ಮಡಿಕೇರಿ: ‘ಮುಂಬರುವ ಗಣೇಶೋತ್ಸವದ ವೇಳೆ ನಿಯಮ ಮೀರಿದ ಅಬ್ಬರದ ಡಿ.ಜೆ ಸಂಗೀತ ಸೇರಿದಂತೆ ನಿಯಮಗಳನ್ನು ಮೀರಿದರೆ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಕೆ ನೀಡಿದರು.
ಇಲ್ಲಿನ ಕಾವೇರಿ ಹಾಲ್‌ನಲ್ಲಿ ಬುಧವಾರ ನಡೆದ ಗೌರಿ, ಗಣೇಶೋತ್ಸವ ಸಮಿತಿಗಳೊಂದಿಗಿನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಗಣೇಶೋತ್ಸವ, ದಸರೆ ಬಂದಾಗ ಹಾಕಲಾಗುವ ಅಬ್ಬರದ ಡಿ.ಜೆ ಸಂಗೀತದಿಂದ ರೋಗಿಗಳಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ, ವೃದ್ಧರಿಗೆ ತೀವ್ರತರವಾದ ತೊಂದರೆಯಾಗುತ್ತದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
‘ಇಲ್ಲಿ ಉತ್ಸವ ನಡೆಯುತ್ತದೆ ಎಂದು ರೋಗಿಗಳು, ಗರ್ಭಿಣಿಯರು, ಮಕ್ಕಳು, ವೃದ್ಧರು ಮನೆ ಬಿಟ್ಟು ಬೇರೆಡೆ ಹೋಗಬೇಕಾ’ ಎಂದೂ ಪ್ರಶ್ನಿಸಿದರು.
ಇಂತಹ ಘಟನೆಗಳು ಸಾಕಷ್ಟು ನಡೆದಿವೆ. ನವಜಾತ ಶಿಶುಗಳ ಮೇಲೆ ಈ ಅಬ್ಬರದ ಡಿ.ಜೆ ಸಂಗೀತ ಯಾವ ಪರಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಒಮ್ಮೆಯಾದರೂ ಯೋಚಿಸಿ ಎಂದರು.
ಬೆಂಗಳೂರಿನಲ್ಲಿ ಈಚೆಗೆ ನಡೆದ ಕಾಲ್ತುಳಿತ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಇಂತಹ ಘಟನೆಗಳು ಇಲ್ಲಿ ಸಂಭವಿಸದಂತೆ ಎಚ್ಚರ ವಹಿಸಬೇಕು. ಮೆರವಣಿಗೆ ಸಾಗುವಾಗ ವಿದ್ಯುತ್ ತಂತಿಗಳ ಮೇಲೆ ಗಮನ ಇರಿಸಬೇಕು ಎಂದರು.
‘ಗಣೇಶೋತ್ಸವದಲ್ಲಿ ರಸ್ತೆ ಸಂಚಾರ ಬಂದ್ ಮಾಡುವುದಕ್ಕೆ ಅವಕಾಶ ಕೊಡುವುದಿಲ್ಲ’ ಎಂದ ಅವರು, ‘ಯಾರಾದರೂ ತುರ್ತು ಚಿಕಿತ್ಸೆಗೆ ಹೋಗಬೇಕಿರುತ್ತದೆ. ಆಗ ಅವರೇನು ಮಾಡಬೇಕು’ ಎಂದೂ ಪ್ರಶ್ನಿಸಿದರು.
ಗಣೇಶೋತ್ಸವಕ್ಕಾಗಿ ಬಲವಂತದ ಚಂದಾ ವಸೂಲಿಗೆ ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇಂತಹ ದೂರುಗಳು ಬಂದರೆ ಪ್ರಕರಣ ದಾಖಲಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದರು.
‘ದೇವರ ಉತ್ಸವ ಮಾಡುವಾಗ ಮದ್ಯಸೇವಿಸಿ ಮನಸೋಇಚ್ಛೆ ಕುಣಿಯುವಂತಹ ಸಂಸ್ಕೃತಿಯನ್ನು ಬಿಡಬೇಕು. ಇಂದು ನಾವು ನಡೆದುಕೊಳ್ಳುವ ರೀತಿಯನ್ನು ಮಕ್ಕಳು ಅನುಸರಿಸುತ್ತಾರೆ. ಹಾಗಾಗಿ, ನಿಯಮದ ಚೌಕಟ್ಟಿನೊಳಗೆ, ಯಾರಿಗೂ ತೊಂದರೆಯಾಗದ ರೀತಿಯಲ್ಲಿ, ಭಕ್ತಿಭಾವದಿಂದ ಉತ್ಸವ ಆಚರಿಸಬೇಕು’ ಎಂದು ಕಿವಿಮಾತು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಅವರು ನಿಯಮಗಳನ್ನು ಹೇಳಿದರು.
‘ಕೊಡಗಿನ ಪ್ರಶಾಂತ ವಾತಾವರಣಕ್ಕಾಗಿ ಪ್ರವಾಸಿಗರು ಬರುತ್ತಾರೆ. ಎಲ್ಲರೂ ಈ ಪ್ರಶಾಂತತೆಯನ್ನು ಕಾಪಾಡಿಕೊಳ್ಳಬೇಕು. ಈಗಾಗಲೇ ಮಾಲಿನ್ಯದಿಂದಾಗಿ ಪ್ರಕೃತಿಯೇ ತಿರುಗಿ ಬಿದ್ದಿದೆ. ಭಾರೀ ಶಬ್ದದಿಂದ ಸಮಸ್ಯೆಯಾಗುತ್ತದೆ. ಇವೆಲ್ಲವನ್ನೂ ನಾವೇ ಹತೋಟಿಗೆ ತರಬೇಕು’ ಎಂದು ಸಲಹೆ ನೀಡಿದರು.
ರಸ್ತೆಯಲ್ಲಿ, ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶ್ ವಿಗ್ರಹ ಪ್ರತಿಷ್ಠಾಪಿಸಬಾರದು, ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯಬೇಕು, ಸಾರ್ವಜನಿಕ ಕಟ್ಟಡದ ಮೇಲೆ ಅನುಮತಿ ಇಲ್ಲದೇ ಬ್ಯಾನರ್ ಹಾಕುವಂತಿಲ್ಲ, ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಧ್ವನಿವರ್ಧಕ ಬಳಸುವಂತಿಲ್ಲ, ಮಾಲಿನ್ಯಕಾರಕ ಹಾಗೂ ಅಬ್ಬರದ ಪಟಾಕಿ ಹೊಡೆಯುವಂತಿಲ್ಲ ಸೇರಿದಂತೆ ಹಲವು ನಿಯಮಗಳನ್ನು ವಾಚಿಸಿದರು.
ಡಿವೈಎಸ್ಪಿ ಸೂರಜ್, ತಹಶೀಲ್ದಾರ್ ಶ್ರೀಧರ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್ ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಸುನಿತಾ, ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ಸಬ್‌ಇನ್‌ಸ್ಪೆಕ್ಟರ್ ಚಂದ್ರಶೇಖರ್, ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ್ ಭಂಡಾರಿ, ಸಾರಿಗೆ ಪ್ರಾಧಿಕಾರದ ಅಧಿಕಾರಿ ಮೋಹನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.