್ಪ-ಎ ತಂಡ ಗಳಿಸಿತು. ₹22,222 ನಗದು ಹಾಗೂ ಆಕರ್ಷಕ ಟ್ರೋಫಿ ಪಡೆಯಿತು. ತೃತೀಯ ಸ್ಥಾನ ಬೇಗೂರು ಮಹಾ ವಿಷ್ಣು ತಂಡದ ಪಾಲಾಯಿತು. ₹11,111 ನಗದು ಹಾಗೂ ಆಕರ್ಷಕ ಟ್ರೋಫಿ ಲಭಿಸಿತು.
ಮಹಿಳಾ ವಿಭಾಗದಲ್ಲಿ ಬಲಮುರಿಯ ಮಹದೇವ ಸ್ಪೋರ್ಟ್ಸ್ ಕ್ಲಬ್ ತಂಡ ಪ್ರಥಮ ಸ್ಥಾನ ಗಳಿಸಿತು. ದ್ವಿತೀಯ ಸ್ಥಾನ ನಾಪೋಕ್ಲು ಭಗವತಿ ತಂಡದ ಪಾಲಾಯಿತು. ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ₹11,111 ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ಎರಡನೇ ಸ್ಥಾನ ಪಡೆದ ತಂಡಕ್ಕೆ ₹5,555 ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಯಿತು.
ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಮಹಿಳಾ ಘಟಕದ ವತಿಯಿಂದ ನಡೆದ ತಿರುವಾದಿರ ನೃತ್ಯ ಗಮನ ಸೆಳೆಯಿತು.
ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಅನಿಲ್ ಕೆ.ಕೆ, ಹಿಂದೂ ಮಲಿಯಾಳಿ ಸಂಘ ಕೊಡಗು ಜಿಲ್ಲಾ ಅಧ್ಯಕ್ಷ ವಿಜಯ, ಎಸ್ಎನ್‌ಡಿಪಿ ಜಿಲ್ಲಾಧ್ಯಕ್ಷ ಲೋಕೇಶ್, ಹಿಂದೂ ಮಲಯಾಳಿ ಸಂಘ ಮಡಿಕೇರಿ ತಾಲೂಕಿನ ಅಧ್ಯಕ್ಷ ಧರ್ಮೇಂದ್ರ, ಮೂರ್ನಾಡು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಬಾಬು, ಮಡಿಕೇರಿ ಹಿಂದು ಮಲಯಾಳಿ ಸಂಘದ ಗೌರವಾಧ್ಯಕ್ಷ ರಮೇಶ್, ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಮಹಿಳಾ ಅಧ್ಯಕ್ಷೆ ಸುಮಿತ್ರ ವಿನೋದ್, ಹಿಂದೂ ಮಲಯಾಳಿ ಸಂಘದ ಖಜಾಂಚಿ ವಿಶ್ವನಾಥ್, ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರದೀಪ್, ನಾಪೋಕ್ಲು ಎಸ್ಎನ್‌ಡಿಪಿ ಅಧ್ಯಕ್ಷ ಟಿ.ಸಿ.ಲವ, ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ, ಮಡಿಕೇರಿ ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಪೂವಯ್ಯ, ನಾಪೋಕ್ಲು ಶಕ್ತಿ ಕೇಂದ್ರದ ಅಧ್ಯಕ್ಷ ಅಂಬಿ ಕಾರಿಯಪ್ಪ, ಕಾಫಿ ಬೆಳೆಗಾರ ಎ.ಎಂ.ರತ್ನ ಪೆಮ್ಮಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಬೇಬಾ, ಹಿಂದೂ ಮಲಯಾಳಿ ಸಂಘದ ಸಲಹೆಗಾರರಾದ ವಿನಿಲ್, ರಘು ಅಜ್ಜಿಮುಟ್ಟ ಪಾಲ್ಗೊಂಡಿದ್ದರು.
'ಸಮಾಜ ಒಗ್ಗೂಡಿಸುವಲ್ಲಿ ಕ್ರೀಡೆ ಸಹಕಾರಿ’:
ಸಮಾರೋಪ ಸಮಾರಂಭದಲ್ಲಿ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ ಮಾತನಾಡ ಸಮಾಜವನ್ನು ಒಗ್ಗೂಡಿಸುವ ವಿಶೇಷ ಪ್ರಯತ್ನವನ್ನು ನಾನ ಕ್ರೀಡೆ ಆಯೋಜಿಸುವುದರ ಮೂಲಕ ಸಂಘ ಸಂಸ್ಥೆಗಳು ಮಾಡುತ್ತಿವೆ. ಹಗ್ಗ ಜಗ್ಗಾಟ ಸ್ಪರ್ಧೆ ಆಯೋಜಿಸುವುದರ ಮೂಲಕ ಹಿಂದೂ ಮಲಯಾಳಿ ಸಂಘ ಸಮಾಜದ ಒಗ್ಗಟ್ಟಿಗೆ ಕಾರಣವಾಗಿದೆ ಎಂದರು.
ನಾಲ್ಕು ಸಾವಿರ ವರ್ಷಗಳ ಹಿಂದೆ ವಿದೇಶಗಳಲ್ಲಿ ಪ್ರಾರಂಭಗೊಂಡ ಹಗ್ಗಜಗ್ಗಾಟ ಸ್ಪರ್ಧೆಯು ಭಾರತಕ್ಕೆ ಕಾಲಿಟ್ಟಿತು. ಇದೀಗ ನಮ್ಮ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಒಂದಾಗಿ ಹಗ್ಗಜಗ್ಗಾಟ ಸ್ಪರ್ಧೆ ಸೇರ್ಪಡೆಗೊಂಡಿದೆ. ಇದನ್ನು ಆಯೋಜಿಸುವುದರ ಮೂಲಕ ಭಾರತೀಯರನ್ನು ಒಗ್ಗೂಡಿಸುವಂತಹ ಕೆಲಸವನ್ನು ಸಂಘ ಮಾಡಿದೆ ಎಂದು ಶ್ಲಾಘಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿ ಸಂಘದ ಸಮುದಾಯ ನಿರ್ಮಾಣಕ್ಕೆ ಸರ್ಕಾರಿ ಜಾಗ ಲಭ್ಯವಿಲ್ಲದ ಕಾರಣ ನಿವೇಶನಕ್ಕಾಗಿ ಜಾಗ ಖರೀದಿ ಮಾಡಬೇಕಾದ ಅವಶ್ಯಕತೆ ಇದೆ. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕು. ನಿವೇಶನ ಖರೀದಿಸಲು ಸಂಘಕ್ಕೆ ₹1 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.