ADVERTISEMENT

ಜಿಲ್ಲಾ ಮಹಿಳಾ ಬರಹಗಾರರ ಸಂಘ ಅಸ್ತಿತ್ವಕ್ಕೆ

ಪ್ರತಿ ಜಿಲ್ಲೆಯಲ್ಲೂ ಸಂಘ ಸ್ಥಾಪಿಸಲು ಲೇಖಕಿ ಕವಿತಾ ರೈ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 5:33 IST
Last Updated 15 ಸೆಪ್ಟೆಂಬರ್ 2022, 5:33 IST
ಜಿಲ್ಲಾ ಮಹಿಳಾ ಬರಹಗಾರರ ಸಂಘವನ್ನು ಜ್ಯೋತಿಯನ್ನು ಬೆಳಗಿಸುವ ಮೂಲಕ ಬುಧವಾರ ಉದ್ಘಾಟಿಸಲಾಯಿತು
ಜಿಲ್ಲಾ ಮಹಿಳಾ ಬರಹಗಾರರ ಸಂಘವನ್ನು ಜ್ಯೋತಿಯನ್ನು ಬೆಳಗಿಸುವ ಮೂಲಕ ಬುಧವಾರ ಉದ್ಘಾಟಿಸಲಾಯಿತು   

ಮಡಿಕೇರಿ: ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ ಬುಧವಾರ ಅಸ್ತಿತ್ವಕ್ಕೆ ಬಂದಿತು. ಲೇಖಕಿ ಕವಿತಾ ರೈ ಇಲ್ಲಿನ ಪತ್ರಿಕಾಭವನದಲ್ಲಿ ಸಂಘವನ್ನು ಉದ್ಘಾಟಿಸಿ, ‘ಪ್ರತಿ ಜಿಲ್ಲೆಯಲ್ಲೂ ಇಂತಹ ಸಂಘಗಳು ಸ್ಥಾಪನೆಯಾಗಬೇಕು’ ಎಂದು ಹೇಳಿದರು

ಕೊಡಗಿನಲ್ಲಿ ಈ ಸಂಘಕ್ಕೆ ವಿಸ್ತಾರವಾದ ಆಯಾಮ ಇದೆ. ಕನ್ನಡ ಮಾತ್ರವಲ್ಲ ಕೊಡವ, ಅರೆಭಾಷೆ, ಬ್ಯಾರಿ, ತುಳು ಎಲ್ಲ ಭಾ಼ಷೆಗಳ ಸಾಹಿತಿಗಳಿದ್ದಾರೆ. ಅವರೆಲ್ಲರನ್ನು ಸೇರಿಸಿ ಸಂಘವನ್ನು ಗಟ್ಟಿಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾಗಿ ಎಂ.ಪಿ.ಕೇಶವ ಕಾಮತ್ ಅವರು ಆನ್‌ಲೈನ್‌ನಲ್ಲಿ ನಡೆಸಿದ 25 ದಿನಗಳ ಗೀತ ಗಾಯನ ಕಾರ್ಯಕ್ರಮವನ್ನು ನೆನಪಿಸಿಕೊಂಡರು.

ADVERTISEMENT

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ‘ಮಹಿಳೆ ಲೇಖಕಿಯಾಗಿದ್ದರೆ ಅವರ ಮನೆ ಮತ್ತು ಸುತ್ತಮುತ್ತಲ ಪ್ರದೇಶವೂ ಕೂಡ ಸಾಹಿತ್ಯಿಕ ವಲಯವಾಗಿರುತ್ತದೆ. ಅದರಲ್ಲೂ ಮಹಿಳಾ ಶಿಕ್ಷಕಿ ಸಾಹಿತಿಯಾಗಿದ್ದರೆ ಆ ಶಾಲೆಯ ವಿದ್ಯಾರ್ಥಿಗಳು ಸಹ ಸಾಹಿತ್ಯಿಕ ಪರಸರದಲ್ಲಿರುತ್ತಾರೆ. ಸಾಹಿತ್ಯ ಪರಿಷತ್ತು ಸಾಹಿತ್ಯ ಸಂಬಂಧಿತ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿದೆ ಎಂದರು.

ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಸಂಘದ ಬೆಳವಣಿಗೆಗೆ ಎಲ್ಲ ಸದಸ್ಯರೂ ಕೈ ಜೋಡಿಸಬೇಕು. ಹೆಸರಿಗೆ ಮಾತ್ರ ಪದಾಧಿಕಾರ ಎನ್ನುವ ನೀತಿಬಿಟ್ಟು ಕೆಲಸ ಮಾಡಬೇಕು’ ಹೇಳಿದರು.

ಸಂಘದ ಅಧ್ಯಕ್ಷೆ ಶೋಭಾ ಸುಬ್ಬಯ್ಯ ಅವರ ಅಧ್ಯಕ್ಷಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ಅಂಬೇಕಲ್ ನವೀನ್, ಮಡಿಕೇರಿ ನಗರಸಭೆಯ ನಿವೃತ್ತ ಆಯುಕ್ತರಾದ ಪುಷ್ಪಾವತಿ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ, ಸಂಘದ ಕಾರ್ಯದರ್ಶಿ ರೇವತಿ ರಮೇಶ್, ಉಪಾಧ್ಯಕ್ಷೆ ಡಾ.ಕಾವೇರಿ ಪ್ರಕಾಶ್, ಲಲಿತಾ ಅಯ್ಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.